FIFA World Cup ಮೆಸ್ಸಿ, ಅರ್ಜೆಂಟೀನಾ ಚಾಂಪಿಯನ್‌: ಆಘಾತದಿಂದ ಆರಂಭ, ಸಂಭ್ರಮದಲ್ಲಿ ಅಂತ್ಯ!

By Kannadaprabha NewsFirst Published Dec 19, 2022, 9:00 AM IST
Highlights

ಫುಟ್ಬಾಲ್ ಜಗತ್ತಿಗೆ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಅಧಿಪತಿ
ಸೋಲೇ ಗೆಲುವಿನ ಸೋಪಾನವೆಂದುಕೊಂಡು ಹೋರಾಡಿ ಗೆದ್ದ ಅರ್ಜೆಂಟೀನಾ
ಫುಟ್ಬಾಲ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಫಿಫಾ ವಿಶ್ವಕಪ್ ಫೈನಲ್ ಪಂದ್ಯ

ಲುಸೈಲ್‌(ಡಿ.19) ಅರ್ಜೆಂಟೀನಾದ ವಿಶ್ವಕಪ್‌ ಪಯಣ ಯಾವುದೇ ಥ್ರಿಲ್ಲರ್‌ ಸಿನಿಮಾಕ್ಕಿಂತ ಕಡಿಮೆಯಿಲ್ಲ. ಸೌದಿ ಅರೇಬಿಯಾ ವಿರುದ್ಧ ಆರಂಭಿಕ ಪಂದ್ಯದಲ್ಲಿ 1-2 ಗೋಲುಗಳಿಂದ ಸೋತು ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದ್ದ ಅರ್ಜೆಂಟೀನಾ ಆ ನಂತರ ಪುಟಿದೆದ್ದ ರೀತಿ ಸ್ಫೂರ್ತಿದಾಯಕ. ಅರ್ಜೆಂಟೀನಾ ತಾನಾಡಿದ ಪ್ರತಿ ಪಂದ್ಯದಲ್ಲೂ ಗೋಲು ಬಾರಿಸಿ, 3 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದೆ ಫೈನಲ್‌ಗೇರಿ, ಶೂಟೌಟ್‌ನಲ್ಲಿ ಗೆದ್ದು ಚಾಂಪಿಯನ್‌ ಆಯಿತು.

ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಲಿಯೋನೆಲ್‌ ಮೆಸ್ಸಿಯ ವಿಶ್ವಕಪ್‌ ಕನಸು ಕೊನೆಗೂ ನನಸಾಗಿದೆ. 2022ರ ಫಿಫಾ ವಿಶ್ವ ಚಾಂಪಿಯನ್‌ ಆಗಿ ಅರ್ಜೆಂಟೀನಾ ಹೊರಹೊಮ್ಮಿದೆ. 2018ರ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿಶೂಟೌಟ್‌ನಲ್ಲಿ 4-2 ಗೋಲುಗಳಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿತು. 1986ರ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತು. ತಂಡಕ್ಕಿದು 3ನೇ ವಿಶ್ವಕಪ್‌ ಗೆಲುವು. ಸತತ 2ನೇ ಬಾರಿ ವಿಶ್ವಕಪ್‌ ಗೆಲ್ಲುವ ಫ್ರಾನ್ಸ್‌ನ ಕನಸು ಭಗ್ನಗೊಂಡಿತು.

ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಎಷ್ಟುರೋಚಕವಾಗಿರಲು ಸಾಧ್ಯವೋ ಎಷ್ಟುರೋಚಕತೆಯನ್ನು ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ನಡುವಿನ ಪಂದ್ಯ ಅಭಿಮಾನಿಗಳಿಗೆ ಉಣಬಡಿಸಿತು. 120 ನಿಮಿಷಗಳ ಆಟದ ಬಳಿಕವೂ ಫಲಿತಾಂಶ ಹೊರಬೀಳದಿದ್ದಾಗ ಪೆನಾಲ್ಟಿಶೂಟೌಟ್‌ ಮೂಲಕ ವಿಜೇತರನ್ನು ನಿರ್ಧರಿಸಬೇಕಾಯಿತು. ಪಂದ್ಯದ ಆರಂಭದಿಂದಲೇ ಅರ್ಜೆಂಟೀನಾ ಆಕ್ರಮಣಕಾರಿ ಆಟಕ್ಕಿಳಿಯಿತು. ಅರ್ಜೆಂಟೀನಾದ ಅಟ್ಯಾಕ್‌ ನಿಯಂತ್ರಿಸುವುದರಲ್ಲೇ ಫ್ರೆಂಚ್‌ ಆಟಗಾರರು ಸಮಯ ಕಳೆಯಬೇಕಾಯಿತು.

FIFA World Cup: ಮೆಸ್ಸಿ ಮ್ಯಾಜಿಕ್‌, ಪೆನಾಲ್ಟಿಯಲ್ಲಿ ಕಮಾಲ್‌, ಫುಟ್‌ಬಾಲ್‌ ಜಗತ್ತಿಗೆ ಅರ್ಜೆಂಟೀನಾ ಕಿಂಗ್!

ಔಸ್ಮಾನೆ ದೆಂಬೆಲೆ 23ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿಅವಕಾಶ ದೊರೆಯಿತು. ಲಿಯೋನೆಲ್‌ ಮೆಸ್ಸಿ ನಿರಾಯಾಸವಾಗಿ ಗೋಲು ಪೆಟ್ಟಿಗೆಗೆ ಚೆಂಡು ಸೇರಿಸಿ ತಂಡಕ್ಕೆ ಮುನ್ನಡೆ ಆರಂಭಿಕ ಮುನ್ನಡೆ ಒದಗಿಸಿದರು.

ಮೆಸ್ಸಿಯ ಗೋಲಿನಿಂದ ಅರ್ಜೆಂಟೀನಾ ತಂಡದಲ್ಲಿ ಆತ್ಮವಿಶ್ವಾಸ ವೃದ್ಧಿಸಿತು. 36ನೇ ನಿಮಿಷದಲ್ಲಿ ಮೆಸ್ಸಿ ಚಾಕಚಕ್ಯತೆಯಿಂದ ನೀಡಿದ ಪಾಸನ್ನು ಸಮಯಕ್ಕೆ ಸರಿಯಾಗಿ ಫ್ರೆಂಚ್‌ ಗೋಲ್‌ಕೀಪರ್‌ನ ಎಡಭಾಗದಲ್ಲಿದ್ದ ಏಂಜಲ್‌ ಡಿ ಮರಿಯಾಗೆ ಒದಗಿಸುವಲ್ಲಿ ಅಲೆಕ್ಸಿಸ್‌ ಮೆಕ್‌ ಅಲಿಸ್ಟರ್‌ ತಪ್ಪು ಮಾಡಲಿಲ್ಲ. ಮರಿಯಾ, ಫ್ರೆಂಚ್‌ ನಾಯಕನೂ ಆದ ಗೋಲ್‌ಕೀಪರ್‌ ಹ್ಯುಗೊ ಲಾರಿಸ್‌ರನ್ನು ವಂಚಿಸುವಲ್ಲಿ ತಪ್ಪು ಮಾಡಲಿಲ್ಲ. ಅರ್ಜೆಂಟೀನಾ 2-0 ಮುನ್ನಡೆಯ ಬಳಿಕವೂ ಆಕ್ರಮಣಕಾರಿ ಆಟ ನಿಲ್ಲಿಸಲಿಲ್ಲ. ಪರಿಣಾಮ ಮೊದಲಾರ್ಧದಲ್ಲಿ ಫ್ರಾನ್ಸ್‌ನ ಒಂದೂ ಗೋಲು ಬಾರಿಸುವ ಯತ್ನ ನಡೆಸಲು ಸಾಧ್ಯವಾಗಲಿಲ್ಲ.

ಎಂಬಾಪೆ ಮ್ಯಾಜಿಕ್‌: ದ್ವಿತೀಯಾರ್ಧದಲ್ಲೂ ಅರ್ಜೆಂಟೀನಾ ತನ್ನ ಅಬ್ಬರ ಮುಂದುವರಿಸಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಾಗ ಕಿಲಿಯಾನ್‌ ಎಂಬಾಪೆ ಜಾದೂ ಪ್ರದರ್ಶಿಸಿದರು. 80 ನಿಮಿಷಗಳ ವರೆಗೂ ಮುನ್ನಡೆ ಹೊಂದಿದ್ದ ಅರ್ಜೆಂಟೀನಾ ಮೊದಲು ಪೆನಾಲ್ಟಿಮೂಲಕ ಗೋಲು ಬಿಟ್ಟುಕೊಟ್ಟಿತು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಎಂಬಾಪೆ ಮತ್ತೊಂದು ಗೋಲು ಬಾರಿಸಿದರು. 97 ಸೆಕೆಂಡ್‌ಗಳ ಅಂತರದಲ್ಲಿ 2 ಗೋಲು ಬಾರಿಸಿದ ಎಂಬಾಪೆ, ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ದರು.

ಮತ್ತೆ ಮೆಸ್ಸಿ ವರ್ಸಸ್‌ ಎಂಬಾಪೆ: ಹೆಚ್ಚುವರಿ ಸಮಯದಲ್ಲೂ ಮೆಸ್ಸಿ ಮತ್ತು ಎಂಬಾಪೆ ನಡುವೆ ಪೈಪೋಟಿ ಏರ್ಪಟ್ಟಿತು. ಮೊದಲು 108ನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿದರು. ಡಯೋ ಉಪಮೆಕಾನೊ ಗೋಲು ಪೆಟ್ಟಿಗೆ ಒಳಗೆ ಚೆಂಡನ್ನು ರಕ್ಷಿಸುವ ಯತ್ನ ನಡೆಸಿದ ಕಾರಣ ಗೋಲು ಮಾನ್ಯಗೊಂಡಿತು.

118ನೇ ನಿಮಿಷದಲ್ಲಿ ಎಂಬಾಪೆ ಅರ್ಜೆಂಟೀನಾ ಸಂಭ್ರಮ ನಿಲ್ಲುವಂತೆ ಮಾಡಿದರು. 120 ನಿಮಿಷಗಳ ಆಟದ ಮುಕ್ತಾಯಕ್ಕೆ 3-3ರಲ್ಲಿ ಸಮಬಲಗೊಂಡ ಕಾರಣ ಪೆನಾಲ್ಟಿಶೂಟೌಟ್‌ ಮೊರೆ ಹೋಗಲಾಯಿತು.

ಪೆನಾಲ್ಟಿಶೂಟೌಟ್‌ ಹೇಗಿತ್ತು?

ಪೆನಾಲ್ಟಿಶೂಟೌಟ್‌ನಲ್ಲಿ ಫ್ರಾನ್ಸ್‌ ಮೊದಲು ಗೋಲು ಬಾರಿಸುವ ಪ್ರಯತ್ನಕ್ಕಿಳಿಯಿತು. ಎಂಬಾಪೆ ನಿರಾಸೆ ಮೂಡಿಸಲಿಲ್ಲ. ಅರ್ಜೆಂಟೀನಾ ಪರ ಮೆಸ್ಸಿ ಮೊದಲ ಯತ್ನಕ್ಕಿಳಿದು ಗೋಲು ಬಾರಿಸಿದರು. ಆದರೆ ಫ್ರಾನ್ಸ್‌ಗೆ ಅರ್ಜೆಂಟೀನಾದ 6’4 ಅಡಿ ಎತ್ತರದ ಗೋಲ್‌ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ಕಂಟಕರಾದರು. ಕಿಂಗ್‌್ಸಲೆ ಕೊಮನ್‌ ಹಾಗೂ ಆಲುರಿಯನ್‌ ಚೌಮೇನಿ ಗೋಲು ಮಿಸ್‌ ಮಾಡಿದರು. ಅರ್ಜೆಂಟೀನಾ ಪರ ಪೌಲೋ ದ್ಯಬಾಲಾ, ಲಿಯಾಂಡ್ರೊ ಪಾರೆಡೆಸ್‌, ಗೊಂಜಾಲೋ ಮಾಂಟಿಯೆಲ್‌ ಗೋಲು ಬಾರಿಸಿ ಅರ್ಜೆಂಟೀನಾವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು.

click me!