
ದೋಹಾ (ನ.21): ಈಗಾಗಲೇ ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಫಿಫಾ ವಿಶ್ವಕಪ್ ನಲ್ಲಿ ಇದೀಗ ಎಲ್‌ಜಿಬಿಟಿ ವಿವಾದ ಶುರುವಾಗಿದೆ. ಪಂದ್ಯದ ವೇಳೆ, ಇಂಗ್ಲೆಂಡ್ ಸೇರಿದಂತೆ 8 ತಂಡಗಳು ಸಲಿಂಗ ಸಂಬಂಧಗಳನ್ನು ಬೆಂಬಲಿಸಲು ನಿರ್ಧರಿಸಿವೆ. ಇಂಗ್ಲೆಂಡಿನ ಕ್ಯಾಪ್ಟನ್ ಹ್ಯಾರಿ ಕೇನ್ ಈ ಕುರಿತಾಗಿ ಮಾತನಾಡಿದ್ದು, 'ಇರಾನ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಎಲ್‌ಜಿಬಿಟಿಯನ್ನು ಬೆಂಬಲಿಸುವ ರೈನ್‌ಬೋ ಬ್ಯಾಂಡ್ ಅನ್ನು ಧರಿಸಲಿದ್ದೇವೆ ಇದು ಎಲ್‌ಬಿಜಿಟಿ ಅಥವಾ ಸಲಿಂಗ ಸಂಬಂಧದ ಸಮುದಾಯದ ಸಂಕೇತವಾಗಿದೆ' ಎಂದು ಹೇಳಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಅಲ್ಲದೆ, ಸಂಪೂರ್ಣ ತಂಡ, ಎಲ್‌ಜಿಬಿಟಿಗೆ ಸಂಬಂಧವನ್ನು ಬೆಂಬಲಿಸಿ ಕೈಗಳಿಗೆ ಒನ್ ಲವ್ ಬ್ಯಾಂಡ್‌ಅನ್ನು ಧರಿಸಲಿವೆ. ಇಂದು ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಇಸ್ಲಾಮಿಕ್ ದೇಶ ಇರಾನ್ ಅನ್ನು ಎದುರಿಸಲಿದೆ. ಇರಾನ್ ಸಂಪ್ರದಾಯವಾದಿಗಳ ದೇಶ. ಇಲ್ಲಿ ಸಲಿಂಗಕಾಮದ ಸಂಬಂಧಕ್ಕೆ ನಿಷೇಧವಿದೆ. ಇನ್ನು ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿಕೊಂಡಿರುವ ಕತಾರ್‌ನಲ್ಲೂ ಕೂಡ ಸಲಿಂಗಕಾಮಕ್ಕೆ ನಿಷೇಧವಿದೆ. ಇವೆಲ್ಲವೂ ವಿವಾದಕ್ಕೆ ಕಾರಣವಾಗಿದೆ.
ಒಂದು ತಂಡವಾಗಿ ಹಾಗೂ ಫುಟ್‌ಬಾಲ್ ಸಂಸ್ಥೆಯಾಗಿ ನಾವು ಸ್ಪಷ್ಟಪಡಿಸುವುದು ಏನೆಂದರೆ, ಮೊದಲ ಪಂದ್ಯದಲ್ಲಿ ನಮ್ಮ ತಂಡ ಒನ್ ಲವ್ ಬ್ಯಾಂಡ್ ಧರಿಸಿ ಕಣಕ್ಕೆ ಇಳಿಯಲಿದೆ. ಈಗಾಗಲೇ ಈ ವಿಚಾರವಾಗಿ ಫಿಫಾದ ಜೊತೆ ಮಾತನಾಡಿದ್ದು, ನಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಪಂದ್ಯಕ್ಕೂ ಮುನ್ನ ಫಿಫಾ ತನ್ನ ನಿರ್ಧಾರ ತಿಳಿಸಲಿದೆ ಎಂದುಕೊಂಡಿದ್ದೇನೆ' ಎಂದು ಹ್ಯಾರಿ ಕೇನ್ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಫಿಫಾ ತನ್ನ ನಿರ್ಧಾರವನ್ನು ಈವರೆಗೂ ತಿಳಿಸಿಲ್ಲ. ಹಾಗೇನಾದರೂ ಫಿಫಾ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಇಂಗ್ಲೆಂಡ್ ತಂಡ ಈ ಬ್ಯಾಂಡ್ ಅನ್ನು ಧರಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇರಾನ್ ವಿರುದ್ಧದ ಪಂದ್ಯದಲ್ಲಿ ಹ್ಯಾರಿ ಕೇನ್ ಮೈದಾನಕ್ಕೆ ಇಳಿಯುವಾಗಲೇ ಅವರಿಗೆ ರೆಫ್ರಿ ಹಳದಿ ಕಾರ್ಡ್ ನೀಡಬಹುದು. 2ನೇ ಪಂದ್ಯದಲ್ಲೂ ಇದು ಮುಂದುವರಿದಿರೆ ಆ ಪಂದ್ಯಕ್ಕೂ ಹಳದಿ ಕಾರ್ಡ್ ಪಡೆಯಲಿದ್ದಾರೆ. ಇದರಿಂದಾಗಿ ಅವರು ಮೂರನೇ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅದಲ್ಲದೆ, ಮೊದಲ ಪಂದ್ಯಕ್ಕೂ ಮುನ್ನ ತನ್ನ ತಂಡವನ್ನು ಇಂಗ್ಲೆಂಡ್ ಟೀಮ್‌ನ ಡ್ರೆಸಿಂಗ್ ರೂಮ್‌ಗೆ ತೆರಳಿ ಬ್ಯಾಂಡ್‌ಅನ್ನು ತೆಗೆಯುವಂತೆ ಕೇಳಬಹುದು ಇಲ್ಲವೇ ದಂಡ ಅಥವಾ ಶಿಕ್ಷೆಯನ್ನು ವಿಧಿಸುವ ಅವಕಾಶವಿದೆ.
ಇಂಗ್ಲೆಂಡ್ ಅಲ್ಲದೆ, ಗೆರೇಥ್ ಬೇಲ್ ನಾಯಕತ್ವದ ವೇಲ್ಸ್, ಜರ್ಮನಿಯ ಗೋಲ್ ಕೀಪರ್ ಮ್ಯಾನ್ಯುಯೆಲ್ ನ್ಯುಯೆರ್, ನೆದರ್ಲೆಂಡ್ ವಿರ್ಜಿಲ್ ವಾನ್ ಜಿಕ್ ಕೂಡ ಪಂದ್ಯದ ವೇಳೆ ಒನ್ ಲವ್ ಬ್ಯಾಂಡ್ ಧರಿಸಲಿದ್ದಾರೆ. ಪ್ರಸ್ತುತ ವಿಶ್ವಕಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಸಲಿಂಗಕಾಮಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಪ್ರಸ್ತುತ ಈಗ ಕೆಲ ಆಟಗಾರರು ಹಾಗೂ ತಂಡಗಳ ಹೆಸರು ಮಾತ್ರವೇ ಮುನ್ನಲೆಗೆ ಬಂದಿದೆ.
ಬ್ಯಾಂಡ್ ಧರಿಸುವ ಮೂಲಕ ಯಾವ ಸಂದೇಶ ನೀಡಲಿದ್ದೇವೆ ಎನ್ನುವುದನ್ನು ಇಂಗ್ಲೆಂಡ್ ತಂಡ ನೀಡಲು ಬಯಸಿದೆ. ಈ ಕುರಿತಾಗಿ ಟೀಮ್ ಹಾಗೂ ಆಡಳಿತ ಮಂಡಳಿ ಕೂಡ ಒಟ್ಟಾಗಿ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗೇನಾದರೂ ಫಿಫಾ ದಂಡ ವಿಧಿಸಿದಲ್ಲಿ ಖಂಡಿತವಾಗಿ ಅದನ್ನು ಸ್ವೀಕಾರ ಮಾಡಲಿದ್ದೇವೆ ಎಂದು ಜರ್ಮನಿ ಹೇಳಿದೆ. ಆದರೆ, ತಂಡದ ಆಟಗಾರ ಮ್ಯಾನ್ಯುಯೆಲ್ ನ್ಯುಯೆರ್ ಬಗ್ಗೆ ಮಾತ್ರವೇ ಫಿಫಾ ಕ್ರಮ ಕೈಗೊಂಡರೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ತಂಡವಿದೆ. ಇನ್ನೊಂದೆಡೆ ನೆದರ್ಲೆಂಡ್‌ನ ವಿರ್ಜಿಲ್ ವಾನ್ ಜಿಕ್, ನಾನು ಒನ್ ಲವ್ ಬ್ಯಾಂಡ್ ಧರಿಸಲಿದ್ದೇನೆ. ಹಾಗೇನಾದರೂ ನನಗೆ ಇದಕ್ಕಾಗಿ ಹಳದಿ ಕಾರ್ಡ್ ನೀಡಿದರೆ ಈ ಬಗ್ಗೆ ಖಂಡಿತವಾಗಿ ತಂಡದ ಜೊತೆ ಚರ್ಚಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಜಗತ್ತಿನ ಶೇ.10ರಷ್ಟು ಜನಸಂಖ್ಯೆ ಈಗ ಕ್ರಿಶ್ಚಿಯಾನೋ ರೊನಾಲ್ಡೋ ಫಾಲೋವರ್ಸ್!
ಹಳದಿ ಕಾರ್ಡ್‌ನ ಪ್ರಾಮುಖ್ಯತೆ ಏನು: ಫುಟ್‌ಬಾಲ್‌ನಲ್ಲಿ ಹಳದಿ ಕಾರ್ಡ್ ಎನ್ನುವುದು ಎಚ್ಚರಿಕೆ. ಒಂದೇ ಪಂದ್ಯದಲ್ಲಿ ಎರಡು ಹಳದಿ ಕಾರ್ಡ್ ಪಡೆದುಕೊಂಡರೆ ಆತ ಆ ಕ್ಷಣದಲ್ಲಿಯೇ ಮೈದಾನದಿಂದ ಹೊರನಡೆಯಬೇಕು ಹಾಗೂ ಮುಂದಿನ ಪಂದ್ಯಕ್ಕೆ ಅಲಭ್ಯರಾಗಬೇಕು. ಇನ್ನು ಒಂದೇ ಕ್ಷಣಕ್ಕೆ ರೆಡ್ ಕಾರ್ಡ್ ಪಡೆದರು ಆತ ತಕ್ಷಣವೇ ಮೈದಾನ ತೊರೆಯಬೇಕಿರುತ್ತದೆ ಮತ್ತು ಮುಂದಿನ ಪಂದ್ಯದಿಂದ ಹೊರಬೀಳುತ್ತಾನೆ.
FIFA World Cup 2022: ಮೋಸದಾಟದ ಆರೋಪದ ನಡುವೆಯೂ ಕತಾರ್ ವಿರುದ್ಧ ಗೆದ್ದ ಈಕ್ವಡಾರ್!
ಫುಟ್‌ಬಾಲ್‌ನಲ್ಲಿ ಹಳದಿ ಕಾರ್ಡ್ ನಿಯಮಗಳು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.