ಜೀವ ಉಳಿಸುವ ಕಾರ್ಯಕ್ಕೆ ನಮ್ಮ ಮೆಟ್ರೋ ಸಾಥ್‌! ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಜೀವಂತ ಹೃದಯ ಸಾಗಣೆ

Published : Nov 24, 2026, 04:02 PM IST

ತುರ್ತು ವೈದ್ಯಕೀಯ ಸೇವೆಯಲ್ಲಿ ಸಮಯ ಎಷ್ಟು ಅಮೂಲ್ಯ ಎಂಬುದಕ್ಕೆ ಬೆಂಗಳೂರು ನಮ್ಮ ಮೆಟ್ರೋ ಮತ್ತೊಮ್ಮೆ ಸಾಕ್ಷಿಯಾಗಿದೆ. ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರದವರೆಗೆ ಜೀವಂತ ಹೃದಯವನ್ನು ಕೇವಲ 1 ಗಂಟೆ 10 ನಿಮಿಷಗಳಲ್ಲಿ ಯಶಸ್ವಿಯಾಗಿ ಸಾಗಿಸಲಾಗಿದೆ.

PREV
15
ನಮ್ಮ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ಸಾಗಣೆ

ಬೆಂಗಳೂರು: ಸಿಲಿಕಾನ್ ಸಿಟಿಯ ವಿಪರೀತ ವಾಹನ ದಟ್ಟಣೆಯನ್ನು ದಾಟಿ ಅಮೂಲ್ಯ ಜೀವವೊಂದನ್ನು ಉಳಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತೊಮ್ಮೆ ಮಾನವೀಯತೆ ಮತ್ತು ಸಮಯಪ್ರಜ್ಞೆ ಮೆರೆದಿದೆ. ಮಂಗಳವಾರ ಮಧ್ಯಾಹ್ನ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ದಾನಿಯೊಬ್ಬರ ಜೀವಂತ ಹೃದಯವನ್ನು ನಮ್ಮ ಮೆಟ್ರೋ ರೈಲಿನ ಮೂಲಕ ಅತ್ಯಂತ ಸುರಕ್ಷಿತವಾಗಿ ಮತ್ತು ವೇಗವಾಗಿ ಸಾಗಿಸಲಾಗಿದೆ.

25
ಕಾರ್ಯಾಚರಣೆ ನಡೆದಿದ್ದು ಹೇಗೆ?

ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅತ್ಯಂತ ನಿರ್ಣಾಯಕವಾಗಿರುತ್ತದೆ. ರಸ್ತೆ ಮಾರ್ಗವಾಗಿ ಸಾಗಿದರೆ ಟ್ರಾಫಿಕ್‌ನಿಂದಾಗಿ ಹೆಚ್ಚಿನ ಸಮಯ ವ್ಯರ್ಥವಾಗುವ ಸಾಧ್ಯತೆಯಿದ್ದ ಕಾರಣ, ವೈದ್ಯಕೀಯ ತಂಡವು ಮೆಟ್ರೋ ಸೇವೆಯ ನೆರವು ಕೋರಿತ್ತು.

ನಿಲ್ದಾಣ ಪ್ರವೇಶ: ಮಧ್ಯಾಹ್ನ 12:20ಕ್ಕೆ ಸ್ಪರ್ಶ್ ಆಸ್ಪತ್ರೆಯ ಐವರು ತಜ್ಞ ವೈದ್ಯಕೀಯ ಸಿಬ್ಬಂದಿ, ಹೃದಯವನ್ನು ಇರಿಸಲಾಗಿದ್ದ ವಿಶೇಷ ಸಾಗಣೆ ಪೆಟ್ಟಿಗೆಯೊಂದಿಗೆ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದರು.

35
ಭದ್ರತೆಯೊಂದಿಗೆ ಪ್ರಯಾಣ

ರೈಲು ಪ್ರಯಾಣ ಆರಂಭ: ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅನ್ವಯ ಭದ್ರತಾ ತಪಾಸಣೆ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಕೇವಲ ಮೂರೇ ನಿಮಿಷಗಳಲ್ಲಿ ಪೂರ್ಣಗೊಳಿಸಿದ ತಂಡ, ಮಧ್ಯಾಹ್ನ 12:23ಕ್ಕೆ ಮೆಟ್ರೋ ರೈಲನ್ನು ಹತ್ತಿತು.

ಭದ್ರತಾ ವ್ಯವಸ್ಥೆ: ಪ್ರಯಾಣದುದ್ದಕ್ಕೂ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಬಿಎಂಆರ್‌ಸಿಎಲ್‌ನ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಕೂಡ ವೈದ್ಯಕೀಯ ತಂಡದೊಂದಿಗೆ ರೈಲಿನಲ್ಲಿ ಪ್ರಯಾಣಿಸಿದರು.

45
1 ಗಂಟೆ 10 ನಿಮಿಷಗಳಲ್ಲಿ ತಲುಪಿದ ಹೃದಯ

ಗೋರಗುಂಟೆಪಾಳ್ಯದಿಂದ ಹೊರಟ ಮೆಟ್ರೋ ರೈಲು, ಮಧ್ಯಾಹ್ನ 1:24ರ ಸುಮಾರಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣವನ್ನು ತಲುಪಿತು. ಒಟ್ಟು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ಇಡೀ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ಬೊಮ್ಮಸಂದ್ರ ನಿಲ್ದಾಣದಿಂದ ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹೃದಯವನ್ನು ಬೊಮ್ಮಸಂದ್ರದ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಆಸ್ಪತ್ರೆಗೆ ರವಾನಿಸಲಾಯಿತು.

55
ಬಿಎಂಆರ್‌ಸಿಎಲ್‌ನ 8ನೇ ಯಶಸ್ವಿ ಅಂಗಾಂಗ ಸಾಗಣೆ

ಬೆಂಗಳೂರು ಮೆಟ್ರೋ ರೈಲು ನಿಗಮವು ಜೀವ ಉಳಿಸುವ ಇಂತಹ ತುರ್ತು ವೈದ್ಯಕೀಯ ಕಾರ್ಯಗಳಿಗೆ ಕೈಜೋಡಿಸುತ್ತಿರುವುದು ಇದೇ ಮೊದಲೇನಲ್ಲ. ಬಿಎಂಆರ್‌ಸಿಎಲ್ ನೆರವು ನೀಡಿದ ಮಾನವ ಅಂಗಾಂಗ ಸಾಗಣೆಯ ಎಂಟನೇ ಪ್ರಕರಣ ಇದಾಗಿದ್ದು, ಜೀವಂತ ಹೃದಯ ಸಾಗಣೆಯ ಐದನೇ ಯಶಸ್ವಿ ಕಾರ್ಯಾಚರಣೆಯಾಗಿದೆ.

ಸಾರ್ವಜನಿಕ ಸಾರಿಗೆಯಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುವುದರ ಜೊತೆಗೆ, ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಇಂತಹ ಸಮಯಸಂವೇದಿ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿರಂತರವಾಗಿ ನೆರವು ನೀಡಲು ಬದ್ಧವಾಗಿರುವುದಾಗಿ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಮೆಟ್ರೋ ಸಿಬ್ಬಂದಿ ಮತ್ತು ವೈದ್ಯರ ಈ ಸಮನ್ವಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Read more Photos on
click me!

Recommended Stories