ಬಿರಿಯಾನಿ ಅಂದ್ರೆ ದೇಶದಲ್ಲಿ ಹೈದರಾಬಾದ್ ಬಿರಿಯಾನಿ ಫೇಮಸ್. ಕರ್ನಾಟಕಕ್ಕೆ ಬಂದ್ರೆ ಬೆಂಗಳೂರು ಬಳಿಯ ಹೊಸಕೋಟೆ ಬಿರಿಯಾನಿ ತಿನ್ನೋಕೆ ಮಾಂಸಾಹಾರಿ ಪ್ರಿಯುರ ಮುಗಿಬೀಳ್ತಾರೆ. ಆದರೆ, ಈ ಬಿರಿಯಾನಿ ಹೋಟೆಲ್ ಅಥವಾ ಅಂಗಡಿಗಳ ಕರ್ಮಕಾಂಡವನ್ನು ಸರ್ಕಾರ ಪತ್ತೆಹಚ್ಚಿದೆ.
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು ತೆರಿಗೆ ವಂಚನೆ ವಿರುದ್ಧದ ಕಾರ್ಯಾಚರಣೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿನ ಬಿರಿಯಾನಿ ಅಂಗಡಿ ಮಾಲೀಕರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯನ್ನು ಬಹಿರಂಗಪಡಿಸಿದೆ. ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಹೊಸಕೋಟೆಯು ತಡರಾತ್ರಿ ಮತ್ತು ಮುಂಜಾನೆ ಡ್ರೈವ್‌ಗಳಿಗೆ ಜನಪ್ರಿಯ ತಾಣವಾಗಿದ್ದು, ಹಲವಾರು ಬಿರಿಯಾನಿ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.
ಈ ಸಂಬಂಧ 50 ಸದಸ್ಯರ ವಿಜಿಲೆನ್ಸ್ ವಿಭಾಗವು ಹೊಸಕೋಟೆಯಲ್ಲಿ ವ್ಯಾಪಕ ಶೋಧ ನಡೆಸಿದ್ದು, ಈ ಬಿರಿಯಾನಿ ಮಾರಾಟಗಾರರು ಬಳಸುವ ವಿಧಾನವನ್ನು ಬಹಿರಂಗಪಡಿಸಿದೆ ಎಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತೆ ಸಿ. ಶಿಖಾ ಹೇಳಿದ್ದಾರೆ.
"ನಾವು 30 UPI (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) QR ಕೋಡ್‌ಗಳನ್ನು ಹೊಂದಿರುವ ಬಿರಿಯಾನಿ ಅಂಗಡಿಯ ಮಾಲೀಕರನ್ನು ಪತ್ತೆಹಚ್ಚಿದ್ದೇವೆ.
ಹೆಚ್ಚುವರಿಯಾಗಿ, ನಮ್ಮ ಕಾರ್ಯಾಚರಣೆಯ ಸಮಯದಲ್ಲಿ, ನಾವು ಅವರ ನಿವಾಸದಲ್ಲಿ 1.47 ಕೋಟಿ ರೂಪಾಯಿ ಹಣವನ್ನು ಪತ್ತೆಹಚ್ಚಿದ್ದೇವೆ ಎಂದೂ ಅವರು ಹೇಳಿದ್ದಾರೆ.
ನಾವು ತಕ್ಷಣ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ ಎಂದೂ ಶಿಖಾ ಹೇಳಿದ್ದಾರೆ.
ಹಾಗೂ, ಅನೇಕ ಅಂಗಡಿ ಮಾಲೀಕರು ನಗದು ವಹಿವಾಟಿನ ಜೊತೆಗೆ ಹಲವಾರು ಯುಪಿಐ ಖಾತೆಗಳ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಆಗಾಗ್ಗೆ ಯುಪಿಐ ಖಾತೆಗಳನ್ನು ಬದಲಾಯಿಸುತ್ತಿದ್ದಾರೆ ಎಂದೂ ಶಿಖಾ ವಿವರಿಸಿದರು.
"ನಿಜವಾದ ಜಿಎಸ್‌ಟಿ ವಹಿವಾಟುಗಳನ್ನು ಮರೆಮಾಚಲು ಮತ್ತು ತೆರಿಗೆ ವಂಚಿಸಲು ಈ ತಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಈ ಹೋಟೆಲ್‌ನವರು ತಮ್ಮ ಆಹಾರ ಪದಾರ್ಥಗಳಿಗೆ ತೆರಿಗೆ ಇನ್‌ವಾಯ್ಸ್ ಮತ್ತು ಮಾರಾಟದ ಬಿಲ್‌ಗಳನ್ನು ನೀಡುತ್ತಿಲ್ಲ ಹಾಗೂ ಸರಿಯಾದ ಲೆಕ್ಕಪತ್ರ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಇಲಾಖೆಯು ತೆರಿಗೆ ವಂಚಕರು ಅಳವಡಿಸಿಕೊಂಡ ಹಲವು ವಿಧಾನಗಳನ್ನು ನಿರಂತರವಾಗಿ ವಿಶ್ಲೇಷಿಸುವ ಮತ್ತು ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವತ್ತ ಗಮನ ಹರಿಸುತ್ತಿದೆ’’ ಎಂದೂ ಶಿಖಾ ಹೇಳಿಕೊಂಡಿದ್ದಾರೆ.
ಇನ್ನು, ಮನೆಯಲ್ಲಿ ನಗದು ಇಟ್ಟುಕೊಳ್ಳುವ ಕಾನೂನುಬದ್ಧತೆಯ ಬಗ್ಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, "ಭಾರತದ ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಇರಿಸಬಹುದಾದ ನಗದು ಮೊತ್ತದ ಮೇಲೆ ಯಾವುದೇ ನಿರ್ದಿಷ್ಟ ಮಿತಿಯನ್ನು ವಿಧಿಸಿಲ್ಲ.
ಆದರೂ, ಯಾವುದೇ ಮಹತ್ವದ ನಗದು ಠೇವಣಿ ಅಥವಾ ಹಿಡುವಳಿಗಳ ಬಗ್ಗೆ ತೆರಿಗೆ ಅಧಿಕಾರಿಗಳು ಪ್ರಶ್ನಿಸಿದರೆ ವ್ಯಕ್ತಿಗಳು ವಿವರಣೆಯನ್ನು ನೀಡಬೇಕಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ. ನೀವು ಹೊಂದಿರುವ ಯಾವುದೇ ನಗದನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ಪರಿಶೀಲನೆಯ ಸಂದರ್ಭದಲ್ಲಿ ವಿವರಿಸಬಹುದು.
ಇನ್ನೊಂದೆಡೆ, ಅನೇಕ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ, "ಸರಿಯಾದ ಲೆಕ್ಕಪತ್ರವಿಲ್ಲದೆ ವಿವಿಧ ಖಾತೆಗಳಿಗೆ ಠೇವಣಿಗಳ ಮೂಲಕ ತೆರಿಗೆ ವಂಚನೆಯನ್ನು ಒಳಗೊಂಡಿರುವ ಅನುಮಾನಾಸ್ಪದ ವಹಿವಾಟುಗಳು ನಡೆದಿವೆ" ಎಂದು ಅಧಿಕಾರಿ ಹೇಳಿದರು.