ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

By Suvarna News  |  First Published Jan 29, 2020, 3:38 PM IST

ಸುನಿಲ್ ಚೆಟ್ರಿ ಭಾರತೀಯ ಫುಟ್ಬಾಲ್‌ಗೆ ಹೊಸ ಭಾಷ್ಯ ಬರೆದ ಆಟಗಾರ. ಅಷ್ಟಕ್ಕೂ ಚೆಟ್ರಿ ಯಾರು? ಆತನ ಹಿನ್ನಲೆ ಏನು..? ಹೇಗಿದ್ದ ಚೆಟ್ರಿ, ಹೇಗಾದ ಗೊತ್ತಾ..? ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತೆ... 


ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್

ಬೆಂಗಳೂರು: ಭಾರತ ಫುಟ್‌ಬಾಲ್‌ಗೆ ಹೊಸ ಖದರ್ ಕೊಟ್ಟಿದ್ದಕ್ಕಲ್ಲ. ಗೊತ್ತಿರಲಿ, ಅರ್ಜೆಂಟೀನಾದ ಸೂಪರ್ ಸ್ಟಾರ್ ಲಿಯೋನಲ್‌ ಮೆಸ್ಸಿ ಆ ದೇಶದ ಪರ ಹೊಡೆದಿರುವ ಗೋಲ್ 70. ಸುನಿಲ್‌ ಚೆಟ್ರಿ ಭಾರತದ ಪರ ಬಾರಿಸಿರುವುದು 72 ಗೋಲ್. ಈ ಕಾರಣಕ್ಕೆ ಇವನ ಬಗ್ಗೆ ಓದಬೇಕಾ? ಅದಕ್ಕೂ ಅಲ್ಲ. ನನ್ನ ಮಗ ಸಣ್ಣ, ಎತ್ತರ ಇಲ್ಲ, ಶಕ್ತಿ ಇಲ್ಲ, ಯಾವ ಸ್ಪೋರ್ಟ್ಸ್‌ಗೆ ಹಾಕೋದು. ಯಾವುದಕ್ಕೂ ಬೇಡ. ಓದಿ ಡಾಕ್ಟರ್ ಆಗಿಬಿಡಲಿ, ಅಮೆರಿಕ ಸೇರಿಬಿಡಲಿ ಅಂದುಕೊಳ್ಳುವವರಿಗೆ ಇದು.

Latest Videos

undefined

ಮೆಸ್ಸಿ ದಾಖಲೆ ಮುರಿದ ನಾಯಕ ಸುನಿಲ್ ಚೆಟ್ರಿ!

ಸದ್ಯ Sunil Chhetri ಭಾರತ ಫುಟ್ ಬಾಲ್ ತಂಡದ‌‌ ಹೆಮ್ಮೆಯ ನಾಯಕ. 1984 ರಲ್ಲಿ ಹುಟ್ಟಿದ ಹುಡುಗ ಅವನು. ರಕ್ತದಲ್ಲೇ Football ಇತ್ತು. ಅದಕ್ಕೂ ಮೀರಿದ ಶಿಸ್ತು ಅವನನ್ನ ಈಗಿನ ಎತ್ತರಕ್ಕೇರಿಸಿತ್ತು. ಬೈಚುಂಗ್ ಭುಟಿಯಾ ನಂತರ ಭಾರತ ಫುಟ್‌ಬಾಲ್‌ಗೆ ಯಾರು ದಿಕ್ಕು ಅಂತ ನೋಡುತ್ತಿರಬೇಕಾದರೆ ಅವನೆದ್ದು ನಿಂತಿದ್ದ. ಚೆಟ್ರಿ.ಅವನ ಸಾಧನೆಗೇ, ಭಾರತ ತಂಡದ ನಾಯಕತ್ವ ಒಲಿದು ಬಂದಿತ್ತು. 

ಸಾಧನೆ ಆಗಿದ್ದು ಹೇಗೆ?
2002ರಲ್ಲಿ ಅವನಿಗಿನ್ನೂ 17 ವರ್ಷ. ಆಗಲೇ ಮೋಹನ್ ಬಗಾನ್ ತಂಡಕ್ಕೆ ಬಂದುಬಿಡು ಎಂದು ಕರೆ ಬಂದಿರುತ್ತೆ. ಅದು ಅವನ ಶುದ್ಧ ಫುಟ್ಬಾಲ್ ಆಟಕ್ಕೆ ಸಿಕ್ಕ ಗೌರವ. ಮೋಹನ್ ಬಗಾನ್ ಸುಮ್ಮ ಸುಮ್ಮನೆ ಯಾರ್ಯಾರನ್ನೋ ತಂದು ಆಡಿಸುವುದಿಲ್ಲ. ದೇಶದ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಅದು ಒಂದು.

ಚೆಟ್ರಿಗೆ ಇದು ಸಾಧ್ಯವಾಗಿದ್ದು ಹೇಗೆ ಗೊತ್ತಾ?
ಅವರಪ್ಪ ಸೈನ್ಯದಲ್ಲಿದ್ದವರು. ಶಿಸ್ತಿಗೆ ಇನ್ನೊಂದು ಹೆಸರಂತೆ ಬೆಳೆಸಿದ್ದರು. ಚೆಟ್ರಿ ಅಪ್ಪನ ಬಯಕೆ ಮೀರಿದ ಪ್ರೀತಿಯನ್ನ ಫುಟ್ಬಾಲ್ ಮೇಲಿಟ್ಟಿದ್ದ. ಮೋಹನ್ ಬಗಾನ್ ನಲ್ಲಿ ಮೊದಲ‌ 3 ತಿಂಗಳಿಗೆ 75,000 ವೇತನ ಸಿಗುತ್ತೆ. 17 ರ ಹುಡುಗ ಅವನು. ಕೋಲ್ಕತ್ತದ ಮಾಲ್‌ಗೆ ಹೋದವನೇ 30,000 ರುಪಾಯಿ ಉಡಾಯಿಸಿಬಿಟ್ಟಿರುತ್ತಾನೆ. ಅಪ್ಪ ಬರ್ತಾರೆ. ಮಗನೇ ಇದಲ್ಲ‌ ಜೀವನ, ಹಣ ದಿಕ್ಕು ತಪ್ಪಿಸುತ್ತದೆ. ಅವಶ್ಯಕತೆ ಮತ್ತು ಬೇಕುಗಳ ನಡುವೆ ಒಂದು ಗೆರೆ ಎಳೆದುಕೋ, ಎಂದು ಶಿಸ್ತಿನ ಪಾಠ ಮಾಡಿದ್ದರು.

ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

ಚೆಟ್ರಿ ಒಂದು ಕಡೆ ಹೇಳ್ತಾನೆ. 'ಒಂದು ವೇಳೆ ಅಪ್ಪ‌ ನನಗೆ ಹಣದ ಬಗ್ಗೆ ಹೇಳಿರದೇ‌ ಇದ್ದಿದ್ದರೆ ನನ್ನ ಬಳಿ ಈಗ ಒಂದಷ್ಟು Sports Car ಇರುತ್ತಿದ್ದವು. ಉಳಿದುಕೊಳ್ಳೋದಕ್ಕೆ ಮನೇನೆ ಇರುತ್ತಿರಲಿಲ್ಲ. ಹುಂಬನಾಗಿಬಿಡುತ್ತಿದ್ದೆ' ಅಂತ. ಗೊತ್ತಿರಲಿ ಬೆಂಗಳೂರಿನ ಪ್ರತಿಷ್ಠಿತ ಲ್ಯಾವೆಲೆ ರೋಡ್ ನಲ್ಲಿ ಚೆಟ್ರಿ ಒಂದು ಮನೆ ಖರೀದಿಸಿದ್ದಾನೆ. ಅವನು ಒಂದೂವರೆ ಕೋಟಿ ರುಪಾಯಿ ಗುತ್ತಿಗೆ ಮೀರಿದ ಆಟಗಾರ.

ವಿಷಯ ಇಷ್ಟೇನಾ? ಅಲ್ಲ. ಚೆಟ್ರಿ ಒಂದು ಆವರೇಜ್ ಫಿಸಿಕ್ ನ ಸರಾಸರಿ ಹುಡುಗ. ಆರೂವರೆ ಅಡಿ ಎತ್ತರ ಇಲ್ಲ‌. ಸಿಡಿಲೇ ತುಂಬಿಕೊಂಡಿರುವ ತೊಡೆಗಳೂ ಅವನದ್ದಲ್ಲ. ನಿಬ್ಬೆರಗು ಮಾಡುವಂತ ಡ್ರಿಬಲ್ ಅವನಿಗೆ ಬರಲ್ಲ. ಇದರಾಚೆಗೂ ಆವನು ಭಾರತದ‌ ಪರ ಇನ್ಯಾರೂ ಹೊಡೆಯದಷ್ಟು ಗೋಲ್ ಗಳನ್ನ ಬಾರಿಸಿದ್ದಾನೆ. ಹೇಗೆ? ಅವನು ಮಿಂಚು. ಅಷ್ಟೇ.

ಅವನು ಪೊಸಿಷನಿಂಗ್ ತೆಗೆದುಕೊಳ್ಳುವುದರಲ್ಲಿ ಅದ್ಭುತ. 90 ನಿಮಿಷಗಳೂ ಉಳಿದ ಎಲ್ಲರಿಗಿಂತ ಚೆನ್ನಾಗಿ ಓಡಬಲ್ಲ. ಬರೀ ಓಡುವುದಲ್ಲ. ಎದುರಾಳಿಯಿಂದ ಒಂದು ಹಂತದ ಡಿಸ್ಟೆನ್ಸ್ ಮೈಂಟೇನ್ ಮಾಡಿಕೊಂಡು ಚೆಂಡನ್ನ ಆಚೆ ಈಚೆ ಆಡಿಸುತ್ತಾ ಮಣ್ಣು ಮುಕ್ಕಿಸಿಬಿಡುತ್ತಾನೆ. ಇಲ್ಲದಿದ್ದರೆ 5 ಅಡಿ 7 ಇಂಚು ಉದ್ದದ ಚೆಟ್ರಿಯನ್ನ , ಆರಡಿಯ ಆಜಾನುಬಾಹುಗಳು ಹುರಿದು‌ ಮುಕ್ಕಿಬಿಡುತ್ತಿದ್ದರು. ನಂಬಿ ಚೆಟ್ರಿಗೆ 36 ವರ್ಷ. ಫುಟ್ಬಾಲ್‌ನಲ್ಲಿ ಅದು ತುಂಬ ಜಾಸ್ತಿ. ಯೂರೋಪಿನ ಫುಟ್ಬಾಲ್ ಆಟಗಾರರು BFC ಗೆ ಆಡುತ್ತಿದ್ದರೂ, ಚೆಟ್ರಿಗೆ ಇರೋ ಫ್ಯಾನ್ ಫಾಲೋಯಿಂಗ್ ದೊಡ್ಡದು. ಅವನು ಭಾರತೀಯ ಎಂಬ ಕಾರಣಕ್ಕೆ ಮಾತ್ರವಲ್ಲ. ಇವತ್ತಿಗೂ He is the fastest. ಫುಟ್‌ಬಾಲ್, ಕ್ರಿಕೆಟ್‌ನಂತಲ್ಲ. ಒಂದು ಕ್ಷಣ ರೆಸ್ಟ್ ಕೊಡದ ಆಟ ಅದು. ಆಟ ಮನಸು ಮಾಡಿದರೆ, ಇಡಿಯ ದೇಹದ ಅಷ್ಟೂ ಶಕ್ತಿಯನ್ನ ಹತ್ತೇ ನಿಮಿಷಕ್ಕೆ ಹಿಂಡಿ ಹೀರಿಬಿಡುತ್ತದೆ. ಎದೆಯ ಗಸೆಯಲ್ಲ ಕರಗೇ ಹೋಗುವಂತೆ. ಅದರಲ್ಲಿ ಚೆಟ್ರಿ ಆಟವನ್ನೇ ಪಳಗಿಸಿಕೊಂಡಿದ್ದಾನೆ.

ಚೆಟ್ರಿ, ಕಠಿಣ ಪರಿಶ್ರಮಿ. ಆದರೆ ಅಷ್ಟೇ Smart. ಹೊಡೆದ ಪ್ರತೀ ಬಸ್ಕಿ, ದಂಡವೂ ಮ್ಯಾಚ್ ನಲ್ಲಿ Use ಆಗಬೇಕು. ತಿಂದ ಪ್ರತೀ ಅಗುಳಿಗೂ ಲೆಕ್ಕ ಬರೆದಿರುತ್ತಾನೆ. ಅವನ ಅಡುಗೆ ಮನೆಯನ್ನ ಹುಡುಕಿದರೆ ಒಂದು ಸಕ್ಕರೆ ಕಾಳು ಕಂಡರೆ ಅವನ Football ಮೇಲಾಣೆ. ಜೀವನ ಪರ್ಯಂತಕ್ಕೆ ಸಕ್ಕರೆ‌ ನಿಷೇಧಿಸಿದ್ದಾನೆ. ಅವನಿಗೆ ವೀಕೆಂಡ್ ಗಳಿಲ್ಲ. ತಂಡದ ಹುಡುಗರಿಗೂ ವೀಕೆಂಡ್ ಬ್ಯಾನ್.

ಬೆಂಗಳೂರಿನಲ್ಲಿ ವಿರುಷ್ಕಾ ದಂಪತಿಗೆ ಔತಣಕೂಟ ಆಯೋಜಿಸಿದ ಸುನಿಲ್ ಚೆಟ್ರಿ!

ಅಮೆರಿಕ ಮತ್ತು ಪೋರ್ಚುಗೀಸ್ ತಂಡಗಳಿಗೆ ಆಡಿರುವ ಅನುಭವ ಅವನದು. ಅವರ ಅಭ್ಯಾಸ‌ ತಂತ್ರಗಳನ್ನ ಅಕ್ಷರಶಃ ತಂಡಕ್ಕೆ ಇಳಿಸಿಬಿಟ್ಟಿದ್ದಾನೆ. ಅಭ್ಯಾಸವೆಂದರೆ ಸುಮ್ಮನೆ ಬೆವರು ಬಸಿಯುವುದಲ್ಲ. ಶಿಸ್ತಿನ ಆಹಾರ ಕ್ರಮ ಎಂದು ಅರಿತವನು. ಹಾಗಾದರೆ ಚೆಟ್ರಿ, ಟೀಂ ನಲ್ಲಿ ಮುಸಂಡಿಯಂತಹವನಾ, ಸಿಡುಕು ಮೋರೆ ಸಿದ್ದಪ್ಪನಾ? ಅಲ್ಲ. ಡ್ರೆಸಿಂಗ್ ರೂಮ್ ನಲ್ಲಿ ಎಲ್ಲ ಹುಡುಗರು ಜೋರಾಗಿ ನಗುತ್ತಿದ್ದರೆ, ಚೆಟ್ರಿ ಕಣ್ಣು ಮಿಟುಕಿಸಿಕೊಂಡು ಯಾವುದೋ ಜೋಕ್‌ ಮಾಡಿದ್ದಾನೆಂದೇ ಅರ್ಥ. ಗ್ರೌಂಡ್‌ಗೆ ಇಳಿದರೆ ಅವನ ಹೆಸರು ಸುನಿಲ್‌ ಶಿಸ್ತು. ಹುಡುಗರು ಸುಸ್ತು.

ಫುಟ್‌ಬಾಲ್ ಬಗ್ಗೆ ಅವನ ಅಭಿಮಾನ ಕೇಳಿ
'ನಮ್ಮನ್ನ ನೋಡಿ ನಗಿ, ಟೀಕಿಸಿ, ಮೂದಲಿಸಿ ಆದರೆ ಮೈದಾನಕ್ಕೆ ಬಂದು ಮ್ಯಾಚ್ ನೋಡಿ' ಎಂಬ ಚೆಟ್ರಿ ಕೋರಿಕೆಗೆ ಇಡೀ ಮೈದಾನ ತುಂಬಿ ಹೋಗಿತ್ತು. ಅದರಲ್ಲಿ ಬರೀ ಕಮರ್ಷಿಯಲ್ ಮಾತಿರಲಿಲ್ಲ. ಭಾರತದದಲ್ಲಿಯೂ ಒಂದು ಮ್ಯಾಂಚೆಸ್ಟರ್ ಯುನೈಟೆಡ್ , ಒಂದು ರಿಯಲ್ ಮ್ಯಾಡ್ರಿಡ್ ತಂಡ ಹುಟ್ಟಬೇಕೆಂದರೆ, ಮೊದಲು ಆಟದ ಮೇಲೆ ಅಭಿಮಾನ ಬೆಳೆಯಬೇಕೆಂದು ನಂಬಿದವನು ಅವನು. ಅದು ನಿಜ ಕೂಡ. ಚೆಟ್ರಿ, ಯುದ್ಧದ ಕುದುರೆ. ಅವನಿಗೆ ಮೈಲುಗಲ್ಲುಗಳ ಬಗ್ಗೆ ನಂಬಿಕೆ ಇಲ್ಲ. ಮೈಲುಗಲ್ಲಲ್ಲೇ‌‌ ಮೈಮರೆತರೆ ಮುಂದೆ ದೊಡ್ಡ ದೊಡ್ಡ ಸೋಲುಗಳು ಸಾಲು ಸಾಲಾಗಿ ನಿಂತಿರುತ್ತವೆ‌ ಎಂಬುದು ಗೊತ್ತು. ಹಾಗೇ ಬದುಕುತ್ತಿದ್ದಾನೆ. ಜಯದ ಬೆನ್ನಟ್ಟಿದಂತೆ.

ಚೆಟ್ರಿ ಲೈಫ್, sports ನಲ್ಲಿ ಬೆಳೆಯ ಬೇಕಾದವರಿಗೆ ಒಂದು ಆದರ್ಶ. Well done Sunil Chhetri.
 

click me!