3 ದಿನಗಳ ಷೇರು ಮಾರುಕಟ್ಟೆಯ ರಜೆ ಬಳಿಕ ಇಂದು ಬಿಎಸ್‌ಇ ಹಾಗೂ ನಿಫ್ಟಿ 50 ಷೇರು ಮಾರುಕಟ್ಟೆ ಕಾರ್ಯಾಚರಣೆ ಮಾಡಿದೆ. ಈ ವೇಳೆ, ಅದಾನಿ ಗ್ರೂಪ್ ಷೇರುಗಳು ಮುಟ್ಟಿದ್ದೆಲ್ಲವೂ ಚಿನ್ನದಂತೆ ಆಗಿದೆ.
ಹಿಂಡೆನ್‌ಬರ್ಗ್ ವರದಿ ಬಳಿಕ ಲಕ್ಷ ಲಕ್ಷ ಕೋಟಿ ರೂ. ನಷ್ಟು ಅನುಭವಿಸಿದ್ದ ಅದಾನಿ ಗ್ರೂಪ್ ಇಂದು ಲಕ್ಷ ಲಕ್ಷ ಕೋಟಿ ಲಾಭ ಮಾಡಿದೆ.
ಹೌದು, ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯವು 15 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿದ್ದು, ನವೆಂಬರ್ 28 ರಂದು ಗ್ರೂಪ್ ಷೇರುಗಳು 20 ಪ್ರತಿಶತದವರೆಗೆ ಏರಿಕೆ ಕಂಡಿದೆ. ಅಕೌಂಟಿಂಗ್ ವಂಚನೆ ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳನ್ನು ಎದುರಿಸಿದ ಬಳಿಕ ಅದಾನಿ ಗ್ರೂಪ್‌ನ ತನಿಖೆಯನ್ನು ಸೆಬಿ ನಡೆಸಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ಅಂತ್ಯಗೊಳಿಸಿದ್ದು, ಆದೇಶ ಕಾಯ್ದಿರಿಸಿದೆ.
ಈ ಪೈಕಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೌಲ್ಯ ಶೇ. 19.62 ರಷ್ಟು ಹೆಚ್ಚಾಗಿದೆ.
ಅಲ್ಲದೆ, ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ನವೆಂಬರ್ 28 ರಂದು 67,000 ಕೋಟಿ ರೂ. ಹೆಚ್ಚಾಗಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್‌ನ ಷೇರುಗಳು ಸಹ ಎನ್‌ಎಸ್‌ಇಯಲ್ಲಿ 13 ಪ್ರತಿಶತ ಏರಿಕೆಯಾಗಿದ್ದರೆ, ಅದಾನಿ ಗ್ರೀನ್ ಎನರ್ಜಿ ಷೇರಿನ ಬೆಲೆಯು ಸುಮಾರು 8 ಪ್ರತಿಶತದಷ್ಟು ಏರಿಕೆಯಾಗಿದೆ.
ಅದಾನಿ ಪವರ್ ಷೇರಿನ ಬೆಲೆ ಸಹ ಶೇಕಡಾ 7 ರಷ್ಟು ಏರಿಕೆಯಾಗಿ 52 ವಾರಗಳ ಗರಿಷ್ಠ 423.15 ಕ್ಕೆ ತಲುಪಿದೆ. ಇನ್ನು, ಅದಾನಿ ವಿಲ್ಮಾರ್ ಷೇರುಗಳು ಎನ್‌ಎಸ್‌ಇಯಲ್ಲಿ ಶೇಕಡಾ 6 ರಷ್ಟು ಜಿಗಿತ ಕಂಡಿದೆ.
ಗೌತಮ್ ಅದಾನಿ ನೇತೃತ್ವದ ಪ್ರಮುಖ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇಕಡಾ 6 ರಷ್ಟು ಏರಿಕೆಯಾಗಿದ್ದರೆ, ಎನ್‌ಎಸ್‌ಇಯಲ್ಲಿ ಅದಾನಿ ಪೋರ್ಟ್ಸ್ ಷೇರುಗಳ ಮೌಲ್ಯ ಸುಮಾರು 3 ಪ್ರತಿಶತದಷ್ಟು ಹೆಚ್ಚಾಗಿದೆ.
ಇತರ ಅದಾನಿ ಗ್ರೂಪ್ ಪಟ್ಟಿ ಮಾಡಲಾದ ಸಂಸ್ಥೆಗಳಲ್ಲಿ, NDTV ಷೇರುಗಳು 5 ಪ್ರತಿಶತಕ್ಕಿಂತ ಹೆಚ್ಚು, ಅಂಬುಜಾ ಸಿಮೆಂಟ್ಸ್ 3 ಪ್ರತಿಶತ ಮತ್ತು ACC 2 ಪ್ರತಿಶತದಷ್ಟು ಲಾಭ ಗಳಿಸಿದೆ ಎಂದೂ ತಿಳಿದುಬಂದಿದೆ.
ನಾವು ಹಿಂಡೆನ್‌ಬರ್ಗ್ ವರದಿಯನ್ನು ಸತ್ಯದ ಹೇಳಿಕೆ ಎಂದು ಪರಿಗಣಿಸಬೇಕಾಗಿಲ್ಲ. ಹಿಂಡೆನ್‌ಬರ್ಗ್ ವರದಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಯಾವುದೇ ವಿಧಾನವಿಲ್ಲ ಮತ್ತು ಆದ್ದರಿಂದ ತನಿಖೆ ನಡೆಸುವಂತೆ ಸೆಬಿಯನ್ನು ಕೇಳಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಸೆಬಿ ತನ್ನ ತನಿಖೆಯಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಕ್ಕೆ ಸಾಕ್ಷ್ಯ ದೊರೆತಿಲ್ಲದ ಕಾರಣ ಷೇರುಗಳ ಲಾಭ ಹೆಚ್ಚಾಗಿದೆ ಎಂದೂ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.