ಗೋಲುಗಳ ಸುರಿಮಳೆ! ಫ್ರಾನ್ಸ್ ಮಣಿಸಿದ ಇಂಗ್ಲೆಂಡ್‌ಗೆ ಫಿಫಾ ವಿಶ್ವಕಪ್‌ನಲ್ಲಿ 3ನೇ ಸ್ಥಾನ!

Published : Jul 19, 2026, 11:41 AM IST
France vs England Fifa World cup Losers Final

ಸಾರಾಂಶ

ಫಿಫಾ ವಿಶ್ವಕಪ್ 2026ರ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು 6-4 ಗೋಲುಗಳಿಂದ ಸೋಲಿಸಿತು. ಇಂಗ್ಲೆಂಡ್ ಪರ ಬುಕಾಯೊ ಸಾಕಾ ಹ್ಯಾಟ್ರಿಕ್ ಸಾಧಿಸಿದರೆ, ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಎರಡು ಗೋಲು ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಟಾಪ್ ಸ್ಕೋರರ್ ಆದರು.

ಮಯಾಮಿ: ಫಿಫಾ ವಿಶ್ವಕಪ್ 2026ರ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅಕ್ಷರಶಃ ಗೋಲುಗಳ ಹಬ್ಬವೇ ನಡೆದಿದೆ. ಫ್ಲೋರಿಡಾದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಫ್ರಾನ್ಸ್ ತಂಡವನ್ನು 6-4 ಗೋಲುಗಳಿಂದ ಮಣಿಸಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. 1966ರಲ್ಲಿ ವಿಶ್ವಕಪ್ ಗೆದ್ದ ನಂತರ ಇಂಗ್ಲೆಂಡ್ ತಂಡದ ಪಾಲಿಗೆ ಇದು ವಿಶ್ವಕಪ್ ಇತಿಹಾಸದಲ್ಲಿಯೇ ಅತ್ಯುತ್ತಮ ಸಾಧನೆಯಾಗಿದೆ.

ಇಂಗ್ಲೆಂಡ್ ಪರ ಬುಕಾಯೊ ಸಾಕಾ ಹ್ಯಾಟ್ರಿಕ್ ಗೋಲು ಬಾರಿಸಿ ಸಂಭ್ರಮಿಸಿದರು. ಇತ್ತ ಫ್ರಾನ್ಸ್‌ನ ಸೂಪರ್‌ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಎರಡು ಗೋಲುಗಳನ್ನು ಗಳಿಸಿದರೂ, ಫ್ರೆಂಚ್ ಪಡೆಯನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಆದರೂ, ಈ ವಿಶ್ವಕಪ್‌ನಲ್ಲಿ 10 ಗೋಲುಗಳನ್ನು ಗಳಿಸಿದ ಎಂಬಾಪೆ, ಒಟ್ಟು 22 ವಿಶ್ವಕಪ್ ಗೋಲುಗಳೊಂದಿಗೆ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಸಾರ್ವಕಾಲಿಕ ಟಾಪ್ ಸ್ಕೋರರ್ ಎನಿಸಿಕೊಂಡರು.

ಪಂದ್ಯ ಶುರುವಾದ ಮೂರನೇ ನಿಮಿಷದಲ್ಲಿಯೇ ಡೆಕ್ಲಾನ್ ರೈಸ್ ಗೋಲು ಬಾರಿಸಿ ಇಂಗ್ಲೆಂಡ್‌ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ 18ನೇ ನಿಮಿಷದಲ್ಲಿ ಎಸ್ರಿ ಕೊನ್ಸಾ ಗೋಲು ಗಳಿಸಿದರು. ಆ ಬಳಿಕ 37 ಮತ್ತು 45+1ನೇ ನಿಮಿಷಗಳಲ್ಲಿ ಬುಕಾಯೊ ಸಾಕಾ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಇಂಗ್ಲೆಂಡ್ 4-0 ಅಂತರದ ಬೃಹತ್ ಮುನ್ನಡೆ ಸಾಧಿಸಿತ್ತು.

ದ್ವಿತಿಯಾರ್ಧದಲ್ಲಿ ಕಮ್‌ಬ್ಯಾಕ್ ಮಾಡಿದ ಫ್ರಾನ್ಸ್

ಆದರೆ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಭರ್ಜರಿ ಕಂಬ್ಯಾಕ್ ಮಾಡಿತು. 48 ಮತ್ತು 66ನೇ ನಿಮಿಷಗಳಲ್ಲಿ ಕಿಲಿಯನ್ ಎಂಬಾಪೆ ಹಾಗೂ 54ನೇ ನಿಮಿಷದಲ್ಲಿ ಬ್ರಾಡ್ಲಿ ಬಾರ್ಕೋಲಾ ಗೋಲು ಗಳಿಸಿದಾಗ, ಸ್ಕೋರ್ 4-3ಕ್ಕೆ ಬಂದು ನಿಂತು ಪಂದ್ಯ ರೋಚಕ ಹಂತ ತಲುಪಿತ್ತು. ಆದರೆ, 87ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸಾಕಾ, ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಇಂಜುರಿ ಟೈಮ್‌ನಲ್ಲಿ (90+6) ಫ್ರಾನ್ಸ್‌ನ ಉಸ್ಮಾನ್ ಡೆಂಬೆಲೆ ನಾಲ್ಕನೇ ಗೋಲು ಗಳಿಸಿದರೂ, ಅದರ ಎರಡು ನಿಮಿಷದ ನಂತರ (90+8) ಜೂಡ್ ಬೆಲ್ಲಿಂಗ್‌ಹ್ಯಾಮ್ ಇಂಗ್ಲೆಂಡ್ ಪರ ಆರನೇ ಗೋಲು ಬಾರಿಸಿ ಗೆಲುವನ್ನು ಖಚಿತಪಡಿಸಿದರು.

ಗೋಲ್ಡನ್ ಬೂಟ್ ರೇಸ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ ಎಂಬಾಪೆ

ಈ ವಿಶ್ವಕಪ್‌ನಲ್ಲಿ ಎಂಬಾಪೆ ಗಳಿಸಿದ 10ನೇ ಗೋಲು ಇದಾಗಿದ್ದು, ಒಟ್ಟಾರೆ ವಿಶ್ವಕಪ್‌ಗಳಲ್ಲಿ ಇದು ಅವರ 22ನೇ ಗೋಲಾಗಿದೆ. ಈ ಮೂಲಕ ಅವರು ಸಾರ್ವಕಾಲಿಕ ಶ್ರೇಷ್ಠ ಗೋಲ್‌ಸ್ಕೋರರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ, ಗೋಲ್ಡನ್ ಬೂಟ್‌ಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ 8 ಗೋಲು ಗಳಿಸಿರುವ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಎಂಬಾಪೆ ಮೊದಲ ಸ್ಥಾನಕ್ಕೇರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರ್ಜೆಂಟೀನಾ ಅಬ್ಬರ Vs ಸ್ಪೇನ್ ಗೋಡೆ; FIFA ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲೋರು ಯಾರು?
'ಅವನಾಗ ಮಗು, ಈಗ ಫೈನಲ್‌ನಲ್ಲಿ ಎದುರಾಳಿ' - ವೈರಲ್ ಫೋಟೋ ಬಗ್ಗೆ ಕೊನೆಗೂ ಮೌನ ಮುರಿದ ಲಿಯೋನೆಲ್ ಮೆಸ್ಸಿ!