ಅಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್(AIBOC) ಒಕ್ಕೂಟ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಕೆಲ ಗಂಭೀರ ವಿಚಾರಗಳನ್ನು ಮಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹಲವು ವರ್ಷಗಳಿಂದ ಬೇಡಿಕೆಗೆ ಒತ್ತಾಯಿಸಿದ್ದರೂ ಸೊಪ್ಪು ಹಾಕಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯಾಗಿದೆ ಎಂದು ಬ್ಯಾಂಕ್ ಒಕ್ಕೂಟ ಹೇಳಿದೆ.
ಬ್ಯಾಂಕ್ ಒಕ್ಕೂಟ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 24 ಹಾಗೂ 25 ಎರಡು ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಘೋಷಿಸಿದೆ. ಈ ಕುರಿತು ಒಕ್ಕೂಟ ಬ್ಯಾಂಕ್ ಕಮಿಟಿ ನಡೆಸಿದ 102 ಸಭೆಯಲ್ಲಿ ಮಹತ್ವದ ತೀರ್ಮಾನ ತೆಗದುಕೊಳ್ಳಲಾಗಿದೆ. ನವೆಂಬರ್ 2024ರಲ್ಲಿ ನಡೆದ ವರ್ಕಿಂಗ್ ಕಮಿಟಿ ಸಭೆಯ ನಿರ್ಣಯಗಳನ್ನು ಆಧರಿಸಿ ಇದೀಗ ಈ ಕ್ರಮ ಕೈಗೊಳ್ಳಲಾಗಿದೆ.
ಐದು ದಿನ ಕೆಲಸದ ಬೇಡಿಕೆ
ಬ್ಯಾಂಕ್ ಒಕ್ಕೂಟ ಒಂದಷ್ಟು ಬೇಡಿಕೆಗನ್ನು ಮುಂದಿಟ್ಟಿದೆ. ಪ್ರಮುಖವಾಗಿ ಬ್ಯಾಂಕ್ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹರನ್ನು ತಕ್ಷಣವೇ ನೇಮಕಾತಿ ಮಾಡುವಂತೆ ಬೇಡಿಕೆ ಮುಂದಿಡಲಾಗಿದೆ. ಉದ್ಯೋಗಿಗಳ ಕೊರತೆಯಿಂದ ಬ್ಯಾಂಕ್ ಕೆಲಸಗಳು ಹೆಚ್ಚು ಒತ್ತಡ ತರುತ್ತಿದೆ. ಹೆಚ್ಚುವರಿ ಸಮಯದಲ್ಲೂ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಅನ್ನೋ ಕೂಗು ಹೆಚ್ಚಾಗಿದೆ.
ಕೆಲಸ ಮಾಡಲು ಜನ ಕಡಿಮೆ
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. 2014 ರಿಂದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಮಾನ್ಯ ಉದ್ಯೋಗಿಗಳ ಸಂಖ್ಯೆ 1. 14 ಲಕ್ಷದಷ್ಟು ಕಡಿಮೆಯಾಗಿದೆ. ಕೆಲಸ ಮಾಡಲು ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ ಎಂದು ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಆರೋಪಿಸಿವೆ. ಕಳೆದ ೧೦ ವರ್ಷಗಳಲ್ಲಿ ಬಹಳಷ್ಟು ಉದ್ಯೋಗಿಗಳು ನಿವೃತ್ತರಾಗಿದ್ದಾರೆ ಮತ್ತು ಕೆಲವರು ರಾಜೀನಾಮೆ ನೀಡಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲೂ ವಾರದಲ್ಲಿ 5 ದಿನ ಕೆಲಸ ನಿಯಮ ಜಾರಿಗೆ ತರಬೇಕು. ವಾರಾಂತ್ಯದ 2 ದಿನ ರಜಾ ದಿನವಾಗಿ ಘೋಷಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಸದ್ಯ ಎಲ್ಲಾ ಭಾನುವಾರ ಹಾಗೂ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ರಜೆ ನಿಯಮವಿದೆ. ಆದರೆ ಎಲ್ಲಾ ವಾರದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಕೆಲಸದ ನಿಯಮ ಜಾರಿಗೆ ತರಲು ಬೇಡಿಕೆ ಇಡಲಾಗಿದೆ.
ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದ ಹೊಸ ಪರ್ಫಾಮೆನ್ಸ್ ಲಿಂಕ್ಡ್ ಇನ್ಸೆಂಟೀವ್(PLI) ಆದೇಶವನ್ನು ತಕ್ಷಣ ಹಿಂಪಡೆಯಬೇಕು ಅನ್ನೋ ಬೇಡಿಕೆಯನ್ನು ಬ್ಯಾಂಕ್ ಒಕ್ಕೂಟಗಳು ಮುಂದಿಟ್ಟಿದೆ. ಇದು ಉದ್ಯೋಗ ಭದ್ರತೆಗೆ ಸವಾಲೆಸೆಯುತ್ತಿದೆ. ಹೀಗಾಗಿ ಈ ಆದೇಶ ಹಿಂಪಡೆಯಬೇಕು ಎಂದು ಬೇಡಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಫೆಬ್ರವರಿ 24 ಹಾಗೂ 25ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ನಮ್ಮ ಬೇಡಿಕೆ ಈಡೇರಿಕೆಗೆ ಯಾವುದೇ ಸ್ಪಂದನೆ ವ್ಯಕ್ತವಾಗದಿದ್ದರೆ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ಬ್ಯಾಂಕ್ ಒಕ್ಕೂಟ ಮುಂದಿಟ್ಟಿದೆ. ಈ ಮೂಲಕ ಸ್ಪಂದಿಸದಿದ್ದರೆ, ಮುಷ್ಕರ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ ಅನ್ನೋ ಸೂಚನೆಯನ್ನು ನೀಡಿದೆ.
ಬ್ಯಾಂಕ್ ಅಧಿಕಾರಿಗಳು, ಉದ್ಯೋಗಿಗಳ ಮೇಲೆ ಗ್ರಾಹಕರಿಂದ ಹಲ್ಲೆ ನಡೆಯುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಉದ್ಯೋಗಿಗಳು, ಅಧಿಕಾರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಇನ್ನು ಗ್ರಾಚ್ಯುಟಿ ನಿಮಯದಲ್ಲೂ ಕೆಲ ಬದಲಾವಣೆ ತರಬೇಕು ಎಂದು ಬೇಡಿಕೆ ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಲಾಗಿದೆ.
ಹೀಗಾಗಿ ಫೆಬ್ರವರಿ 24 ಹಾಗೂ 25ರಂದು ಬ್ಯಾಂಕ್ ಕೆಲಸ ಇಟ್ಟುಕೊಳ್ಳಬೇಡಿ. ಅದಕ್ಕೂ ಮೊದಲೇ ಮುಗಿಸಿಕೊಳ್ಳಿ