ಕೇವಲ ಕಸ ಎಂದು ಬಿಸಾಡುವ ಬಾಳೆ ತ್ಯಾಜ್ಯದಿಂದ (Banana waste) ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮೂವರು ಸ್ನೇಹಿತರು ಬರೋಬ್ಬರಿ 2.5 ಕೋಟಿ ರೂ. ಮೌಲ್ಯದ ಯಶಸ್ವಿ ಸ್ಟಾರ್ಟ್ಅಪ್ (Startup) ಕಟ್ಟಿದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
ಬಾಳೆಗೊನೆ ಕಟಾವಾದ ಮೇಲೆ ತೋಟದಲ್ಲಿ ಉಳಿಯುವ ಬಾಳೆದಿಂಡನ್ನು ರೈತರು ಕೃಷಿ ತ್ಯಾಜ್ಯ ಅಂತಲೇ ಅಂದುಕೊಳ್ತಾರೆ. ಆದ್ರೆ ಬಿಹಾರದ ಜಗತ್ ಕಲ್ಯಾಣ್, ಸತ್ಯಂ ಕುಮಾರ್ ಮತ್ತು ನಿತೀಶ್ ಕುಮಾರ್ ವರ್ಮಾ ಅನ್ನೋ ಮೂವರು ಗೆಳೆಯರು ಇದೇ ದಿಂಡಿನಲ್ಲಿ ಬ್ಯುಸಿನೆಸ್ ಅವಕಾಶ ಹುಡುಕಿದರು. 2021ರಲ್ಲಿ ಇವರು 'Taruwar Agro' (ತರುವರ್ ಆಗ್ರೋ) ಕಂಪನಿ ಶುರು ಮಾಡಿದರು. ಕೃಷಿ ತ್ಯಾಜ್ಯವನ್ನು ಮೌಲ್ಯಯುತ ಕಚ್ಚಾವಸ್ತುವಾಗಿ ಬದಲಾಯಿಸಬಹುದು ಅನ್ನೋದಕ್ಕೆ ಇವರ ಪ್ರಯತ್ನವೇ ಬೆಸ್ಟ್ ಉದಾಹರಣೆ.
26
ಸವಾಲನ್ನೇ ಸಾಧನೆಯಾಗಿ ಬದಲಾಯಿಸಿದ ಗೆಳೆಯರು
ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದುವಾಗ ಭೇಟಿಯಾದ ಈ ಮೂವರು ಗೆಳೆಯರು, ಹೊಸ ಬ್ಯುಸಿನೆಸ್ ಅವಕಾಶಗಳ ಬಗ್ಗೆ ಹುಡುಕಾಟ ನಡೆಸಿದರು. ಬಿಹಾರದಲ್ಲಿ ಬಾಳೆ ಬೆಳೆದ ಮೇಲೆ ಉಳಿಯುವ ದಿಂಡಿನ ಸಮಸ್ಯೆಯನ್ನು ಇವರು ಸವಾಲಾಗಿ ನೋಡದೆ, ಬ್ಯುಸಿನೆಸ್ ಅವಕಾಶವಾಗಿ ಬದಲಾಯಿಸಿಕೊಂಡರು. 2021ರಲ್ಲಿ Taruwar Agro ಕಂಪನಿ ಶುರು ಮಾಡಿದ ಇವರು, ಬಾಳೆ ನಾರು ತೆಗೆಯುವ ತಂತ್ರಜ್ಞಾನಕ್ಕಾಗಿ KVK ವೈಶಾಲಿ (KVK Vaishali) ಸಂಸ್ಥೆಯ ಬೆಂಬಲ ಪಡೆದರು. ರೈತರಿಗೆ ತಲೆನೋವಾಗಿದ್ದ ತ್ಯಾಜ್ಯವನ್ನು ಲಾಭದಾಯಕ ಕಚ್ಚಾವಸ್ತುವಾಗಿ ಇವರು ಬದಲಾಯಿಸಿದ್ದಾರೆ.
36
ಬಾಳೆದಿಂಡಿನಿಂದ ನಾರು ತೆಗೆಯೋದು ಹೇಗೆ?
ಬಾಳೆಗೊನೆ ಕಟಾವಾದ ತಕ್ಷಣ ತೋಟಗಳಿಂದ ಬಾಳೆದಿಂಡುಗಳನ್ನು ಇವರು ಕಲೆಕ್ಟ್ ಮಾಡ್ತಾರೆ. ಆಮೇಲೆ, ವಿಶೇಷ ಯಂತ್ರಗಳನ್ನು ಬಳಸಿ ಈ ದಿಂಡಿನ ಹೊರಪದರದಿಂದ ನೈಸರ್ಗಿಕ ನಾರನ್ನು ಬೇರ್ಪಡಿಸುತ್ತಾರೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಹೇಳುವಂತೆ, ಈ ಬಾಳೆ ನಾರು ಹಲವು ಮೌಲ್ಯವರ್ಧಿತ ವಸ್ತುಗಳ ತಯಾರಿಕೆಗೆ ಹೇಳಿಮಾಡಿಸಿದ ಕಚ್ಚಾವಸ್ತು. ಯಾವುದೇ ರಾಸಾಯನಿಕ ಬಳಸದೆ ನಾರು ತೆಗೆಯುವ ಈ ವಿಧಾನ ಪರಿಸರಕ್ಕೂ ತುಂಬಾ ಒಳ್ಳೆಯದು.
ಈ ಕಂಪನಿ ಬಾಳೆ ನಾರನ್ನು ಬಳಸಿ ಹಲವು ವಸ್ತುಗಳನ್ನು ತಯಾರಿಸುತ್ತಿದೆ. ಯೋಗಾ ಮ್ಯಾಟ್, ಫೈಲ್ ಕವರ್, ಬುಟ್ಟಿಗಳು, ಪೂಜಾ ಮ್ಯಾಟ್ ಹಾಗೂ ವಿವಿಧ ಜವಳಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ, ಬಾಳೆದಿಂಡಿನಿಂದ ಎರೆಹುಳು ಗೊಬ್ಬರ (ವರ್ಮಿಕಂಪೋಸ್ಟ್) ಮತ್ತು ಬಾಳೆದಿಂಡಿನ ಜ್ಯೂಸ್ ಕೂಡ ತಯಾರಿಸ್ತಾರೆ. ಬಾಳೆ ನಾರಿನಿಂದ ವೀಗನ್ ಲೆದರ್, ಹಿಟ್ಟು ಮತ್ತು ಸ್ಟಾರ್ಚ್‌ನಂತಹ ಹೊಸ ವಸ್ತುಗಳನ್ನು ತಯಾರಿಸುವ ಬಗ್ಗೆಯೂ ಇವರು ರಿಸರ್ಚ್ ಮಾಡ್ತಿದ್ದಾರೆ.
56
ನಾರು ತೆಗೆದ ಮೇಲೆ ಉಳಿಯುವ ವೇಸ್ಟ್ ಕೂಡ ಇಲ್ಲಿ ಯೂಸ್ ಆಗುತ್ತೆ!
ಈ ಕಂಪನಿಯ ಸ್ಪೆಷಾಲಿಟಿ ಅಂದ್ರೆ, ಬಾಳೆ ನಾರು ತೆಗೆದ ಮೇಲೆ ಉಳಿಯುವ ತ್ಯಾಜ್ಯವನ್ನೂ ಇವರು ಬಿಸಾಡುವುದಿಲ್ಲ. ನಾರು ತೆಗೆದ ಮೇಲೆ ಉಳಿಯುವ ತಿರುಳು ಮತ್ತು ಇತರ ಭಾಗಗಳನ್ನು ಎರೆಹುಳು ಗೊಬ್ಬರ ತಯಾರಿಸಲು ಬಳಸುತ್ತಾರೆ. ಇದರಿಂದ ಕೃಷಿ ತ್ಯಾಜ್ಯಕ್ಕೆ ಮತ್ತಷ್ಟು ಮೌಲ್ಯ ಸಿಗುತ್ತದೆ. ಬಾಳೆಗಿಡದ ಪ್ರತಿಯೊಂದು ಭಾಗವನ್ನೂ ಬಳಸಿಕೊಳ್ಳುವ ಉದ್ದೇಶದಿಂದ, ಸಸ್ಯ ಪೋಷಣೆ ಮತ್ತು ಆಹಾರಕ್ಕೆ ಸಂಬಂಧಿಸಿದ ಬಳಕೆಗಳ ಬಗ್ಗೆಯೂ ಇವರು ಅಧ್ಯಯನ ಮಾಡ್ತಿದ್ದಾರೆ. ತ್ಯಾಜ್ಯವನ್ನು ಕಡಿಮೆ ಮಾಡಿ, ಬಾಳೆಗಿಡದ ಪ್ರತಿಯೊಂದು ಭಾಗಕ್ಕೂ ಬೆಲೆ ತಂದುಕೊಡುವ ಬೆಸ್ಟ್ ಮಾಡೆಲ್ ಇದಾಗಿದೆ.
66
15 ಲಕ್ಷದಲ್ಲಿ ಶುರುವಾಗಿ FY26ರಲ್ಲಿ 2.5 ಕೋಟಿ ರೂ. ಆದಾಯ!
ಜಗತ್ ಕಲ್ಯಾಣ್, ಸತ್ಯಂ ಕುಮಾರ್ ಮತ್ತು ನಿತೀಶ್ ಕುಮಾರ್ ವರ್ಮಾ ಸೇರಿ ಸುಮಾರು 15 ಲಕ್ಷ ರೂ. ಆರಂಭಿಕ ಬಂಡವಾಳ ಹಾಗೂ 5 ಲಕ್ಷ ರೂ. ವರ್ಕಿಂಗ್ ಕ್ಯಾಪಿಟಲ್‌ನೊಂದಿಗೆ Taruwar Agro ಶುರು ಮಾಡಿದರು. ಈ ಹಣವನ್ನು ತಮ್ಮ ಉಳಿತಾಯ ಮತ್ತು ಕುಟುಂಬದ ಬೆಂಬಲದಿಂದ ಹೊಂದಿಸಿದರು. ಸೆಪ್ಟೆಂಬರ್ 2026ರ YourStory ವರದಿ ಪ್ರಕಾರ, FY26 ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಸುಮಾರು 2.5 ಕೋಟಿ ರೂ. ತಲುಪಿದೆ. ರೈತರಿಂದ ಬಾಳೆದಿಂಡು ಖರೀದಿಸುವುದರಿಂದ ಅವರಿಗೂ ಎಕ್ಸ್‌ಟ್ರಾ ಆದಾಯ ಸಿಗುತ್ತಿದೆ. ಕೃಷಿ ತ್ಯಾಜ್ಯಕ್ಕೆ ಹೊಸ ಬ್ಯುಸಿನೆಸ್ ಮೌಲ್ಯ ತಂದುಕೊಟ್ಟ ಈ ಪ್ರಯತ್ನ, ಸ್ಥಳೀಯರಿಗೆ ಅದರಲ್ಲೂ ಶೇ.60ರಷ್ಟು ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.