ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಚೆನ್ನೈ ಮೂಲದ ಗಾಯಕಿ ಸಿವಶ್ರೀ ಜತೆ ಮುಂದಿನ ವರ್ಷ ಮಾರ್ಚ್ 4ರಂದು ತೇಜಸ್ವಿ ಸೂರ್ಯ ಹಸೆಮಣೆ ಏರಲಿದ್ದಾರೆ.
ಬಿಜೆಪಿಯ 'ಯಂಗ್ ಆ್ಯಂಡ್ ಡೈನಾಮಿಕ್' ಮತ್ತು 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಂಸದ ಎಂದೇ ಕರೆಯಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಹೋದಲೆಲ್ಲಾ ಸದಾ ಕಾಡುತ್ತಿತ್ತು.
ಈಗ ಕೊನೆಗೂ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಚೆನ್ನೈ ಮೂಲದ ಗಾಯಕಿ ಜೊತೆ ಅವರು ಹಸೆಮಣೆ ಏರಲಿದ್ದಾರೆ ಎಂದು ವರದಿ ಆಗಿದೆ.
ಹಲವು ಸಂದರ್ಭಗಳಲ್ಲಿ ತೇಜಸ್ವಿ ಸೂರ್ಯ ಅವರಲ್ಲಿ ಮದುವೆ ಬಗ್ಗೆ ಕೇಳಿದ್ದರೂ ಅವರು ಈ ವಿಚಾರದ ಬಗ್ಗೆ ಬಾಯ್ಬಿಟ್ಟಿರಲಿಲ್ಲ, ಆದರೀಗ ಸದ್ದಿಲ್ಲದೇ, ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಗಾಯಕಿ, ಭರತನಾಟ್ಯ ಕಲಾವಿದೆಯಾಗಿರುವ ಚೆನ್ನ ಮೂಲದ ಸ್ಕಂದಕುಮಾರ್ ಎನ್ನುವವರನ್ನು ವರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿಗೆಯ ಮುದ್ರೆ ಹಾಕಿದ್ದು, ಮಾರ್ಚ್ 4ಕ್ಕೆ ವಿವಾಹ ನಡೆಯಲಿದೆ
ಸಿವಶ್ರೀ ಸ್ಥಂದ ಪ್ರಸಾದ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿ ಪಡೆದು ಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್ ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಿವಶ್ರೀ ಅವರ ಯೂಟ್ಯೂಬ್ ಚಾನೆಲ್‌ಗೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಯೂಟ್ಯೂಬ್‌ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಸಿವಶ್ರೀ ಸ್ಕಂದಕುಮಾರ್ ಕಳೆದ ಜನವರಿಯಲ್ಲಿ ರಾಮನವಮಿ ಸಂದರ್ಭದಲ್ಲಿ ಕನ್ನಡದ ಭಕ್ತಿಗೀತೆಯಾದ ಪೂಜಿಸಲೆಂದೇ ಹೂಗಳ ತಂದೆ ಹಾಡನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಾಡಿದ್ದರು. ಈ ಹಾಡಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಟ್ವಿಟ್ಟರ್‌ನಲ್ಲಿ ವೀಡಿಯೋ ಲಿಂಕ್ ಶೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಪ್ರಧಾನಿ ಬರೆದುಕೊಂಡಿದ್ದರು.