ಸ್ಯಾಫ್ ಕಪ್ ಚಾಂಪಿಯನ್‌ಶಿಪ್‌ನಲ್ಲಿಂದು ಸೆಮಿಫೈನಲ್ ಕದನ
ಸುನಿಲ್ ಚೆಟ್ರಿ ನೇತೃತ್ವದ ಭಾರತಕ್ಕೆ ಬಲಿಷ್ಠ ಲೆಬನಾನ್ ಸವಾಲು
ಮೊದಲ ಸೆಮಿಫೈನಲ್‌ನಲ್ಲಿ ಕುವೈತ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ
ಬೆಂಗಳೂರು(ಜು.01): 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಸೆಮಿಫೈನಲ್ ಹಣಾಹಣಿ ಶನಿವಾರ ನಡೆಯಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಭಾರತಕ್ಕೆ ಬಲಿಷ್ಠ ಲೆಬನಾನ್ ಸವಾಲು ಎದುರಾಗಲಿದೆ.
8 ಬಾರಿ ಚಾಂಪಿಯನ್ ಭಾರತ ಲೀಗ್ ಹಂತದಲ್ಲಿ ಕುವೈತ್ ವಿರುದ್ಧದ ಡ್ರಾದ ಹೊರತಾಗಿಯೂ ಅತ್ಯುತ್ತಮ ಪ್ರದರ್ಶನ ತೋರಿದೆ. ನಾಯಕ ಸುನಿಲ್ ಚೆಟ್ರಿ 3 ಪಂದ್ಯಗಳಲ್ಲಿ 5 ಗೋಲು ಬಾರಿಸಿದ್ದು, ಅವರ ಪ್ರದರ್ಶನವೇ ತಂಡದ ಗೆಲುವು-ಸೋಲು ನಿರ್ಧರಿಸುವಂತಿದೆ. ಇನ್ನು, ಕಳೆದ 9 ಪಂದ್ಯಗಳಲ್ಲಿ ಭಾರತ ಕೇವಲ 1 ಗೋಲು ಬಿಟ್ಟು ಕೊಟ್ಟಿದ್ದು, ಎದುರಾಳಿಯನ್ನು ಮತ್ತೊಮ್ಮೆ ಕಟ್ಟಿಹಾಕಲು ರಕ್ಷಣಾ ಪಡೆ ಕಾಯುತ್ತಿದೆ.
undefined
Neeraj Chopra: ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
8ನೇ ಮುಖಾಮುಖಿ: ಭಾರತ ಹಾಗೂ ಲೆಬನಾನ್ ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 3 ಪಂದ್ಯಗಳಲ್ಲಿ ಲೆಬನಾನ್, 2ರಲ್ಲಿ ಭಾರತ ಗೆಲುವು ಸಾಧಿಸಿದೆ. ಉಳಿದಂತೆ 2 ಪಂದ್ಯಗಳು ಡ್ರಾಗೊಂಡಿದೆ. ಆದರೆ ಇತ್ತೀಚಿಗೆ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭಾರತ, ಲೆಬನಾನ್ ವಿರುದ್ಧ 2 ಪಂದ್ಯಗಳಲ್ಲೂ ಅಜೇಯವಾಗಿತ್ತು. ಇದೇ ಪ್ರದರ್ಶನ ತೋರಿ 13ನೇ ಬಾರಿ ಫೈನಲ್‌ಗೇರಲು ಭಾರತ ಕಾತರಿಸುತ್ತಿದ್ದರೆ, ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಸುತ್ತಿಗೇರುವ ನಿರೀಕ್ಷೆ ಲೆಬನಾನ್ ಆಟಗಾರರಲ್ಲಿದೆ.
ಸ್ಟಿಮಾಕ್‌ಗೆ 2 ಪಂದ್ಯ ನಿಷೇಧ!
ಟೂರ್ನಿಯ ಪಾಕಿಸ್ತಾನ ಹಾಗೂ ಕುವೈತ್ ವಿರುದ್ಧದ ಪಂದ್ಯದ ವೇಳೆ 2 ಬಾರಿ ರೆಡ್ ಕಾರ್ಡ್ ಪಡೆದಿರುವ ಭಾರತದ ಕೋಚ್ ಇಗೋರ್ ಸ್ಟಿಮಾಕ್‌ಗೆ 2 ಪಂದ್ಯಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ 500 ಯುಎಸ್ ಡಾಲರ್(ಸುಮಾರು 41,000 ರು.) ದಂಡ ವಿಧಿಸಲಾಗಿದೆ.
ಭಾರತದ ಪಂದ್ಯ: ಸಂಜೆ 7.30ಕ್ಕೆ,
ನೇರಪ್ರಸಾರ: ಫ್ಯಾನ್‌ಕೋಡ್, ಡಿಡಿ ಭಾರತಿ
ಲೆಬನಾನ್ ಒಂದು ಬಲಿಷ್ಠ ತಂಡ. ನಮ್ಮ ಬಗ್ಗೆಯೂ ಲೆಬನಾನ್‌ಗೆ ಇದೇ ಅಭಿಪ್ರಾಯವಿದೆ ಎನ್ನುವ ನಂಬಿಕೆ ಇದೆ. ಇತ್ತೀಚಿಗೆ ನಡೆದ ಇಂಟರ್ ಕಾಂಟಿನೆಂಟಲ್ ಕಪ್‌ನಲ್ಲಿ ಲೆಬನಾನ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದೇವೆ - ಸುನಿಲ್ ಚೆಟ್ರಿ, ಭಾರತ ತಂಡದ ನಾಯಕ
ಕುವೈತ್‌ಗೆ ಬಾಂಗ್ಲಾ ಸವಾಲು
ಮೊದಲ ಸೆಮಿಫೈನಲ್‌ನಲ್ಲಿ ಕುವೈತ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. 2008ರ ಚಾಂಪಿಯನ್ ಬಾಂಗ್ಲಾ 4ನೇ ಫೈನಲ್ ಮೇಲೆ ಕಣ್ಣಿಟ್ಟಿದ್ದರೆ, ಕುವೈತ್ ಮೊದಲ ಪ್ರಯತ್ನದಲ್ಲೇ ಫೈನಲ್ ತಲುಪುವ ಕಾತರದಲ್ಲಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ಆಗಸ್ಟ್ 3ರಿಂದ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿ
ನವದೆಹಲಿ: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿ ಎನಿಸಿರುವ ಡುರಾಂಡ್ ಕಪ್‌ನಲ್ಲಿ 27 ವರ್ಷಗಳ ಬಳಿಕ ಮತ್ತೊಮ್ಮೆ ಈ ಬಾರಿ ವಿದೇಶಿ ತಂಡಗಳು ಪಾಲ್ಗೊಳ್ಳಲಿವೆ. ಶುಕ್ರವಾರ 132ನೇ ಆವೃತ್ತಿಯ ಟೂರ್ನಿಯ ಟ್ರೋಫಿ ಟೂರ್‌ಗೆ ಚಾಲನೆ ನೀಡಿದ ಆಯೋಜಕರು ವಿದೇಶಿ ತಂಡಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ.
ಈ ಬಾರಿ ಟೂರ್ನಿ ಆಗಸ್ಟ್ 3ರಿಂದ ಸೆಪ್ಟೆಂಬರ್ 3ರ ವರೆಗೆ ಕೋಲ್ಕತಾ ಸೇರಿದಂತೆ 4 ಕಡೆಗಳಲ್ಲಿ ನಡೆಯಲಿದ್ದು, ನೇಪಾಳ, ಭೂತಾನ್, ಬಾಂಗ್ಲಾದೇಶದ ತಂಡಗಳು ಸೇರಿ ಒಟ್ಟು 24 ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿ 1,888ರಲ್ಲಿ ಆರಂಭಗೊಂಡಿದ್ದು, ಕಳೆದ ಬಾರಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ಚಾಂಪಿಯನ್ ಆಗಿತ್ತು.