ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ಪರಿಣಾಮ ಆ ಎರಡು ದೇಶಗಳ ಮೇಲೆ ಮಾತ್ರ ಅಲ್ಲ. ಜಾಗತಿಕ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಈ ಪೈಕಿ, ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿಯಲ್ಲಿ ಸಾಕಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರು ಲಕ್ಷ ಲಕ್ಷ ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ.
ಇನ್ನು, ಕಳೆದ ತಿಂಗಳಷ್ಟೇ ಇಸ್ರೇಲ್‌ನ ಪ್ರಮುಖ ಹೈಫಾ ಬಂದರು ಸ್ವಾಧೀನಪಡಿಸಿಕೊಂಡಿದ್ದ ಅದಾನಿ ಗ್ರೂಪ್‌ಗೆ ತೀವ್ರ ನಷ್ಟವಾಗಿದೆ. ಹಿಂಡೆನ್‌ಬರ್ಗ್ ವರದಿ ಹೊರ ಬಂದ ಬಳಿಕ ಲಕ್ಷ ಲಕ್ಷ ಕೋಟಿ ರೂ.ಕಳೆದುಕೊಂಡಿರುವ ಗೌತಮ್ ಅದಾನಿಗೆ ಶನಿ ಕಾಟ ಬಿಡುವ ಹಾಗೆ ಕಾಣ್ತಿಲ್ಲ.
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧದ ಪರಿಣಾಮ ಷೇರುಪೇಟೆಯ ಮೇಲೆ ತಗುಲಿದ್ದು, ಹೂಡಿಕೆದಾರರಿಗೆ ಸಾಕಷ್ಟು ನಷ್ಟವಾಗಿದ್ದರೂ, ಅದಾನಿ ಗ್ರೂಪ್ ಮೇಲೆ ಇದರ ಪರಿಣಾಮ ಹೆಚ್ಚಾಗಿದೆ. ಈ ಹಿನ್ನೆಲೆ ಒಂದೇ ದಿನದಲ್ಲಿ ಸುಮಾರು 34,000 ಕೋಟಿ ರೂ. ನಷ್ಟು ಹಣ ನಷ್ಟವಾಗಿದೆ.
ಅದಾನಿ ಗ್ರೂಪ್‌ನ ಎಲ್ಲ ಷೇರುಗಳ ಮೌಲ್ಯ ಸೋಮವಾರ ಕಡಿಮೆಯಾಗಿದೆ. ಅದ್ರಲ್ಲೂ ಪ್ರಮುಖವಾಗಿ ಅದಾನಿ ಪೋರ್ಟ್ಸ್ ಲಿಮಿಟೆಡ್ ಮತ್ತು ಅದಾನಿ ಪವರ್ ಲಿಮಿಟೆಡ್ ಷೇರುಗಳ ಮೌಲ್ಯ ಹೆಚ್ಚು ಕುಸಿದಿದೆ. ಇವೆರಡೂ 5% ರಿಂದ 6% ನಡುವೆ ಕುಸಿತ ಕಂಡಿವೆ.
ಒಟ್ಟಾರೆಯಾಗಿ, ಅದಾನಿ ಸಮೂಹವು ಮಾರುಕಟ್ಟೆ ಬಂಡವಾಳದಲ್ಲಿ 34,000 ಕೋಟಿ ರೂ. ಕಳೆದುಕೊಂಡಿದೆ. ಈ ಪೈಕಿ ಅದಾನಿ ಪವರ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ 9,000 ಕೋಟಿ ರೂಪಾಯಿಗಳನ್ನು ಕಳೆದುಕೊಂಡರೆ, ಅದಾನಿ ಪೋರ್ಟ್ಸ್ 8,600 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ಪ್ರಭಾವದಿಂದಾಗಿ ಅದಾನಿ ಪೋರ್ಟ್ಸ್ ನಿಫ್ಟಿ 50 ಸೂಚ್ಯಂಕದಲ್ಲಿ ಪ್ರಮುಖ ನಷ್ಟ ಕಂಡ ಕಂಪನಿಯಾಗಿ ಕೊನೆಗೊಂಡಿದೆ. ಇದಕ್ಕೆ ಕಾರಣ ಅದಾನಿ ಪೋರ್ಟ್ಸ್ ಕಂಪನಿಯು ಇಸ್ರೇಲ್‌ನ ಹೈಫಾ ಬಂದರಿನ ಮಾಲೀಕರು ಮತ್ತು ನಿರ್ವಾಹಕರೂ ಆಗಿದ್ದಾರೆ.
ಇನ್ನು, ನಷ್ಟ ಹೆಚ್ಚಾಗ್ತಿದ್ದಂತೆ ಇಂದು ಮಧ್ಯಾಹ್ನ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸ್ಪಷ್ಟೀಕರಣ ನೀಡಿದ್ದು, ಅದಾನಿ ಪೋರ್ಟ್ಸ್ ದಕ್ಷಿಣ ಇಸ್ರೇಲ್‌ನ ವಾಸ್ತವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಹೈಫಾ ಬಂದರು ಇಸ್ರೇಲ್‌ನ ಉತ್ತರದಲ್ಲಿದೆ ಮತ್ತು ಕಂಪನಿಯ ಒಟ್ಟು ಸರಕು ಪ್ರಮಾಣಕ್ಕೆ 3% ಕೊಡುಗೆ ನೀಡುತ್ತಿದೆ ಎಂದು ತಿಳಿದುಬಂದಿದೆ.
2024 ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ, ಅದಾನಿ ಪೋರ್ಟ್ಸ್ ಒಟ್ಟು 203 ಮೆಟ್ರಿಕ್ ಟನ್ ಸರಕುಗಳನ್ನು ವರದಿ ಮಾಡಿದ್ದು, ಅದರಲ್ಲಿ 6 ಮೆಟ್ರಿಕ್ ಟನ್ ಹೈಫಾ ಬಂದರಿನಿಂದಲೇ ಬಂದಿದೆ. ಹಡಗು ಕಂಟೈನರ್‌ಗಳ ವಿಷಯದಲ್ಲಿ ಹೈಫಾ ಬಂದರು ಇಸ್ರೇಲ್‌ನಲ್ಲಿ ಎರಡನೇ ಅತಿದೊಡ್ಡ ಬಂದರಾಗಿದ್ದು, ಪ್ರವಾಸಿ ಕ್ರೂಸ್ ಹಡಗುಗಳನ್ನು ಸಾಗಿಸುವ ವಿಚಾರದಲ್ಲಿ ನಂ. 1 ಆಗಿದೆ.
ಒಟ್ಟಾರೆ, ಸೋಮವಾರ ಅದಾನಿ ಗ್ರೂಪ್ ಕಂಪನಿ ಯಾವ್ಯಾವ ಷೇರುಗಳ ಮೌಲ್ಯ ಎಷ್ಟೆಷ್ಟು ಕಡಿಮೆಯಾಗಿದೆ ನೋಡಿ..
ಸ್ಟಾಕ್ ರಿಟರ್ನ್ಸ್
ಅದಾನಿ ಬಂದರು - 5.10%
ಅದಾನಿ ಪವರ್ - 6.60%
ಅದಾನಿ ಎಂಟರ್‌ಪ್ರೈಸಸ್ - 1.60%
ಅದಾನಿ ಗ್ರೀನ್ ಎನರ್ಜಿ - 2.50%
ಅದಾನಿ ಟೋಟಲ್ ಗ್ಯಾಸ್ - 2.50%
ಅದಾನಿ ಎನರ್ಜಿ ಸೊಲ್ಯೂಷನ್ಸ್ - 3.80%
ಅದಾನಿ ವಿಲ್ಮರ್ - 3.50%
ACC - 2.50%
ಅಂಬುಜಾ - 1.50%
NDTV - 3.80%
ಷೇರುಪೇಟೆ ಅಂತ್ಯಗೊಂಡ ಬಳಿಕ, ಅದಾನಿ ಸಮೂಹವು 10.5 ಲಕ್ಷ ಕೋಟಿ ರೂ.ಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣಕ್ಕೆ ಕುಸಿತ ಕಂಡಿದೆ.