ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ನಟಿ ರಮ್ಯಾ ಬೆಂಬಲ ಸೂಚಿಸಿದ್ದಾರೆ. ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟದಲ್ಲಿ ಹಲವು ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದಾರೆ.
ಕಳೆದ ಎಂಟು ದಿನಗಳಿಂದ ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟಿಸ್ತಿದ್ದಾರೆ. ಇದೀಗ ಅವರ ಹೋರಾಟಕ್ಕೆ ನಟಿ ರಮ್ಯಾ ಅವರು ಸಾಥ್ ನೀಡಿದ್ದಾರೆ. ನಟಿ ರಮ್ಯಾ ಇಂದು ಸಂಜೆ ನಗರದ ಫ್ರೀಡಂ ಪಾರ್ಕ್‌ಗೆ ಎಂಟ್ರಿ ನೀಡಿದರು. ಆದರೆ ರಮ್ಯಾ ಅವರನ್ನು ನೋಡುತ್ತಿದ್ದಂತೆಯೇ ಪ್ರತಿಭಟನಾಕಾರರು ಜೋರಾಗಿ ಕೂಗಿದ್ದಾರೆ. ಸರ್ಕಾರದ ವಿರುದ್ಧ ಮಹಿಳಾ ಮಣಿಗಳ ಘೋಷಣೆ ಜೋರಾಯಿತು.
24
ನೋವುಗಳ ಆಲಿಸಿದ ರಮ್ಯಾ
ನಂತರ ರಮ್ಯಾ ಅವರು ಆಶಾ ಕಾರ್ಯಕರ್ತರ ನೋವುಗಳನ್ನ ಆಲಿಸಿದರು. ಆಶಾ ಹೋರಾಟದ ಮುಖಂಡೆ ನಾಗಲಕ್ಷ್ಮಿ ಜೊತೆ ಮಾತುಕತೆ ನಡೆಸಿದರು. ಸಂಬಳ ಜಾಸ್ತಿ ಆಗಿಲ್ಲ. ಕಳೆದ ಬಾರಿ ಕೊಟ್ಟಿದ್ದ ಭರವಸೆಯನ್ನೇ ಲೀಡರ್‍ಗಳು ಹೇಳುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕೊಟ್ಟ ಭರವಸೆಯನ್ನೇ ನಾಯಕರು ಕೊಡುತ್ತಿದ್ದಾರೆ ಎಂದು ನೋವು ತೋಡಿಕೊಂಡರು. ಆಗ ರಮ್ಯಾ ಅವರು ಸಂಬಳ ಸರಿಯಾಗಿ ಬರುತ್ತಾ ಇಲ್ವಾ ಎಂಬ ಮಾಹಿತಿ ಕೇಳಿದರು. ನಂತರ ದುಡ್ಡು ಜಾಸ್ತಿನೇ ಮಾಡಿಲ್ಲವಾ ಎಂದು ಕೇಳುತ್ತ ಆಶಾ ಕಾರ್ಯಕರ್ತೆಯ ನೋವುಗಳನ್ನ ಆಲಿಸಿದರು.
34
ಯಾಕೆ ಪ್ರತಿಭಟನೆ ನಡೆಸ್ತಿದ್ದಾರೆ?
ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು 2ನೇ ವಾರಕ್ಕೆ ಕಾಲಿಟ್ಟಿದೆ. ಹಗಲು-ರಾತ್ರಿ, ಚಳಿ-ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸ್ತಿದ್ದಾರೆ. ಸರ್ಕಾರ ನಮಗೆ ನೀಡುತ್ತಿರುವ ಮಾಸಿಕ ಗೌರವಧನ ಸಾಕಾಗುತ್ತಿಲ್ಲ. ಕನಿಷ್ಟ ₹15,000ಕ್ಕೆ ಹೆಚ್ಚಿಸಬೇಕು ಅನ್ನೋದು ಆಶಾ ಕಾರ್ಯಕರ್ತೆಯರ ಆಗ್ರಹ ಆಗಿದೆ. ಜೊತೆಗೆ ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ₹5 ಲಕ್ಷ ಇಡಿಗಂಟು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನಿರಂತರವಾಗಿ ಪ್ರತಿಭಟನೆ ನಡೆಯುತ್ತಿರೋದ್ರಿಂದ ಅನೇಕ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ. ವರದಿಗಳ ಪ್ರಕಾರ ಧರಣಿಯಲ್ಲಿ ಪಾಲ್ಗೊಂಡಿದ್ದ 20ಕ್ಕೂ ಹೆಚ್ಚು ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ. ಇನ್ನು ಅವರ ಹೋರಾಟಕ್ಕೆ ವಿವಿಧ ಸಂಘಟನೆಗಳು, ಮಾಜಿ ಸಂಸದೆ ಸುಮಲತಾ ಹಾಗೂ ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ರಮ್ಯಾ ಕೂಡ ಬೆಂಬಲ ಸೂಚಿಸಿದ್ದಾರೆ.