ಪೆಪ್ಸಿ, ಕೋಕಾ ಕೋಲಾಗೆ ಟಕ್ಕರ್‌ ಕೊಡಲಿದೆ ರಿಲಯನ್ಸ್‌ ಒಡೆತನದ ಕ್ಯಾಂಪಾ ಕೋಲಾ; ಜಾಗತಿಕ ಮಾರುಕಟ್ಟೆಗೆ ಲಗ್ಗೆ!

First Published Aug 29, 2023, 4:32 PM IST

ಕ್ಯಾಂಪಾ ಕೋಲಾವನ್ನು ಏಷ್ಯಾ ಮತ್ತು ಆಫ್ರಿಕಾದಿಂದ ಪ್ರಾರಂಭಿಸಿ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕಲು ಪ್ಲ್ಯಾನ್‌ ಮಾಡಲಾಗ್ತಿದೆ ಎಂದು ಇಶಾ ಅಂಬಾನಿ ಹೇಳಿದ್ದಾರೆ.

ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಸೋಮವಾರ (ಆಗಸ್ಟ್ 28) ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ತನ್ನ ಪಾನೀಯ ಬ್ರ್ಯಾಂಡ್‌ ಕ್ಯಾಂಪಾ ಕೋಲಾವನ್ನು ಏಷ್ಯಾ ಮತ್ತು ಆಫ್ರಿಕಾದಿಂದ ಪ್ರಾರಂಭಿಸಿ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕಲು ಪ್ಲ್ಯಾನ್‌ ಮಾಡಲಾಗ್ತಿದೆ ಎಂದು ಘೋಷಿಸಿದ್ದಾರೆ.  ರಿಲಯನ್ಸ್ ಇಂಡಸ್ಟ್ರೀಸ್‌ನ 46 ನೇ ಎಜಿಎಂನಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಇಶಾ ಅಂಬಾನಿ ಈ ಹೇಳಿಕೆ ನೀಡಿದ್ದಾರೆ.

CPL ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ಯಾಕೇಜ್ಡ್ ಗ್ರಾಹಕ ಸರಕುಗಳ ಅಂಗವಾಗಿದೆ ಮತ್ತು ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ವೆಂಚರ್ಸ್ (RRVL) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಸೋಮವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ 46 ನೇ ಎಜಿಎಂನಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಇಶಾ ಅಂಬಾನಿ, "ನಾವು ಭಾರತದಲ್ಲಿ ಇದನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ ಮತ್ತು ಏಷ್ಯಾ ಹಾಗೂ ಆಫ್ರಿಕಾದಿಂದ ಪ್ರಾರಂಭಿಸಿ ಜಾಗತಿಕವಾಗಿ ಲಗ್ಗೆ ಇಡುವ ಕೆಲಸವನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಿದರು. 

ರಿಲಯನ್ಸ್ ಇನ್ನೂ ಕ್ಯಾಂಪಾ ಕೋಲಾವನ್ನು ಭಾರತದಾದ್ಯಂತ ಬಿಡುಗಡೆ ಮಾಡಿಲ್ಲ ಎಂದೂ ಇಶಾ ಅಂಬಾನಿ ಹೇಳಿದ್ದಾರೆ. ಕ್ಯಾಂಪಾ ಕೋಲಾವನ್ನು 2022 ರಲ್ಲಿ ಮುಖೇಶ್ ಅಂಬಾನಿ ಅವರು ಹೊಸ ದೆಹಲಿ ಮೂಲದ ಕಂಪನಿಯಾದ ಪ್ಯೂರ್ ಡ್ರಿಂಕ್ಸ್ ಲಿಮಿಟೆಡ್‌ನಿಂದ ಸ್ವಾಧೀನಪಡಿಸಿಕೊಂಡರು. ಕ್ಯಾಂಪಾ ಕೋಲಾವನ್ನು 22 ಕೋಟಿ ರೂ. ಗೆ ಸ್ವಾಧೀನಪಡಿಸಿಕೊಂಡ ನಂತರ, ರಿಲಯನ್ಸ್ ರೀಟೇಲ್ ಕ್ಯಾಂಪಾ ಕೋಲಾವನ್ನು ಮರು-ಪ್ರಾರಂಭಿಸಲು ನಿರ್ಧರಿಸಿತು ಮತ್ತು ಉತ್ಪನ್ನವು ಪ್ರಸ್ತುತ ಕೆಲವು ನಗರಗಳಲ್ಲಿ ಲಭ್ಯವಿದೆ. ತಜ್ಞರ ಪ್ರಕಾರ, ಕ್ಯಾಂಪಾ ಕೋಲಾ ಶೀಘ್ರದಲ್ಲೇ ಕೋಕಾ-ಕೋಲಾ ಮತ್ತು ಪೆಪ್ಸಿಕೋದಂತಹ ಸ್ಥಾಪಿತ ಬ್ರಾಂಡ್‌ಗಳೊಂದಿಗೆ ಸ್ಪರ್ಧಿಸಲು ಪ್ರಾರಂಭಿಸುತ್ತದೆ.

“ನಾವು ನಮ್ಮ ಎಫ್‌ಎಂಸಿಜಿ (ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು) ವ್ಯವಹಾರವನ್ನು ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಉತ್ಪನ್ನಗಳನ್ನು ಒದಗಿಸುವ ದೃಷ್ಟಿಯೊಂದಿಗೆ ಪ್ರಾರಂಭಿಸಿದ್ದೇವೆ. ಭಾರತೀಯ ಗ್ರಾಹಕರಿಗೆ ಪರಂಪರೆಯ ಬ್ರ್ಯಾಂಡ್‌ಗಳನ್ನು ಸಮಕಾಲೀನವಾಗಿಸಲು, ಹಳೆಯ ಬ್ರ್ಯಾಂಡ್ ಭರವಸೆಯನ್ನು ಹಾಗೆಯೇ ಇರಿಸಿಕೊಳ್ಳಲು ನಾವು ಕ್ಯಾಂಪಾ ಕೋಲಾ, ಸೊಸ್ಯೊ ಮತ್ತು ಲೋಟಸ್‌ನಂತಹ ಹಲವಾರು ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಪಾಲುದಾರಿಕೆ ಹೊಂದಿದ್ದೇವೆ" ಎಂದೂ ಇಶಾ ಅಂಬಾನಿ ಹೇಳಿದರು.

ರಿಲಯನ್ಸ್ ರೀಟೇಲ್ ಭಾರತದ ಪ್ರಮುಖ ಚಿಲ್ಲರೆ ವ್ಯಾಪಾರಿಯಾಗಿದೆ ಮತ್ತು ಇಶಾ ಅಂಬಾನಿ ನೇತೃತ್ವದ ಸಂಸ್ಥೆಯು  ಆರ್ಥಿಕ ವರ್ಷ 2023 ರಲ್ಲಿ 2.60 ಲಕ್ಷ ಕೋಟಿ ಆದಾಯವನ್ನು ಗಳಿಸಿದೆ. 

click me!