
ನ್ಯೂಜರ್ಸಿ (ಜು.20) ಒಂದೂವರೆ ತಿಂಗಳಿಂದ ವಿಶ್ವದ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿದ ಫಿಫಾ ವಿಶ್ವಕಪ್ ಫುಟ್ಬಾಲ್ ಅದ್ದೂರಿಯಾಗಿ ತೆರೆ ಕಂಡಿದೆ. ನ್ಯೂಜರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್ ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಿತ್ತು. ಪರಿಣಾಮ ಫೈನಲ್ ಪಂದ್ಯ ಹೆಚ್ಚುವರಿ ಸಮಯಕ್ಕೆ ಕಾಲಿಟ್ಟಿತ್ತು. ಎಕ್ಸ್‌ಟ್ರಾ ಟೈಮ್‌ನಲ್ಲಿ ಅರ್ಜೆಂಟೀನಾ ಕನಸು ನುಚ್ಚು ನೂರಾಗಿದೆ. ಸ್ಪೇನ್‌ನ ಫೆರಾನ್ ಟೊರೆಸ್ ಸಿಡಿಸಿದ ಏಕೈಕ ಗೋಲಿನಿಂದ ಸ್ಪೇನ್ ಗೆಲುವಿನ ಸಂಭ್ರಮ ಆಚರಿಸಿತು. ಬರೋಬ್ಬರಿ 16 ವರ್ಷಗಳ ಬಳಿಕ ಸ್ಪೇನ್ ಫಿಫಾ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ.
ಫಿಫಾ ವಿಶ್ವಕಪ್ 2026 ರೋಚಕ ಹೋರಾಟ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಸ್ಪೇನ್ ಹಾಗೂ ಅರ್ಜೆಂಟೀನಾ ಗೋಲು ಸಿಡಿಸಿ ಮುನ್ನಡೆ ಕಾಯ್ದುಕೊಳ್ಳಲು ತೀವ್ರ ಪ್ರಯತ್ನ ನಡೆಸಿತ್ತು. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನಿರ್ಧರಿಸಲಾಗಿತ್ತು. ಹೆಚ್ಚುವರಿ ಸಮಯದ ಮೊದಲಾರ್ಧ ಕೂಡ ಗೋಲಿಲ್ಲದೆ ಸಾಗಿತ್ತು. ಆದರೆ ಸೆಕೆಂಡ್ ಹಾಫ್‌ನಲ್ಲಿ ಪರಿಸ್ಥಿತಿ ಬದಲಾಯಿತು. ಸ್ಪೇನ್‌ನ ಫೆರಾನ್ ಟೊರೆಸ್ ಒಂದು ಗೋಲು ಸಿಡಿಸಿದರು. ಪರಿಣಾಮ ಸ್ಪೇನ್ 2ನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಸಾಧನೆ ಮಾಡಿತು. ಅರ್ಜೆಂಟೀನಾ ಫೈನಲ್ ಪಂದ್ಯದಲ್ಲಿ ಹಳದಿ ಕಾರ್ಡ್ ಸಂಕಷ್ಟ ಎದುರಿಸಿತು. ಎಂಜೋ ಫರ್ನಾಂಡಿಸ್ 2ನೇ ಹಳದಿ ಕಾರ್ಡ್ ಪಡೆದ ಕಾರಣ ಮೈದಾನದಿಂದ ಹೊರನಡೆದರು. ಪರಿಣಾಮ ಅರ್ಜೆಂಟೀನಾ 10 ಆಟಗಾರರ ತಂಡ ಆಕ್ರಮಣಕಾರಿ ಆಟಕ್ಕಿಂತ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಪರಿಣಾಮ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಇತ್ತ ಸ್ಪೇನ್ ಗೋಲು ತಡೆಯಲು ಸಾಧ್ಯವಾಗಲಿಲ್ಲ. ಅರ್ಜೆಂಟೀನಾ ಆಟದಲ್ಲಿ ಆಕ್ರಮಣಕಾರಿ ಆಟ ಇರಲಿಲ್ಲ. ಸ್ಪೇನ್ ಸತವಾಗಿ ಗೋಲು ಸಿಡಿಸುವ ಪ್ರಯತ್ನ ಮಾಡುತ್ತಲೇ ಇತ್ತು. ಇದು ಅರ್ಜೆಂಟೀನಾ ತಂಡದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು.
ಲಿಯೋನಸ್ ಮೆಸ್ಸಿ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯ ಸೆಂಟರ್ ಆಪ್ ಅಟ್ರಾಕ್ಷನ್ ಆಗಿದ್ದರು. ಆರಂಭದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸಿದ್ದು ಮಾತ್ರವಲ್ಲ, ಪ್ರತಿ ಪಂದ್ಯದಲ್ಲೂ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಅತೀ ಹೆಚ್ಚು ಅಭಿಮಾನಿಗಳ ಪಡೆ ಹೊಂದಿರುವ ಮೆಸ್ಸಿ ಫೈನಲ್ ಪಂದ್ಯದಲ್ಲೂ ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಅನ್ನೋ ಅಭಿಮಾನಿಗಳ ವಿಶ್ವಾಸ ಕಮರಿಹೋಗಿದೆ. ಹಿರಿಯ ಆಟಾಗರ ಅನ್ನೋ ಹೆಗ್ಗಳಿಕೆಗೆ ಹೊಂದಿದ್ದ ಮೆಸ್ಸಿ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಇತ್ತ ಅರ್ಜೆಂಟೀನಾ ತೀವ್ರ ನಿರಾಸೆ ಅನುಭವಿಸಿತು.
2010ರಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಸ್ಪೇನ್ ಅದ್ಭುತ ಆಟಕ್ಕೆ ಫಿಫಾ ವಿಶ್ವಕಪ್ ಅಭಿಮಾನಿಗಳು, ತಂಡಗಳು ತಲೆಬಾಗಿತ್ತು. 2010ರಲ್ಲಿ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಸ್ಪೇನ್ ಟ್ರೋಫಿ ಗೆದ್ದಿತ್ತು. ವಿಶೇಷ ಅಂದರೆ ಅಂದು ಕೂಡ 1-0 ಅಂತರದಲ್ಲಿ ನೆದರ್ಲೆಂಡ್ಸ್ ಮಣಿಸಿತ್ತು. ಇದೀಗ 1-0 ಅಂತರದಲ್ಲಿ ಅರ್ಜೆಂಟೀನಾ ಮಣಿಸಿ ಟ್ರೋಫಿ ಗೆದ್ದುಕೊಂಡಿದೆ.
ಸ್ಪೇನ್ ಹೊಸ ಇತಿಹಾಸ ರಚಿಸಿದೆ. ಸ್ಪೇನ್ ಇದೀಗ ಪುರುಷ ಹಾಗೂ ಮಹಿಳಾ ಪಿಫಾ ವಿಶ್ವಕಪ್ ಟ್ರೋಫಿ ಹೊಂದಿರುವ ಹಾಲಿ ಚಾಂಪಿಯನ್ಸ್ ತಂಡ. 2023ರಲ್ಲಿ ನಡೆದ ಮಹಿಳಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 1-0 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಪುರುಷರ ತಂಡವೂ ಚಾಂಪಿಯನ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.