ಪಿತ್ರೋಡಾ ಸಂಪೂರ್ಣ ಹೆಸರು ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ ಗುಜರಾತಿ ಪೋಷಕರಿಗೆ ಒಡಿಶಾದ ತಿತ್ಲಗಢದಲ್ಲಿ 1942 ರಲ್ಲಿ ಜನಿಸಿದರು. ಏಳು ಮಂದಿ ಒಡಹುಟ್ಟಿದವರಲ್ಲಿ ಮೂರನೇಯವರು ಪಿತ್ರೋಡಾ. ಗಾಂಧಿ ಅನುಯಾಯಿಗಳಾದ ಕುಟುಂಬದಲ್ಲಿ ಅವರು ಜನಿಸಿದರು. ಹೀಗಾಗಿ ಸಹೋದರ ಮತ್ತು ಪಿತ್ರೋಡಾರನ್ನು ಗುಜರಾತ್‌ಗೆ ಕಳುಹಿಸಲಾಯಿತು. ಅವರು ಗುಜರಾತ್‌ನ ವಲ್ಲಭ ವಿದ್ಯಾನಗರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ವಡೋದರದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 1964 ಯುಎಸ್ ಗೆ ತೆರಳಿ ಚಿಕಾಗೋದ ಇಲಿನಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಭಾರತೀಯ ದೂರಸಂಪರ್ಕ ಎಂಜಿನಿಯರ್ ಮತ್ತು ವಾಣಿಜ್ಯೋದ್ಯಮಿ ಆಗಿರುವ ಅವರು 1975 ರಲ್ಲಿ ಎಲೆಕ್ಟ್ರಾನಿಕ್ ಡೈರಿಯನ್ನು ಕಂಡುಹಿಡಿದ ಕಾರಣ ಹ್ಯಾಂಡ್-ಹೆಲ್ಡ್ ಕಂಪ್ಯೂಟಿಂಗ್‌ನ ಆರಂಭಿಕ ಪ್ರವರ್ತಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಪಿತ್ರೋಡಾ ಹಲವಾರು ಕಂಪೆನಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯಂತೆ 1981 ರಲ್ಲಿ ಭಾರತಕ್ಕೆ ಹಿಂತಿರುಗಿದ ಅವರು ಭಾರತದ ದೂರಸಂಪರ್ಕ ವ್ಯವಸ್ಥೆಯನ್ನು ಆಧುನೀಕರಿಸಲು ಮುಂದಾದರು. ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ C-DOT ಅನ್ನು ಪ್ರಾರಂಭಿಸಿದರು. ಇದು ಸ್ವಾಯತ್ತ ಟೆಲಿಕಾಂ R&D ಸಂಸ್ಥೆಯಾಗಿದೆ. US ಪ್ರಜೆಯಾಗಿದ್ದ ಅವರು ಭಾರತೀಯ ಪೌರತ್ವವನ್ನು ಪಡೆಯಲು ತಮ್ಮ US ಪೌರತ್ವವನ್ನು ತ್ಯಜಿಸಿದರು.
1987 ರಲ್ಲಿ ಪ್ರಧಾನಿ ರಾಜೀವ್ ಗಾಂಧಿಯವರ ಸಲಹೆಗಾರರಾಗಿದ್ದ ಅವರು ದೂರಸಂಪರ್ಕ, ನೀರು, ಸಾಕ್ಷರತೆ, ಪ್ರತಿರಕ್ಷಣೆ, ಡೈರಿ ಮತ್ತು ಎಣ್ಣೆಕಾಳುಗಳಿಗೆ ಸಂಬಂಧಿಸಿದ ಆರು ತಂತ್ರಜ್ಞಾನ ಮಿಷನ್‌ಗಳ ಮುಖ್ಯಸ್ಥರಾಗಿದ್ದರು. ರಾಜೀವ್ ಗಾಂಧಿಯವರೊಂದಿಗೆ ಸುಮಾರು ಒಂದು ದಶಕವನ್ನು ಕಳೆದರು. ದೇಶದ ಮೂಲೆ ಮೂಲೆಗಳಿಗೆ ಡಿಜಿಟಲ್ ದೂರಸಂಪರ್ಕವನ್ನು ವಿಸ್ತರಿಸುವ ಕಾರ್ಯವಾಗಿತ್ತು. ಭಾರತದ ಟೆಲಿಕಾಂ ಆಯೋಗದ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.
1990 ರ ದಶಕದಲ್ಲಿ ಚಿಕಾಗೋಗೆ ಮರಳಿದರು. 1995 ರಲ್ಲಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್‌ನ ವರ್ಲ್ಡ್ ಟೆಲ್ ಉಪಕ್ರಮದ ಮೊದಲ ಅಧ್ಯಕ್ಷರಾದರು. ಇದರ ನಂತರ 2008ರಲ್ಲಿ ಭಾರತ ಸರ್ಕಾರವು ಪಿತ್ರೋಡಾ ಅವರನ್ನು ರೈಲ್ವೇಸ್‌ನಲ್ಲಿ ICT ಕುರಿತು ತಜ್ಞರ ಸಮಿತಿಯ ಮುಖ್ಯಸ್ಥರನ್ನಾಗಿ ಆಹ್ವಾನಿಸಿತು. ಬಳಿಕ ಭಾರತದ PM ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿ ನೇಮಕಗೊಂಡರು.
ಪಿತ್ರೋಡಾ ಅವರು ರಾಷ್ಟ್ರೀಯ ಜ್ಞಾನ ಆಯೋಗದ (2005-2009) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಇದು ದೇಶದ ಜ್ಞಾನ-ಸಂಬಂಧಿತ ಸಂಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ನೀತಿ ಶಿಫಾರಸುಗಳನ್ನು ನೀಡಲು ಭಾರತದ ಪ್ರಧಾನ ಮಂತ್ರಿಯ ಉನ್ನತ ಮಟ್ಟದ ಸಲಹಾ ಸಂಸ್ಥೆಯಾಗಿದೆ. 2010ರಲ್ಲಿ ರಾಷ್ಟ್ರೀಯ ಇನ್ನೋವೇಶನ್ ಕೌನ್ಸಿಲ್ ಸ್ಥಾಪಿಸಿದರು. ಅದೇ ವರ್ಷ ರಾಷ್ಟ್ರೀಯ ಆವಿಷ್ಕಾರ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು.
ಅವರನ್ನು 2013 ರಲ್ಲಿ ಭಾರತದ ರಾಷ್ಟ್ರಪತಿಗಳು ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಿದರು. 2017 ರಲ್ಲಿ, ಅವರು ಲಿಥಿಯಂ ಮೆಟಲ್ ಕ್ಲೀನ್ ಟೆಕ್ನಾಲಜಿ ಕಂಪನಿಯಾದ ಆಲ್ಫಾ-ಎನ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿ ನೇಮಕಗೊಂಡರು.
ಪಿತ್ರೋಡಾ C-SAM ನ ಸ್ಥಾಪಕಾಧ್ಯಕ್ಷರು. ಕಂಪನಿಯು ಸಿಂಗಾಪುರ, ಟೋಕಿಯೊ, ಪುಣೆ, ಮುಂಬೈ ಮತ್ತು ವಡೋದರದಲ್ಲಿ ಕಚೇರಿಗಳೊಂದಿಗೆ ಚಿಕಾಗೋದಲ್ಲಿ ತನ್ನ ಪ್ರಧಾನ ಕಛೇರಿಯನ್ನು ನಿರ್ವಹಿಸುತ್ತದೆ. ಪಿತ್ರೋಡಾ ಸುಮಾರು 2000 ತಂತ್ರಜ್ಞಾನದ ಪೇಟೆಂಟ್‌ಗಳನ್ನು ಹೊಂದಿದ್ದಾರೆ ಮತ್ತು ಭಾರತದಲ್ಲಿ ನೋಂದಾಯಿತ INC ಯಿಂದ ಪಡೆದ ಹೆಚ್ಚಿನ ವಿಶ್ವ ಹೂಡಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪಿತ್ರೋಡಾ ಯುಎಸ್ ಮತ್ತು ಯುರೋಪ್‌ನಲ್ಲಿ ಹಲವಾರು ಉದ್ಯಮದಲ್ಲಿ ತೊಡಗಸಿಕೊಂಡಿದ್ದಾರೆ. ವೆಸ್ಕಾಮ್ ಸ್ವಿಚಿಂಗ್, ಐಯಾನಿಕ್ಸ್, ಎಂಟಿಐ, ಮಾರ್ಕೆಟ್, ವರ್ಲ್ಡ್ ಟೆಲ್, ಸಿ-ಸ್ಯಾಮ್, ಇತ್ಯಾದಿ. ವಿಶ್ವಸಂಸ್ಥೆಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ . 1964 ರಿಂದ ಚಿಕಾಗೋ ಮತ್ತು ದೆಹಲಿಯಲ್ಲಿ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
2010 ರಲ್ಲಿ, ಪಿತ್ರೋಡಾ ಇಂಡಿಯಾ ಫುಡ್ ಬ್ಯಾಂಕಿಂಗ್ ನೆಟ್‌ವರ್ಕ್ (IFBN) ಅನ್ನು ಸ್ಥಾಪಿಸಿದರು. 2012 ರಲ್ಲಿ, ಪಿತ್ರೋಡಾ ಆಕ್ಷನ್ ಫಾರ್ ಇಂಡಿಯಾವನ್ನು ಸ್ಥಾಪಿಸಿದರು, ಭಾರತದಲ್ಲಿನ ಸಾಮಾಜಿಕ ನವೋದ್ಯಮಿಗಳಿಗೆ ಸಮಸ್ಯೆ ನಿವಾರಣೆಗೆ ಇದನ್ನು ಸ್ಥಾಪಿಸಲಾಗಿದೆ.
ಇಷ್ಟೆಲ್ಲ ಹಿನ್ನೆಲೆ ಹೊಂದಿರುವ ಸಾವಿರಾರು ಕೋಟಿಗಳ ಒಡೆಯನಾಗಿರುವ ಪಿತ್ರೋಡಾ ಅವರ ನಿವ್ವಳ ಮೌಲ್ಯದ ಬಗ್ಗೆ ವಿವರಣೆ ಇಲ್ಲ. ಆದರೆ ಆಲ್ಫಾ-ಎನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ , ಮಂಡಳಿಯ ಅಧ್ಯಕ್ಷರಾಗಿ ಅವರಿಗೆ ಕಂಪೆನಿಯಿಂದ ವಾರ್ಷಿಕವಾಗಿ ಸಿಗುತ್ತಿರುವ ಮೊತ್ತ 76,29,000 ಡಾಲರ್ (63.57 ಕೋಟಿ) ಆಗಿದೆ. ಇದರಲ್ಲಿ ಕಂಪೆನಿಯ ವೇತನ, ಶೇರ್‌ಗಳು, ಸೌಲಭ್ಯಗಳು ಇತರ ಎಲ್ಲವೂ ಸೇರಿವೆ. ಒಂದು ಕಂಪೆನಿಯ ಆದಾಯದ ಮೂಲವೇ ಇಷ್ಟಾದರೆ, ಸ್ಯಾಮ್ ಪಿತ್ರೋಡಾ ಅವರ ವಿವಿಧ ಕಂಪೆನಿಗಳ, ವಿವಿಧ ಮೂಲದ ಆದಾಯಗಳು ಅದೆಷ್ಟು ಎಷ್ಟು ಸಾವಿರ ಕೋಟಿಗಳಿರಬಹುದು ಎಂದು ನೀವೇ ಊಹಿಸಿ.