
ಬೆಂಗಳೂರು: ಭಾರತದ ಮುಂಚೂಣಿ ಉದ್ಯಮ ಸಂಸ್ಥೆಯಾದ ಅದಾನಿ ಸಮೂಹವು ಅಮೆರಿಕಾದಲ್ಲಿದ್ದ ತನ್ನೆಲ್ಲಾ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಮುನ್ನಡೆದಿದೆ ಎಂದು ಸಮೂಹದ ಮುಖ್ಯಸ್ಥ ಮತ್ತು ಬಿಲಿಯನೇರ್ ಗೌತಮ್ ಅದಾನಿ ಘೋಷಿಸಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದ ಸೃಷ್ಟಿಯಾಗುತ್ತಿರುವ ಭಾರಿ ಬೇಡಿಕೆಯ ಸಂಪೂರ್ಣ ಲಾಭವನ್ನು ಪಡೆಯಲು ತಮ್ಮ ಸಂಸ್ಥೆಯು ಸರ್ವಸನ್ನದ್ಧವಾಗಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಮತ್ತಷ್ಟು ವೇಗಗೊಳಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಷೇರುದಾರರಿಗೆ ಬರೆದಿರುವ ತಮ್ಮ ವಾರ್ಷಿಕ ಪತ್ರದಲ್ಲಿ ಈ ಆಶಾವಾದಿ ವಿಷಯಗಳನ್ನು ಹಂಚಿಕೊಂಡಿರುವ ಗೌತಮ್ ಅದಾನಿ, ಕಳೆದ ವರ್ಷ ತಮ್ಮ ಸಮೂಹವು ಜಾಗತಿಕ ಮಟ್ಟದಲ್ಲಿ ತೀವ್ರ ತಪಾಸಣೆ ಮತ್ತು ಬಿಗಿಯಾದ ನಿಗಾಕ್ಕೆ ಒಳಗಾಗಿದ್ದರೂ, ವ್ಯವಹಾರ ವಿಸ್ತರಣೆಯ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾದಲ್ಲಿ ಗ್ರೂಪ್ ಎದುರಿಸುತ್ತಿದ್ದ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದ ಎಲ್ಲ ಕ್ಲಿಷ್ಟಕರ ವಿಷಯಗಳು ಈಗ ಸಂಪೂರ್ಣವಾಗಿ ಇತ್ಯರ್ಥಗೊಂಡಿರುವುದರಿಂದ, ಸಂಸ್ಥೆಯು ತನ್ನ ಮುಂದಿನ ಹಂತದ ಮಹತ್ವಾಕಾಂಕ್ಷಿ ಬೆಳವಣಿಗೆಯ ಕಡೆಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 2024ರ ಕೊನೆಯಿಂದಲೂ ಅದಾನಿ ಸಮೂಹಕ್ಕೆ ತೀವ್ರ ತಲೆನೋವಾಗಿದ್ದ ಅಮೆರಿಕಾದ ಕಾನೂನು ಮತ್ತು ನಿಯಂತ್ರಕ ಸವಾಲುಗಳಿಗೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ. ತಮ್ಮ ನವೀಕರಿಸಬಹುದಾದ ಇಂಧನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಂಚದ ಆರೋಪಗಳ ಮೇಲೆ ಅಮೆರಿಕಾ ಅಧಿಕಾರಿಗಳಿಂದ ಅದಾನಿ ಗ್ರೂಪ್ ತನಿಖೆಯನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ ಈ ಆರೋಪಗಳನ್ನು ಮೊದಲಿನಿಂದಲೂ ಅದಾನಿ ಸಮೂಹವು ಅತ್ಯಂತ ದೃಢವಾಗಿ ನಿರಾಕರಿಸುತ್ತಲೇ ಬಂದಿತ್ತು.
ಸದ್ಯ ಲಭ್ಯವಾಗಿರುವ ದೊಡ್ಡ ಸಮಾಧಾನದ ಸಂಗತಿಯೆಂದರೆ, ಅಮೆರಿಕಾದ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್ ಈ ಇಡೀ ವಿಷಯದಲ್ಲಿ ಅದಾನಿ ಗ್ರೂಪ್ ಜೊತೆ ಒಂದು ಸೌಹಾರ್ದಯುತ ಇತ್ಯರ್ಥಕ್ಕೆ ಬಂದಿದೆ. ಇದರ ಜೊತೆಗೆ, ಅತ್ತ ಅಮೆರಿಕಾದ ನ್ಯಾಯಾಂಗ ಇಲಾಖೆಯು ಸಂಸ್ಥೆಯ ಸಂಸ್ಥಾಪಕರು ಮತ್ತು ಇತರರ ಮೇಲಿನ ಎಲ್ಲಾ ಗಂಭೀರ ಆರೋಪಗಳನ್ನು ಅಧಿಕೃತವಾಗಿ ಕೈಬಿಡಲು ಮುಂದಾಗಿದೆ. ಈ ನಿರ್ಧಾರವು ಅದಾನಿ ಸಮೂಹಕ್ಕೆ ತನ್ನ ಮುಂದಿನ ಹಂತದ ಮುನ್ನಡೆಗೆ ಹೊಸ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ನೀಡಿದೆ.
ಸಂಸ್ಥೆಯು ಕಾರ್ಪೊರೇಟ್ ಆಡಳಿತ ಮತ್ತು ನಿಯಂತ್ರಕ ನಿಯಮಗಳ ಕುರಿತು ಹಲವು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದ ಅತ್ಯಂತ ಕಷ್ಟದ ಸಮಯದಲ್ಲಿ, ಅದರ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಇತ್ತೀಚೆಗೆ ಹಮ್ಮಿಕೊಂಡಿದ್ದ 24,930 ಕೋಟಿ ರೂಪಾಯಿ ಮೌಲ್ಯದ ರೈಟ್ಸ್ ಇಶ್ಯೂ ಭಾರಿ ಯಶಸ್ಸನ್ನು ಕಂಡಿದೆ. ಇದು ದೇಶ ಹಾಗೂ ವಿದೇಶಿ ಹೂಡಿಕೆದಾರರು ಅದಾನಿ ಸಮೂಹದ ಮೇಲೆ ಇಟ್ಟಿರುವ ದೃಢವಾದ ಭರವಸೆಗೆ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಗೌತಮ್ ಅದಾನಿ ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.
ಜಗತ್ತು ಮತ್ತಷ್ಟು ಛಿದ್ರಗೊಂಡ, ಸಂಕೀರ್ಣವಾದ ಇಂಧನ ಭದ್ರತಾ ಮಾದರಿಗಳು ದೇಶದ ಪ್ರಮುಖ ಕಾರ್ಯತಂತ್ರಗಳ ಕೇಂದ್ರಬಿಂದುವಾದ ಮತ್ತು ತಂತ್ರಜ್ಞಾನ ಹಾಗೂ ರಾಷ್ಟ್ರದ ಸಾರ್ವಭೌಮತ್ವ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡ ವರ್ಷವದು. ಇಂತಹ ಸಂದರ್ಭದಲ್ಲೂ ಅದಾನಿ ಗ್ರೂಪ್ ಒಂದು ಅಚಲವಾದ ನಂಬಿಕೆಗೆ ಕಟ್ಟುಬಿದ್ದಿತ್ತು, ಅದೇನೆಂದರೆ, ಭಾರತದ ಭವಿಷ್ಯ ಕಾಯಲು ಸಾಧ್ಯವಿಲ್ಲ ಎಂಬುದಾಗಿತ್ತು. ಉಳಿದವರು ಕೇವಲ ಚರ್ಚೆಗಳಲ್ಲಿ ಮತ್ತು ಟೀಕೆಗಳಲ್ಲಿ ಮುಳುಗಿದ್ದಾಗ, ಅದಾನಿ ಗ್ರೂಪ್ ಮಾತ್ರ ಗ್ರೌಂಡ್ ಮಟ್ಟದಲ್ಲಿ ನಿರಂತರವಾಗಿ ದೇಶದ ಬಲಿಷ್ಠ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು.
ಬಂದರು ವಲಯದಿಂದ ಇಂಧನ ವಲಯದವರೆಗೆ ಹರಡಿರುವ ಈ ಬೃಹತ್ ಸಮೂಹಕ್ಕೆ ಈ ಪ್ರಗತಿಯು ಅಷ್ಟು ಸುಲಭವಾಗಿ ಸಿಗಲಿಲ್ಲ. ಇದು ಅಸಾಮಾನ್ಯವಾದ ತಪಾಸಣೆ ಮತ್ತು ತೀವ್ರ ನಿಗಾದ ಮಧ್ಯೆಯೇ ಸಾಧ್ಯವಾಯಿತು. ಆದರೂ ತಾವು ಬಗ್ಗಲಿಲ್ಲ ಮತ್ತು ತಮ್ಮ ಕೆಲಸವನ್ನು ಎಲ್ಲೂ ನಿಲ್ಲಿಸಲಿಲ್ಲ ಎಂದು ಅದಾನಿ ಹೇಳಿದ್ದಾರೆ. ಏಕೆಂದರೆ ತಮ್ಮನ್ನು ಯಾವಾಗಲೂ ಗುರುತಿಸುವುದು ಸುತ್ತಲಿರುವ ಅನಗತ್ಯ ಗದ್ದಲದಿಂದಲ್ಲ, ಬದಲಿಗೆ ಆ ಗದ್ದಲಕ್ಕೆ ತಾವು ನೀಡುವ ಗಟ್ಟಿಯಾದ ಮತ್ತು ಯಶಸ್ವಿ ಪ್ರತಿಕ್ರಿಯೆಯಿಂದ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸವಾಲಿನ ತೀವ್ರತೆಯಿಂದಲ್ಲ, ತಮ್ಮ ಉದ್ದೇಶದ ಸ್ಪಷ್ಟತೆಯಿಂದ ಮತ್ತು ಟೀಕೆಗಳಿಂದಲ್ಲ, ತಾವು ನಿರಂತರವಾಗಿ ನಂಬಿಕೊಂಡು ಬಂದಿರುವ ರಾಷ್ಟ್ರ ನಿರ್ಮಾಣದ ಕೆಲಸದಿಂದ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಅವರು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಸಂಸ್ಥೆಯ ಮುಂದಿನ ದಾರಿಯನ್ನು ವಿವರಿಸಿದ ಅದಾನಿ, ತಾವು ನಂಬಿರುವ ಎರಡು ಪ್ರಮುಖ ಬೆಳವಣಿಗೆಯ ಅಂಶಗಳಾದ ಮೂಲಸೌಕರ್ಯ ಮತ್ತು ಕೃತಕ ಬುದ್ಧಿಮತ್ತೆಯನ್ನು ಕೇಂದ್ರೀಕರಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ವೇಗದ ಅಳವಡಿಕೆಗೆ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆ, ಬಲಿಷ್ಠ ಪ್ರಸರಣ ಜಾಲಗಳು, ಬೃಹತ್ ಡೇಟಾ ಸೆಂಟರ್‌ಗಳು ಮತ್ತು ಸುಧಾರಿತ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಹೂಡಿಕೆಯ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ. ಎಐ ಯೋಚಿಸುವುದಕ್ಕಿಂತ ಮುಂಚೆ ಅಲ್ಲಿ ಇಂಧನ ಹರಿಯಬೇಕು ಎಂದು ಮಾರ್ಮಿಕವಾಗಿ ಹೇಳಿರುವ ಅದಾನಿ, ಭವಿಷ್ಯದ ತಂತ್ರಜ್ಞಾನದ ನಾಯಕತ್ವವು ಕೇವಲ ಸಾಫ್ಟ್‌ವೇರ್ ಆವಿಷ್ಕಾರಗಳ ಮೇಲಷ್ಟೇ ಅಲ್ಲದೆ, ಭೌತಿಕ ಮೂಲಸೌಕರ್ಯಗಳ ಮೇಲೂ ಅಷ್ಟೇ ಪ್ರಮಾಣದಲ್ಲಿ ನಿರ್ಧರಿತವಾಗಿರುತ್ತದೆ ಎಂದಿದ್ದಾರೆ.
ಕಳೆದ 2025-26ರ ಹಣಕಾಸು ವರ್ಷದಲ್ಲಿ ಅದಾನಿ ಸಮೂಹವು ಬರೊಬ್ಬರಿ 1.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದೆ. ಇದು ಇಂಧನ, ಬಂದರುಗಳು, ವಿಮಾನ ನಿಲ್ದಾಣಗಳು, ಡೇಟಾ ಸೆಂಟರ್‌ಗಳು ಮತ್ತು ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು ಸಂಸ್ಥೆಯು ಕೈಗೊಂಡ ಅತ್ಯಂತ ದೊಡ್ಡ ವಾರ್ಷಿಕ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇಂಧನ ವಲಯದಲ್ಲಿ ಅದಾನಿ ಗ್ರೀನ್ ಕಂಪನಿಯು ಈ ವರ್ಷ 5.1 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತನ್ನ ನೆಟ್‌ವರ್ಕ್‌ಗೆ ಹೆಚ್ಚಿಸಿಕೊಂಡಿದ್ದು, ಇದರ ಒಟ್ಟು ಕಾರ್ಯಾಚರಣಾ ಸಾಮರ್ಥ್ಯ 19 ಗಿಗಾವ್ಯಾಟ್‌ಗಿಂತಲೂ ಅಧಿಕವಾಗಿದೆ. ಇದೇ ವೇಳೆ ಅದಾನಿ ನ್ಯೂ ಇಂಡಸ್ಟ್ರೀಸ್ ಸಂಸ್ಥೆಯು 5 ಮೆಗಾವ್ಯಾಟ್‌ನ ಗ್ರೀನ್ ಹೈಡ್ರೋಜನ್ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ಆರಂಭಿಸಿದೆ.
ಮೂಲಸೌಕರ್ಯ ವಲಯದಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ತನ್ನ ವಿದ್ಯುತ್ ಪ್ರಸರಣದ ಆರ್ಡರ್ ಬುಕ್ ಅನ್ನು ಭಾರಿ ಪ್ರಮಾಣದ ಅಂದರೆ 71,779 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ ಅದಾನಿ ಪವರ್ ಕಂಪನಿಯು 2032ರ ಹಣಕಾಸು ವರ್ಷದ ವೇಳೆಗೆ ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 42 ಗಿಗಾವ್ಯಾಟ್‌ಗೆ ಏರಿಸುವ ದೃಢ ಗುರಿ ಹೊಂದಿದ್ದು, ಇದಕ್ಕಾಗಿ 2 ಲಕ್ಷ ಕೋಟಿಗಿಂತಲೂ ಹೆಚ್ಚಿನ ವಿಸ್ತರಣಾ ಯೋಜನೆಯ ಕೆಲಸಗಳನ್ನು ಮುಂದುವರಿಸಿದೆ.
ಡಿಜಿಟಲ್ ಮೂಲಸೌಕರ್ಯಕ್ಕೆ ಒತ್ತು ನೀಡಿರುವ ಸಮೂಹವು 2030ರ ವೇಳೆಗೆ 2 ಗಿಗಾವ್ಯಾಟ್ ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಪ್ಲಾಟ್‌ಫಾರ್ಮ್ ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಇದಲ್ಲದೆ, ವಿಶಾಖಪಟ್ಟಣದಲ್ಲಿ ಅತ್ಯಾಧುನಿಕ ಡೇಟಾ ಸೆಂಟರ್ ಯೋಜನೆಗಾಗಿ ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸಾರಿಗೆ ವಲಯಕ್ಕೆ ಬರುವುದಾದರೆ, ಅದಾನಿ ಬಂದರುಗಳು ಈ ವರ್ಷ 500 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಸರಕುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಹೊಸ ದಾಖಲೆ ಬರೆದಿವೆ. ಇತ್ತ ವಿಮಾನ ನಿಲ್ದಾಣ ವಿಭಾಗವು ಬಹುನಿರೀಕ್ಷಿತ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಆಧುನಿಕ ಟರ್ಮಿನಲ್‌ಗಳನ್ನು ಸಾರ್ವಜನಿಕ ಕಾರ್ಯಾಚರಣೆಗೆ ತರುವ ಮೂಲಕ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ.
ಕಳೆದ 2025-26ರ ಹಣಕಾಸು ವರ್ಷದಲ್ಲಿ ಅದಾನಿ ಸಮೂಹದ ಎಲ್ಲಾ ಕಂಪನಿಗಳ ಒಟ್ಟು ಆದಾಯವು 2.92 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 7.4 ರಷ್ಟು ಹೆಚ್ಚಾಗಿದೆ. ಹಾಗೆಯೇ ಸಂಸ್ಥೆಯ ನಿವ್ವಳ ಲಾಭವು ಶೇಕಡಾ 13.9 ರಷ್ಟು ಭಾರಿ ಏರಿಕೆಯಾಗಿ 46,377 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಿದೆ.
ಭವಿಷ್ಯದ ದಿನಗಳನ್ನು ಅತ್ಯಂತ ವ್ಯವಹಾರಿಕವಾಗಿ ಅವಲೋಕಿಸಿರುವ ಗೌತಮ್ ಅದಾನಿ, ತಮ್ಮ ಗ್ರೂಪ್‌ಗೆ ಈಗ ಬಂಡವಾಳದ ಕೊರತೆಯ ಸವಾಲಾಗಿ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಭಾರತದ ಮೂಲಸೌಕರ್ಯ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ನಮ್ಮ ಮುಂದಿರುವ ಬೃಹತ್ ಯೋಜನೆಗಳನ್ನು ಎಷ್ಟು ವೇಗವಾಗಿ ಮತ್ತು ಗುಣಮಟ್ಟದಿಂದ ಜಾರಿಗೊಳಿಸುತ್ತೇವೆ ಎಂಬುದೇ ನಿಜವಾದ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಭಾರಿ ಪ್ರಮಾಣದ ವಿದ್ಯುತ್ ಬಯಸುವುದರಿಂದ, ಮುಂಬರುವ ದಿನಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದ್ದು, ಅದಾನಿ ಸಮೂಹವು ಈ ತಾಂತ್ರಿಕ ಕ್ರಾಂತಿಯ ನೇತೃತ್ವ ವಹಿಸಲು ಸಂಪೂರ್ಣವಾಗಿ ಸಜ್ಜಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.