
ಭುವನೇಶ್ವರ(ಫೆ.13): ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕೇರಳ ವಿರುದ್ಧ ಕರ್ನಾಟಕ 1-0 ಗೋಲಿನ ಜಯ ಸಾಧಿಸಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 20ನೇ ನಿಮಿಷದಲ್ಲಿ ಅಭಿಷೇಕ್ ಶಂಕರ್ ಬಾರಿಸಿದ ಗೋಲು, ಕರ್ನಾಟಕಕ್ಕೆ ಗೆಲುವು ತಂದುಕೊಟ್ಟಿತು. ರಾಜ್ಯದ ರಕ್ಷಣಾ ಪಡೆ ಆಕರ್ಷಕ ಪ್ರದರ್ಶನ ನೀಡಿ ಗಮನ ಸೆಳೆಯಿತು.
ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ 2-2ರ ಡ್ರಾ ಸಾಧಿಸಿತ್ತು. 2 ಪಂದ್ಯಗಳಿಂದ ಒಟ್ಟು 4 ಅಂಕ ಪಡೆದಿರುವ ರಾಜ್ಯ ತಂಡ ‘ಎ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಒಡಿಶಾ ಹಾಗೂ ಪಂಜಾಬ್ ಸಹ ತಲಾ 4 ಅಂಕ ಹೊಂದಿದ್ದರೂ, ಗೋಲು ವ್ಯತ್ಯಾಸದ ಆಧಾರದಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. 3ನೇ ಪಂದ್ಯದಲ್ಲಿ ಕರ್ನಾಟಕ ಮಂಗಳವಾರ ಗೋವಾ ವಿರುದ್ಧ ಸೆಣಸಲಿದೆ.
ಬಿಎಫ್‌ಸಿ ಅಭಿಮಾನಿಗಳ ಮೇಲೆ ಕೇರಳ ಫ್ಯಾನ್ಸ್ ಹಲ್ಲೆ!
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್)ನ ಬೆಂಗಳೂರು ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ ನಡುವಿನ ಪಂದ್ಯದ ವೇಳೆ ಆತಿಥೇಯ ತಂಡದ ಅಭಿಮಾನಿಗಳ ಮೇಲೆ ಕೇರಳ ಅಭಿಮಾನಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ವಿರುದ್ಧ ಬಿಎಫ್‌ಸಿ 1-0 ಗೋಲಿನ ಜಯ ಸಾಧಿಸಿತ್ತು.
ಬಾಲಿವುಡ್ 'ಹೀರೋ'ಗಿಂತ ಭಿನ್ನ ಆರ್.ಮಾಧವನ್ ಪುತ್ರ, ಖೇಲೋ ಇಂಡಿಯಾದಲ್ಲಿ 5 ಸ್ವರ್ಣ ಗೆದ್ದ ವೇದಾಂತ್!
ತಮ್ಮ ತಂಡ ಸೋತ ಹತಾಶೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಕೇರಳ ಅಭಿಮಾನಿಗಳು, ಬಿಎಫ್‌ಸಿಯ ಕೆಲ ಅಭಿಮಾನಿಗಳನ್ನು ಗುರಿಯಾಗಿಸಿ ವಾಗ್ವಾದಕ್ಕಿಳಿದರು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹೊಡೆದಾಟ ನಡೆಯಿತು. ವಾತಾವರಣ ತಿಳಿಗೊಳಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಫೆಬ್ರವರಿ 20ರಂದು ಭಾರತದಲ್ಲಿ ಮೊದಲ ಬಾರಿ ಫ್ರೇಜನ್ ಲೇಕ್ ಮ್ಯಾರಥಾನ್ ಓಟ
ಲೇಹ್/ಜಮ್ಮು: ಭಾರತದಲ್ಲಿ ಮೊದಲ ಬಾರಿ ಘನೀಕೃತ ಸರೋವರ (ಫ್ರೇಜನ್ ಲೇಕ್) ಮ್ಯಾರಥಾನ್ ಅನ್ನು ಫೆಬ್ರವರಿ 20ರಂದು ಲಡಾಖ್ ಪ್ಯಾಂಗಾಂಗ್ ತ್ಸೋನಲ್ಲಿ ಆಯೋಜಿಸಲಾಗಿದೆ. 13,862 ಎತ್ತರದಲ್ಲಿ ಮ್ಯಾರಥಾನ್ ನಡೆಯಲಿದ್ದು, ಲುಕುಂಗ್‌ನಲ್ಲಿ ಓಟ ಪ್ರಾರಂಭವಾಗಿ ಭಾರತದ ಕಡೆಯ ಗ್ರಾಮ ಮಾನಾದಲ್ಲಿ ಅಂತ್ಯಗೊಳ್ಳಲಿದೆ. 21 ಕಿ.ಮೀ ಉದ್ದದ ಮ್ಯಾರಥಾನ್ ಇದಾಗಿದೆ. ಭಾರತ ಹಾಗೂ ವಿದೇಶದಿಂದ ಆಯ್ದ 75 ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ..
ಒಳಾಂಗಣ ಅಥ್ಲೆಟಿಕ್ಸ್: ಭಾರತಕ್ಕೆ 4 ಪದಕ
ಅಸ್ತಾನ(ಕಜಕಸ್ತಾನ): 2023ರ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಬೇಟೆ ಆರಂಭಿಸಿದ್ದು, ಮೊದಲ ದಿನವೇ 1 ಚಿನ್ನ ಸೇರಿ 4 ಪದಕ ಜಯಿಸಿದೆ. ಪುರುಷರ ಶಾಟ್ಪುಟ್ನಲ್ಲಿ ತೇಜಿಂದರ್‌ಪಾಲ್ ಸಿಂಗ್ ತೂರ್ 19.49 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರೆ, ಕರಣ್ವೀರ್ ಸಿಂಗ್(19.37 ಮೀ.) ಬೆಳ್ಳಿ ಪಡೆದರು. ಮಹಿಳೆಯರ ಪೆಂಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಬೆಳ್ಳಿ ಜಯಿಸಿದರು. ಪುರುಷರ ಟ್ರಿಪಲ್ ಜಂಪ್ನಲ್ಲಿ ಪ್ರವೀಣ್ ಚಿತ್ರವೇಲು 16.98 ಮೀ. ದೂರ ಜಿಗಿದು ಬೆಳ್ಳಿ ಗೆದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.