
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಕೊನೆಗೂ ಭಾರತದಲ್ಲಿ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಇದು ಆರಂಭಿಕ ಬೆಲೆ ರೂ 5.59 ಲಕ್ಷ ಬೆಲೆಗೆ (ಎಕ್ಸ್-ಶೋರೂಂ ಬೆಲೆ) ಲಭ್ಯವಿದ್ದು ಇಂದಿನಿಂದ ಈ ವಾಹನಕ್ಕಾಗಿ ಗ್ರಾಹಕರು ಬುಕ್ ಮಾಡಬಹುದಾಗಿದೆ. ಹೊಸ ಬದಲಾವಣೆಯೊಂದಿಗೆ ಟಾಟಾ ಪಂಚ್ ಪೇಸ್‌ಲಿಫ್ಟ್, ತನ್ನ ಪ್ರತಿಸ್ಪರ್ಧಿಗಳಾದ ಹುಂಡೈ ಎಕ್ಸ್‌ಟರ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮಹೀಂದ್ರಾ XUV 3XO ಮುಂತಾದವುಗಳಿಗಿಂತ ವಿಶಿಷ್ಠವೆನಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದುಮ ಹೊಸದಾಗಿ ಬಿಡುಗಡೆಯಾದ ಈ ಟಾಟಾ ಪಂಚ್ ಫೇಸ್‌ಲಿಫ್ಟ್ ವಿಶೇಷತೆ ಏನು ಎಂದು ತಿಳಿಯೋಣ ಬನ್ನಿ..
ಟಾಟಾ ಕಂಪನಿ ಟಾಟಾ ಪಂಚ್ ಫೇಸ್‌ಲಿಫ್ಟ್ ವಾಹನವನ್ನು ಬಿಡುಗಡೆ ಮಾಡುವುದಕ್ಕೂ ಮೊದಲು ಟೀಸರ್ ಬಿಡುಗಡೆ ಮಾಡಿತ್ತು. ಈ ಟೀಸರ್‌ನಲ್ಲಿ ವಾಹನದ ಒಳಾಂಗಣ ಹಾಗೂ ಮೇಲ್ದರ್ಜೆಗೇರಿಸಿದ ವಿನ್ಯಾಸದ ಬಗ್ಗೆ ರಿವೀಲ್ ಮಾಡಿತ್ತು. ಈ ಎಸ್‌ಯುವಿ ಗಾಡಿ ತನ್ನ ಸಿಗ್ನೇಚರ್ ಬಾಕ್ಸಿ ನಿಲುವನ್ನು ಮುಂದುವರೆಸಿದ್ದು, ಬದಲಾಯಿಸಿದ ವಿನ್ಯಾಸಗಳು ಹೆಚ್ಚು ತೀಕ್ಷ್ಣ ಹಾಗೂ ಸಮಕಾಲೀನ ಆಕರ್ಷಣೆ ನೀಡುತ್ತಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್‌ನ ಈ ಸ್ಟೈಲ್ ಈಗ ಪಂಚ್ ಪಂಚ್.ಇವಿ(Punch- Punch.ev)ಇಲೆಕ್ಟ್ರಿಕ್ ಗಾಡಿಯೊಂದಿಗೆ ಹೋಲಿಕೆಯಾಗುತ್ತದೆ. ಮರು ವಿನ್ಯಾಸಗೊಳಿಸಿದ ಎಲ್ಇಡಿ ಹೆಡ್‌ಲೈಟ್‌ಗಳು, ಸ್ಲೀಕರ್ ಡಿಆರ್‌ಎಲ್‌ಗಳು ಹಾಗೂ ಕಾರ್ನರಿಂಗ್ ಫಂಕ್ಷನ್ ಎಲ್‌ಇಡಿ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಆದರೆ ಇದರಲ್ಲಿ ಟಾಟಾದ ಕೆಲವು ಹೊಸ ಮಾದರಿಯ ಗಾಡಿಗಳಲ್ಲಿ ಇರುವಂತೆ ಪೂರ್ಣ ಅಗಲವಾದ ಎಲ್‌ಇಡಿ ಲೈಟ್ ಬಾರ್‌ಗಳು ಇಲ್ಲ. ಆದರೆ ಗ್ರಿಲ್, ಸ್ಪೋರ್ಟಿಯರ್ ಬಂಪರ್,ತಾಜಾ ಮಿಶ್ರಲೋಹ ವಿನ್ಯಾಸ ಹಾಗೂ ಹೊಸ ಎಲ್‌ಇಡಿ ವಾಷರ್ ವೈಪರ್ ಹೊಂದಿದೆ. ಇದು ಸುಧಾರಿತ ಅನುಕೂಲತೆಯನ್ನು ಹೊಂದಿದ್ದು, ಬಳಸಲು ಸುಲಭವಾಗಿದೆ. ಈ ಹೊಸತನದೊಂದಿಗೆ ಟಾಟಾ ಪಂಚ್ ಈಗ ಸೈಂಟಾಫಿಕ್(ನೇರಳೆ ಪಿಂಕ್ ಮಿಶ್ರಿತ ಬಣ್ಣ), ಕ್ಯಾರಮೆಲ್(ಹಳದಿ ಮಿಶ್ರಿತ ಬಣ್ಣ), ಬೆಂಗಾಲ್ ರೂಜ್(ಗಾಢವಾದ ಮೆರುನ್ ಬಣ್ಣ ಮತ್ತು ಕೂರ್ಗ್ ಕ್ಲೌಡ್ಸ್(ಮೋಡ ಮಿಶ್ರಿತವಾದ ನೀಲಿ) ಬಣ್ಣಗಳಲ್ಲಿ ಲಭ್ಯವಾಗಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್ ಒಳಭಾಗದಲ್ಲಿ ತೀಕ್ಷ್ಣವಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿದೆ, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ಬ್ರ್ಯಾಂಡ್‌ನ ಇತ್ತೀಚಿನ ಒಳಾಂಗಣ ಸ್ಟೈಲಿಂಗ್ ವಿಧಾನಕ್ಕೆ ಹೊಂದಿಕೆಯಾಗುವ ಮರುವಿನ್ಯಾಸಗೊಳಿಸಲಾದ ನಿಯಂತ್ರಣಗಳೊಂದಿಗೆ ರಿಫ್ರೆಶ್ಡ್ ಒಳಾಂಗಣವನ್ನು ಹೊಂದಿದೆ. ಇದು ಡ್ಯುಯಲ್ ಟೋನ್ ಇಂಟೀರಿಯರ್, ಕೈಗಳಿಗೆ ವಿಶ್ರಾಂತಿ ನೀಡುವ ಸೆಂಟ್ರಾಲಕ್ಸ್ ನಿಯಂತ್ರಣ, 26.03 ಸೆಂ.ಮೀ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, 17.8 ಸೆಂ.ಮೀ ಡಿಜಿಟಲ್ ಕ್ಲಸ್ಟರ್, 360-ಡಿಗ್ರಿ ಸರೌಂಡ್ ವ್ಯೂ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಆಟೋ-ಡಿಮ್ಮಿಂಗ್ ಐಆರ್‌ವಿಎಂ ಅನ್ನು ಹೊಂದಿದೆ.
ಸುರಕ್ಷತೆ ಬಗ್ಗೆ ಹೇಳುವುದಾದರೆ ಟಾಟಾ ಪಂಚ್ ಫೇಸ್‌ಲಿಫ್ಟ್ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯ ರೇಟಿಂಗ್‌ನಲ್ಲಿ 5 ಸ್ಟಾರ್ ಹೊಂದಿದೆ. ಇದು ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್ ಡಿಸೆಂಟ್ ಕಂಟ್ರೋಲ್(ಬೆಟ್ಟ ಪ್ರದೇಶ ಅಥವಾ ಇಳಿಜಾರಿನ ಪ್ರದೇಶಗಳಲ್ಲಿ ವಾಹನದ ವೇಗವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ವ್ಯವಸ್ಥೆ), ಮಕ್ಕಳ ಕಾರು ಸೀಟನ್ನು ಫಿಕ್ಸ್ ಮಾಡುವ ಐಎಸ್‌ಒ ಫಿಕ್ಸ್ ಮುಂತಾದ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಹೊಸ 1.2 ಲೀಟರ್ ಐಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿದ್ಧಪಡಿಸಲಾಗಿದ್ದು, ಇದನ್ನು 6 ಸ್ಪೀಡ್ ಎಂಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ 5500 ಆರ್‌ಪಿಎಂ ನಲ್ಲಿ 120 PS ಮತ್ತು 1750 ರಿಂದ 4000 rpm ನಲ್ಲಿ 170 Nm ಅನ್ನು ಉತ್ಪಾದಿಸುತ್ತದೆ. ಈ ಪವರ್‌ಮಿಲ್ 105 ps/ಟನ್‌ನ ಶಕ್ತಿ-ತೂಕದ ಅನುಪಾತ, 30% ಅಂಟಿಕೊಳ್ಳುವಿಕೆ ಮತ್ತು ಕೇವಲ 11.1 ಸೆಕೆಂಡುಗಳಲ್ಲಿ 0-100 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಅತ್ಯುತ್ತಮವಾದ ವರ್ಗವಾಗಿದೆ ಎಂದು ಹೇಳಲಾಗುತ್ತದೆ.
ಇದು 1.2 ಲೀಟರ್ ರೆವೊಟ್ರಾನ್ ಎಂಜಿನ್ ಅನ್ನು ಹೊಂದಿದ್ದು, ಇದು 5 ಸ್ಪೀಡ್ MT ಮತ್ತು AMT ಗೇರ್‌ಬಾಕ್ಸ್ ಮತ್ತು ಟಾರ್ಕ್ ಪರಿವರ್ತಕದೊಂದಿಗೆ ಆಯ್ಕೆಗಳಾಗಿ ಲಭ್ಯವಿದೆ. ಇದು 6000 rpm ನಲ್ಲಿ 87.8 PS ಮತ್ತು 3250 rpm ನಲ್ಲಿ 115 Nm ನ ಗರಿಷ್ಠ ಶಕ್ತಿ ಮತ್ತು ಟಾರ್ಕ್ ಔಟ್‌ಪುಟ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಾರ್ಖಾನೆಯಲ್ಲಿ ಅಳವಡಿಸಲಾಗುವ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತದೆ, ಇದು 6000 rpm ನಲ್ಲಿ 73.4 PS ಮತ್ತು 35000 rpm ನಲ್ಲಿ 103 Nm ಅನ್ನು ನೀಡುತ್ತದೆ. ಟಾಟಾ ಪಂಚ್ ಫೇಸ್‌ಲಿಫ್ಟ್ ಆರು ರೀತಿಗಳಲ್ಲಿ ಲಭ್ಯವಿದ್ದು, ಸ್ಮಾರ್ಟ್, ಪ್ಯೂರ್, ಪ್ಯೂರ್ +, ಅಡ್ವೆಂಚರ್, ಅಕಂಪ್ಲಿಶ್ಡ್ ಮತ್ತು ಅಕಂಪ್ಲಿಶ್ಡ್ + ಎಸ್. ಹೊಸ ಟಾಟಾ ಪಂಚ್‌ನ ಬೆಲೆಗಳು ರೂ 5.59 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ.