ಅಂಡರ್-17 ಸ್ಯಾಫ್‌ ಫುಟ್ಬಾಲ್‌: ಬಾಂಗ್ಲಾ ಮಣಿಸಿ ಭಾರತ ಚಾಂಪಿಯನ್‌

By Kannadaprabha News  |  First Published Oct 1, 2024, 9:17 AM IST

ಅಂಡರ್ 17 ಸ್ಯಾಫ್ ಕಪ್ ಪುಟ್ಬಾಲ್ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಯುವ ಫುಟ್ಬಾಲ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಥಿಂಪು(ಭೂತಾನ್‌): ಅಂಡರ್‌-17 ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡರೇಶನ್‌(ಸ್ಯಾಫ್‌) ಕಪ್‌ನಲ್ಲಿ ಭಾರತ ಸತತ 2ನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಒಟ್ಟಾರೆ ಕಿರಿಯರ ಸ್ಯಾಫ್‌(ಅಂಡರ್‌-15, ಅಂಡರ್‌-16, ಅಂಡರ್‌-17 ಸೇರಿ) ಕಪ್‌ನಲ್ಲಿ ಭಾರತ 6ನೇ ಬಾರಿ ಚಾಂಪಿಯನ್‌ ಎನಿಸಿಕೊಂಡಿದೆ. ಈ ಮೊದಲು ಅಂ-15 ವಿಭಾಗದಲ್ಲಿ 2017, 2019, ಅಂ-16 ವಿಭಾಗದಲ್ಲಿ 2013, 2023, ಅಂ-17 ವಿಭಾಗದಲ್ಲಿ 2022ರಲ್ಲಿ ಪ್ರಶಸ್ತಿ ಗೆದ್ದಿತ್ತು.

ಸೋಮವಾರ ನಡೆದ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೊಹಮ್ಮದ್‌ ಕೈಫ್‌(58ನೇ ನಿಮಿಷ), ಮೊಹಮ್ಮದ್‌ ಅರ್ಬಾಶ್‌(95ನೇ ನಿಮಿಷ) ಭಾರತದ ಗೆಲುವಿನ ರೂವಾರಿಗಳಾದರು. ಇದರೊಂದಿಗೆ ಬಾಂಗ್ಲಾದೇಶ ಕಿರಿಯರ ಸ್ಯಾಫ್‌ನಲ್ಲಿ 3ನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ತಂಡ 2015, 2018ರಲ್ಲಿ ಪ್ರಶಸ್ತಿ ಗೆದ್ದಿತ್ತು.

Tap to resize

Latest Videos

ಸ್ಯಾಫ್ ಕಪ್ ಫುಟ್ಬಾಲ್: ಭಾರತ-ಬಾಂಗ್ಲಾ ಫೈನಲ್ ಪಂದ್ಯ ಇಂದು

ಅಂಡರ್‌-23 ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌: ಕರ್ನಾಟಕದ ದೀಕ್ಷಿತಾಗೆ ಬಂಗಾರ

ಪಾಟ್ನಾ: 4ನೇ ಆವೃತ್ತಿಯ ಅಂಡರ್‌-23 ಇಂಡಿಯನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಕೊನೆ ದಿನ ಕರ್ನಾಟಕ ಮತ್ತೆ 5 ಪದಕಗಳನ್ನು ಗೆದ್ದಿದೆ. ಇದರೊಂದಿಗೆ ರಾಜ್ಯ ಒಟ್ಟು 8 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು.

ಸೋಮವಾರ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ದೀಕ್ಷಿತಾ 1 ನಿಮಿಷ 00.40 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ತಮ್ಮದಾಗಿಸಿಕೊಂಡರು. ಪುರುಷರ 800 ಮೀ. ಓಟದಲ್ಲಿ ತುಶಾರ್‌ ವಸಂತ್‌(1 ನಿಮಿಷ 51.97 ಸೆಕೆಂಡ್‌) ಬೆಳ್ಳಿ, ಲೋಕೇಶ್‌ ಕೆ.(1 ನಿಮಿಷ 53.23 ಸೆಕೆಂಡ್‌) ಕಂಚು ಜಯಿಸಿದರು. ಪುರುಷರ ಹೈಜಂಪ್‌ನಲ್ಲಿ ಸುದೀಪ್‌ 2.11 ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಜಯಿಸಿದರೆ, ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ದಿಶಾ ಗಣಪತಿ 5.86 ಮೀ. ದೂರಕ್ಕೆ ಜಿಗಿದು ಕಂಚು ಕೊರಳಿಗೇರಿಸಿಕೊಂಡರು. ರಾಜ್ಯದ ಅಥ್ಲೀಟ್‌ಗಳು ಭಾನುವಾರ 3 ಕಂಚು ಗೆದ್ದಿದ್ದರು.

click me!