ಡಾ. ದೇವಿ ಪ್ರಸಾದ್ ಶೆಟ್ಟಿ ಬಗ್ಗೆ ಬಹುತೇಕರಿಗೆ ಗೊತ್ತೇ ಇರುತ್ತೆ. ಇವರು ದೇಶದ ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕರಾಗಿದ್ದು, ಅವರು ನಾರಾಯಣ ಹೆಲ್ತ್‌ನ ಮುಖ್ಯಸ್ಥರು ಮತ್ತು ಸೃಷ್ಟಿಕರ್ತರಾಗಿದ್ದಾರೆ. ಸನ್ಯಾಸಿನಿಯೊಬ್ಬರಿಗೆ ವೈಯಕ್ತಿಕ ವೈದ್ಯರಾಗಿ ಸೇವೆ ಸಲ್ಲಿಸಿದ ಇವರು ಭಾರತದಲ್ಲಿ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಲು ಅವರಿಂದ ಪ್ರೇರೇಪಣೆಯಾಗಿದ್ದರು.
ಭಾರತದ ಉನ್ನತ ವೈದ್ಯಕೀಯ ಮನಸ್ಸುಗಳಲ್ಲಿ ಒಬ್ಬರಾದ ಡಾ. ದೇವಿ ಶೆಟ್ಟಿ ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕ, ಬಹುಕೋಟ್ಯಧಿಪತಿ ಉದ್ಯಮಿ ಮತ್ತು ಲೋಕೋಪಕಾರಿ. 1984 ರಲ್ಲಿ ಮದರ್ ತೆರೇಸಾ ಹೃದಯಾಘಾತಕ್ಕೆ ಒಳಗಾದಾಗ ಅವರ ಸಂಪರ್ಕಕ್ಕೆ ಬಂದ ನಂತರ, ಡಾ. ದೇವಿ ಶೆಟ್ಟಿ ಅವರ ಜೀವನದ ಕೊನೆಯ ಐದು ವರ್ಷಗಳ ಕಾಲ ಅವರ ವೈಯಕ್ತಿಕ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಇನ್ನು, "ನಾರಾಯಣ ಹೃದಯಾಲಯದ ಸ್ಥಾಪನೆ ಹಿಂದೆ ತಾಯಿ ಸ್ಪೂರ್ತಿದಾಯಕ ಶಕ್ತಿಯಾಗಿದ್ದರು" ಎಂದು ಡಾ. ದೇವಿ ಶೆಟ್ಟಿ ಅಂಕಣವೊಂದರಲ್ಲಿ ಬರೆದಿದ್ದರು. ಅವರು ತನ್ನನ್ನು ಹೇಗೆ ಸ್ಪರ್ಶಿಸಿದರು ಮತ್ತು ಬಡವರ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಪ್ರೇರೇಪಿಸಿದರು ಎಂದೂ ಹೇಳಿಕೊಂಡಿದ್ದಾರೆ. ನಂತರ, 2001 ರಲ್ಲಿ, ಡಾ. ದೇವಿ ಶೆಟ್ಟಿ ನಾರಾಯಣ ಹೃದಯಾಲಯವನ್ನು ಸ್ಥಾಪಿಸಿದ್ದು, ಇದು ನಂತರ ನಾರಾಯಣ ಹೆಲ್ತ್ ಆಗಿ ವಿಕಸನಗೊಂಡಿದೆ.
ಇದು 47 ವೈದ್ಯಕೀಯ ಸೌಲಭ್ಯಗಳೊಂದಿಗೆ ಮತ್ತು 15,000 ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಭಾರತದ ಅತಿದೊಡ್ಡ ಆಸ್ಪತ್ರೆ ಜಾಲಗಳಲ್ಲಿ ಒಂದಾಗಿದೆ. ಡಾ. ದೇವಿ ಶೆಟ್ಟಿ ಸುದೀರ್ಘ ಮತ್ತು ಗೌರವಾನ್ವಿತ ವೃತ್ತಿಜೀವನದ ಅವಧಿಯಲ್ಲಿ ದೇಶದ ಆರೋಗ್ಯ ರಕ್ಷಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಡಾ. ದೇವಿಶೆಟ್ಟಿ, ಜಗತ್ತಿನಲ್ಲಿ ನಡೆದಿದ್ದ ಮೊದಲ ಹೃದಯ ಕಸಿ ಕಾರ್ಯಾಚರಣೆಯ ಬಗ್ಗೆ ಓದಿದ ನಂತರ ಅವರು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಬೇಕೆಂದು ಚಿಕ್ಕ ಹುಡುಗನಾಗಿದ್ದಾಗಲೇ ಅಂದುಕೊಂಡಿದ್ದರಂತೆ. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಯುಕೆ ಮತ್ತು ಯುಎಸ್ಎಗಳಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸಕರಾಗಿ ತರಬೇತಿ ಪಡೆದರು ಮತ್ತು ಅಭ್ಯಾಸ ಮಾಡಿದರು.
ಭಾರತದಲ್ಲಿ 30ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 7,000ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ನಾರಾಯಣ ಹೆಲ್ತ್, ಸಮಂಜಸವಾದ ವೆಚ್ಚದಲ್ಲಿ ಅತ್ಯಾಧುನಿಕ, ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡುವುದಕ್ಕಾಗಿ ಪ್ರಶಂಸೆ ಗಳಿಸಿದೆ. ಡಾ. ದೇವಿ ಶೆಟ್ಟಿ ನಾರಾಯಣ ಹೆಲ್ತ್ ಅನ್ನು 2015 ರಲ್ಲಿ IPO ಆಗಿ ಮಾಡಿದ್ದು, ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಕಿರಣ್ ಮಜುಂದಾರ್ ಶಾ ಕೂಡ ಅವರ ವ್ಯವಹಾರದಲ್ಲಿ ಸ್ಟಾಕ್ ಹೊಂದಿದ್ದಾರೆ.
ಇನ್ನೊಂದೆಡೆ, ಡಾ. ದೇವಿ ಶೆಟ್ಟಿ ಭಾರತದಲ್ಲಿ ನೀಡಲಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (2004) ಮತ್ತು ಪದ್ಮಭೂಷಣ (2012) ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಟೈಮ್ ಮ್ಯಾಗಜೀನ್‌ನಿಂದ "ಆರೋಗ್ಯ ರಕ್ಷಣೆಯಲ್ಲಿ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ" ಒಬ್ಬರು ಎಂದೂ ಹೆಸರಿಸಲ್ಪಟ್ಟಿದ್ದಾರೆ. ಡಾ. ದೇವಿ ಶೆಟ್ಟಿ ಕರ್ನಾಟಕದ ಯಶಸ್ವಿನಿ ಯೋಜನೆ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
ಇನ್ನು, ಡಾ. ದೇವಿಶೆಟ್ಟಿ ಸರಿಸುಮಾರು 9,800 ಕೋಟಿ ರೂ. ($1.2 ಶತಕೋಟಿ) ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿರುವ ಭಾರತದ ಶ್ರೀಮಂತ ವೈದ್ಯರಲ್ಲಿ ಒಬ್ಬರಾಗಿದ್ದಾರೆ.