SAFF Cup 2023: ಭಾರತ vs ಕುವೈತ್ ಫೈಟ್ ರೋಚಕ ಡ್ರಾ..! ಉಭಯ ತಂಡಗಳು ಸೆಮೀಸ್‌ಗೆ ಲಗ್ಗೆ

By Kannadaprabha News  |  First Published Jun 28, 2023, 11:25 AM IST

ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿನ ಭಾರತ-ಕುವೈತ್ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ
ಆಟಗಾರರು, ಕೋಚ್ ಹಾಗೂ ರೆಫ್ರಿಗಳ ನಡುವೆ ಭಾರೀ ವಾಗ್ವಾದಕ್ಕೆ ಸಾಕ್ಷಿಯಾದ ಪಂದ್ಯ
ಮೊದಲೆರಡೂ ಪಂದ್ಯಗಳನ್ನು ಗೆದ್ದಿದ್ದ ಉಭಯ ತಂಡಗಳು  ’ಎ’ ಗುಂಪಿನಿಂದ ಅಜೇಯವಾಗಿ ಸೆಮಿಫೈನಲ್ ಪ್ರವೇಶ


- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ಜೂ.28) ತೀವ್ರ ಪೈಪೋಟಿ, ರೋಚಕತೆ, ಆಟಗಾರರು, ಕೋಚ್ ಹಾಗೂ ರೆಫ್ರಿಗಳ ನಡುವೆ ಭಾರೀ ವಾಗ್ವಾದಕ್ಕೆ ಸಾಕ್ಷಿಯಾದ ಭಾರತ ಹಾಗೂ ಕುವೈತ್ ನಡುವಿನ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದೆ. ಇದರ ಹೊರತಾಗಿಯೂ ಮೊದಲೆರಡೂ ಪಂದ್ಯಗಳನ್ನು ಗೆದ್ದಿದ್ದ ಉಭಯ ತಂಡಗಳು ’’ಎ’’ ಗುಂಪಿನಿಂದ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದವು.

Tap to resize

Latest Videos

undefined

ಆರಂಭದಲ್ಲೇ ಎರಡೂ ತಂಡಗಳಿಂದ ಪ್ರಬಲ ಪೈಪೋಟಿ ಕಂಡು ಬಂದಿದ್ದರಿಂದ ಸುಲಭದಲ್ಲಿ ಯಾರಿಗೂ ಗೋಲು ಗಳಿಸಲಾಗಲಿಲ್ಲ. ಆದರೆ ಮೊದಲಾರ್ಧದ ಹೆಚ್ಚುವರಿ ನಿಮಿಷದಲ್ಲಿ ಸುನಿಲ್ ಚೆಟ್ರಿ ಬಾರಿಸಿದ ಆಕರ್ಷಕ ಗೋಲು ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿತು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ಇನ್ನೇನು ಗೆದ್ದೇಬಿಟ್ಟಿತು ಎನ್ನುವಷ್ಟರಲ್ಲಿ 90+2ನೇ ನಿಮಿಷದಲ್ಲಿ ಅಲ್‌ಬೌಶಿ ಒದ್ದ ಚೆಂಡು ಭಾರತದ ಅನ್ವರ್ ಅಲಿ ಕಾಲಿಗೆ ಬಡಿದು ಗೋಲು ಪೆಟ್ಟಿಗೆ ಸೇರಿತು. ಸ್ವಂತ ಗೋಲು ಭಾರತದ ಜಯ ಕಸಿಯಿತು.

SAFF Cup 2023: ಇಂದು ಭಾರತ vs ಕುವೈತ್ ಕದನ..!

ಕುವೈತ್ 3 ಪಂದ್ಯದಲ್ಲಿ 2 ಜಯ, 1 ಡ್ರಾ ನೊಂದಿಗೆ 7 ಅಂಕ ಗಳಿಸಿದರೆ, ಭಾರತ ಸಹ 7 ಅಂಕ ಪಡೆಯಿತು. ಆದರೆ ಕುವೈತ್ 3 ಪಂದ್ಯದಲ್ಲಿ ಒಟ್ಟು 8 ಗೋಲು ಬಾರಿಸಿದರೆ, ಭಾರತ 7 ಗೋಲು ಗಳಿಸಿತು. ಅಂಕಪಟ್ಟಿಯಲ್ಲಿ ಕುವೈತ್ ಮೊದಲ ಸ್ಥಾನ ಪಡೆದರೆ, ಭಾರತ 2ನೇ ಸ್ಥಾನ ಗಳಿಸಿತು. ಮಂಗಳವಾರ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನೇಪಾಳ 1-0ಯಲ್ಲಿ ಜಯಿಸಿತು.

ಭಾರತದ ಕೋಚ್‌ಗೆ ಮತ್ತೆ ರೆಡ್ ಕಾರ್ಡ್!

ಪಾಕ್ ವಿರುದ್ಧದ ಪಂದ್ಯದ ವೇಳೆ ರೆಡ್ ಕಾರ್ಡ್‌ಗೆ ಗುರಿಯಾಗಿ ಒಂದು ಪಂದ್ಯ ನಿಷೇಧಕ್ಕೂ ಒಳಗಾಗಿದ್ದ ಭಾರತದ ಕೋಚ್ ಇಗೊರ್ ಸ್ಟಿಮಾಕ್ ಮತ್ತೊಮ್ಮೆ ರೆಡ್ ಕಾರ್ಡ್ ಪಡೆದರು. ಪಂದ್ಯದುದ್ದಕ್ಕೂ ಎದುರಾಳಿ ಆಟಗಾರರು, ರೆಫ್ರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದ ಸ್ಟಿಮಾಕ್‌ಗೆ ಹಳದಿ ಕಾರ್ಡ್‌ನೊಂದಿಗೆ ಎಚ್ಚರಿಕೆ ನೀಡಿದರೂ, ಸುಮ್ಮನಾಗದ್ದಕ್ಕೆ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಹಾಕಲಾಯಿತು.

ತವರಿನ ಕೊನೆ 13 ಪಂದ್ಯದಲ್ಲೂ ಅಜೇಯ

ಭಾರತ ತಂಡ 2019ರ ಸೆಪ್ಟೆಂಬರ್‌ ಬಳಿಕ ಅಂದರೆ ಕಳೆದ ಸುಮಾರು 4 ವರ್ಷದಲ್ಲಿ ತವರಿನಲ್ಲಿ 13 ಪಂದ್ಯಗಳನ್ನಾಡಿದ್ದು, ಯಾವ ಪಂದ್ಯದಲ್ಲೂ ಸೋತಿಲ್ಲ. ಈ ಪೈಕಿ 10 ಪಂದ್ಯಗಳಲ್ಲಿ ಜಯಗಳಿಸಿದ್ದರೆ, 3 ಪಂದ್ಯ ಡ್ರಾಗೊಂಡಿತ್ತು. ಇನ್ನು, ಕೊನೆ 9 ಪಂದ್ಯಗಳಲ್ಲಿ ಕ್ಲೀನ್‌ಶೀಟ್‌ ಕಾಯ್ದುಕೊಂಡಿದ್ದ ಭಾರತ, ಈ ಪಂದ್ಯದಲ್ಲಿ ಗೋಲು ಬಿಟ್ಟುಕೊಟ್ಟಿತು. ಕ್ಲೀನ್‌ಶೀಟ್‌ ಅಂದರೆ ಈ 9 ಪಂದ್ಯಗಳಲ್ಲಿ ಎದುರಾಳಿಗೆ ಒಂದೂ ಗೋಲನ್ನು ಬಿಟ್ಟುಕೊಟ್ಟಿರಲಿಲ್ಲ.

click me!