16 ಲಕ್ಷ ಕೊಟ್ಟು ತಂಡಕ್ಕೆ ಜ್ಯೋತಿಷಿಯನ್ನು ನೇಮಕ ಮಾಡಿದ ಭಾರತ ಫುಟ್‌ಬಾಲ್ ತಂಡ!

By Santosh Naik  |  First Published Jun 22, 2022, 6:33 PM IST

24 ತಂಡಗಳ ಎಎಫ್‌ಸಿ ಏಷ್ಯನ್ ಕಪ್ ಫೈನಲ್ಸ್‌ಗೆ ಭಾರತ ಅರ್ಹತೆ ಪಡೆದುಕೊಂಡ ಬೆನ್ನಲ್ಲಿಯೇ, ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟ (ಎಐಎಫ್ಎಫ್) ತಂಡಕ್ಕೆ ಅರ್ಹತಾ ಟೂರ್ನಿಯ ವೇಳೆ ಪ್ರೇರಣೆ ನೀಡಲು ನೇಮಿಸಿಕೊಂಡಿದ್ದ ಜ್ಯೋತಿಷಿಗೆ 16 ಲಕ್ಷ ರೂಪಾಯಿ ಪಾವತಿ ಮಾಡಿದೆ ಎಂದು ಹೇಳಲಾಗಿದೆ. 
 


ನವದೆಹಲಿ (ಜೂನ್ 22): ಇತ್ತೀಚೆಗೆ ನಡೆದ ಎಎಫ್‌ಸಿ ಏಷ್ಯನ್ ಕಪ್ (AFC Asian Cup) ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಕಂಡಿರುವ ಯಶಸ್ಸಿಗೆ ಜ್ಯೋತಿಷಿಯೊಬ್ಬರು ಕಾರಣರಾದರೇ?, ಹೌದು ಇಂಥದ್ದೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದು ಸ್ವತಃ ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟ(ಎಐಎಫ್ಎಫ್). ಭಾರತ ಫುಟ್‌ಬಾಲ್ ತಂಡದ (Indian Football Team) ಅದೃಷ್ಟರೇಖೆ ಹೇಗಿದೆ ಎಂದು ಪ್ರತಿದಿನ ಪರಿಶೀಲಿಸಲು ತಂಡಕ್ಕೆ ಜ್ಯೋತಿಷಿಯೊಬ್ಬರನ್ನು(astrologer) ತಂಡ ನೇಮಕ ಮಾಡಿದೆ.

24 ತಂಡಗಳ ಎಎಫ್‌ಸಿ ಏಷ್ಯನ್ ಕಪ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ರಾಷ್ಟ್ರೀಯ ತಂಡಕ್ಕೆ ಪ್ರೇರಣೆ ನೀಡಲು ನೇಮಿಸಿಕೊಂಡಿದ್ದ ಜ್ಯೋತಿಷ್ಯದ ಏಜೆನ್ಸಿಗೆ ಎಐಎಫ್ಎಫ್ (AIFF) ಬರೋಬ್ಬರಿ 16 ಲಕ್ಷ ರೂಪಾಯಿ ನೀಡಿದೆ ಎಂದು ವರದಿಯಾಗಿದೆ. ಸುನೀಲ್ ಛೇಟ್ರಿ (sunil chhetri) ನೇತೃತ್ವದ ಭಾರತ ತಂಡವು ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದನೆ ಮಾಡಿದೆ.

"ಏಷ್ಯನ್ ಕಪ್ ಅರ್ಹತಾ ಟೂರ್ನಿಗೂ ಮುನ್ನ ರಾಷ್ಟ್ರೀಯ ತಂಡಕ್ಕೆ ಪ್ರೇರಣೆ ನೀಡಲು ಒಬ್ಬರನ್ನು ನೇಮಿಸಲಾಗಿತ್ತು. ನಂತರ ಈ ಸಂಸ್ಥೆ ಜ್ಯೋತಿಷ್ಯ ಸಂಸ್ಥೆ ಎನ್ನುವುದು ಬೆಳಕಿಗೆ ಬಂದಿದೆ' ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ. 'ನಿಜವಾಗಿ ಹೇಳುವುದಾದರೆ, ತಂಡವನ್ನು ಪ್ರೇರೇಪಿಸಲು ಜ್ಯೋತಿಷಿಯನ್ನು ನೇಮಿಸಲಾಗಿದೆ. 16 ಲಕ್ಷ ಮೊತ್ತದ ಬೃಹತ್ ಮೊತ್ತದ ಪಾವತಿಯನ್ನೂ ಅವರಿಗೆ ಮಾಡಲಾಗಿದೆ' ಎಂದು ಮೂಲಗಳು ಹೇಳಿವೆ.

ಜ್ಯೋತಿಷ್ಯ ಸಂಸ್ಥೆಯು ಬ್ಲ್ಯೂ ಟೈಗರ್ಸ್ ತಂಡದೊಂದಿಗೆ ಮೂರು ಅವಧಿಗಳನ್ನು ತೆಗೆದುಕೊಂಡಿತ್ತು. ಈ ಬಗ್ಗೆ ಮಾತನಾಡಿರುವ ಕೋಲ್ಕತ ಮೂಲದ ಆಟಗಾರ, "ನಾನು ತಂಡಕ್ಕೆ ತಡವಾಗಿ ಸೇರಿಕೊಂಡಿದ್ದೆ. ಇಂಥದ್ದೊಂದು ಸೆಷನ್ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ' ಎಂದು ಹೇಳಿದ್ದಾರೆ. ಇನ್ನು ಎಐಎಫ್ಎಫ್ (All India Football Federation) ಮುಖ್ಯ ಕಾರ್ಯದರ್ಶಿ ಸುನಂದೋ ಧರ್ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತದ ಮಾಜಿ ಗೋಲ್‌ಕೀಪರ್ ತನ್ಮಯ್ ಬೋಸ್ ಈ ಕಲ್ಪನೆಯನ್ನು ಅಪಹಾಸ್ಯ ಮಾಡಿದ್ದಲ್ಲದೆ, ಈ ಮೂಲಕ ಎಐಎಫ್ಎಫ್ ತನ್ನನ್ನು ತಾನೇ ಕುಚೋದ್ಯ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. "ಎಐಎಫ್‌ಎಫ್ ಸರಿಯಾದ ರೀತಿಯಲ್ಲಿ ಯೂತ್ ಲೀಗ್‌ಗಳನ್ನು ನಡೆಸಲು ಪದೇ ಪದೇ ವಿಫಲವಾಗಿದೆ. ಅದರ ನಡುವೆ ಅನೇಕ ಪ್ರತಿಷ್ಠಿತ ಪಂದ್ಯಾವಳಿಗಳನ್ನು ರದ್ದು ಮಾಡುವಂತೆ ಹೇಳಲಾಗತ್ತದೆ. ಈ ರೀತಿಯ ಘಟನೆಗಳು ಭಾರತೀಯ ಫುಟ್‌ಬಾಲ್‌ನ ಪ್ರತಿಷ್ಠೆಯನ್ನು ಇನ್ನಷ್ಟು ಕೆಡಿಸುತ್ತದೆ" ಎಂದು ತನ್ಮಯ್ ಬೋಸ್ ಹೇಳಿದ್ದಾರೆ.

ಕ್ರಿಸ್ಟಿಯಾನೋ ರೋನಾಲ್ಡೋ ಕಾರು ಅಪಘಾತ, 17 ಕೋಟಿ ರೂ ಬುಗಾಟ್ಟಿ ವೆಯ್ರಾನ್ ಪುಡಿ ಪುಡಿ!

ಎಐಎಫ್‌ಎಫ್ ಅಧಿಕಾರಿಗಳು ತಮ್ಮ ಮುಂಬರುವ ವಿದೇಶಿ ಪ್ರವಾಸಗಳನ್ನು ಪ್ರಾಯೋಜಿಸಲು ಹಣವನ್ನು ಬಳಸಲು ಸಾಕಷ್ಟು ಸಮರ್ಥರಾಗಿರುವುದರಿಂದ ಇದು ಕೇವಲ ಸ್ಮೋಕ್ ಸ್ಕ್ರೀನ್ ಎಂದು ಹೇಳಿದರು. 'ಸಿಒಎ (ಅಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಅಮಾನತುಗೊಳಿಸಿದ ನಂತರ ಎಐಎಫ್‌ಎಫ್‌ನಲ್ಲಿ ಆಡಳಿತ ನಡೆಸುತ್ತಿದೆ) ಈ  ಘಟನೆಯ ಆಳಕ್ಕೆ ಹೋಗಬೇಕು ಮತ್ತು ಇದರ ಹಿಂದೆ ಯಾರು ಹೊಣೆಗಾರರು ಎಂಬುದನ್ನು ಕಂಡುಹಿಡಿಯಬೇಕು. ದಿನಬೆಳಗಾಗಲು ಅನೇಕ ಹಗರಣಗಳು ಕಾಯುತ್ತಿವೆ' ಎಂದು ಅವರು ಹೇಳಿದರು.

ಸತತ 2 ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಭಾರತ !

ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎಐಎಫ್‌ಎಫ್‌ನ ವ್ಯವಹಾರಗಳನ್ನು ನಿರ್ವಹಿಸಲು ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿಯನ್ನು (ಸಿಒಎ) ನೇಮಿಸಿತ್ತು, ಆ ಮೂಲಕ ಪ್ರಫುಲ್ ಪಟೇಲ್ ಅವರ ದೀರ್ಘಾವಧಿಯ ಆಡಳಿತವನ್ನು ಕೊನೆ ಮಾಡಲಾಗಿತ್ತು. ಭಾರತೀಯ ಫುಟ್‌ಬಾಲ್‌ಗೆ ಬ್ಲ್ಯಾಕ್ ಮ್ಯಾಜಿಕ್ ಹೊಸದಲ್ಲ. ದೆಹಲಿ ಮೂಲದ ಕ್ಲಬ್‌ನೊಂದು ಪ್ರಮುಖ ಲೀಗ್ ಪಂದ್ಯಕ್ಕಾಗಿ ಮೀರತ್ ಮೂಲದ 'ಬಾಬಾ' ಅನ್ನು ಒಮ್ಮೆ ಆಯ್ಕೆ ಮಾಡಿಕೊಂಡಿತ್ತು. ತಂಡ ಗೆಲುವು ಸಾಧಿಸಿದ ನಂತರ ಈ ಗೆಲುವುವನ್ನು ಬಾಬಾ ಅವರಿಗೆ ಅರ್ಪಿಸಿತ್ತು.

Tap to resize

Latest Videos

click me!