FIFA World Cup 2026 ಕ್ವಾರ್ಟರ್‌ ಫೈನಲ್‌: ಬೆಲ್ಜಿಯಂ ಮಣಿಸಿ ಸೆಮೀಸ್‌ಗೆ ಸ್ಪೇನ್‌ ಲಗ್ಗೆ

Kannadaprabha News   | Kannada Prabha
Published : Jul 12, 2026, 09:21 AM IST
Spain vs Belgium

ಸಾರಾಂಶ

ಬೆಲ್ಜಿಯಂ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಸ್ಪೇನ್‌, 16 ವರ್ಷಗಳ ಬಳಿಕ ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತು. ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್‌ ಮೆರಿನೊ 88ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ತಂಡದ ಗೆಲುವಿನ ಹೀರೋ ಎನಿಸಿದರು.

ಇಂಗೆಲ್‌ವುಡ್‌(ಅಮೆರಿಕ): ಮಿಕೆಲ್‌ ಮೆರಿನೊ ಮತ್ತೊಮ್ಮೆ ಸ್ಪೇನ್‌ ಪಾಲಿಗೆ ಹೀರೋ ಆಗಿ ಹೊರಹೊಮ್ಮಿದರು. ಕೊನೆ ಕ್ಷಣದಲ್ಲಿ ಮೆರಿನೊ ಬಾರಿಸಿದ ಗೋಲಿನ ನೆರವಿನಿಂದ ಬೆಲ್ಜಿಯಂ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 2-1 ಗೋಲುಗಳ ಗೆಲುವು ಸಾಧಿಸಿದ ಸ್ಪೇನ್‌, ಕೇವಲ 2ನೇ ಬಾರಿಗೆ ಅದೂ 16 ವರ್ಷಗಳ ಬಳಿಕ ಫುಟ್ಬಾಲ್‌ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತು.

4 ದಿನಗಳ ಹಿಂದಷ್ಟೇ ಪೋರ್ಚುಗಲ್‌ ವಿರುದ್ಧದ ಪಂದ್ಯದಲ್ಲಿ ಇಂಜುರಿ ಟೈಂನಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದು ನಿರ್ಣಾಯಕ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದ್ದ ಮೆರಿನೋ, 88ನೇ ನಿಮಿಷದಲ್ಲಿ ಗೋಲು ಬಾರಿಸಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಸೆಮೀಸ್‌ಗೇರಿದ ಸ್ಪೇನ್‌, ಫ್ರಾನ್ಸ್‌ ಎದುರು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಜಿದ್ದಾಜಿದ್ದಿಗೆ ಸಜ್ಜಾಯಿತು.

ಪಂದ್ಯದ 30ನೇ ನಿಮಿಷದಲ್ಲೇ ಸ್ಪೇನ್‌ ಖಾತೆ ತೆರೆಯಿತು. ಫ್ಯಾಬಿಯನ್‌ ರೂಯಿಜ್‌ ರೀಬೌಂಡ್‌ ಮೂಲಕ ಆಕರ್ಷಕ ಗೋಲು ಗಳಿಸಿದರು. ಆದರೆ, 41ನೇ ನಿಮಿಷದಲ್ಲಿ ಚಾರ್ಲ್ಸ್‌ ಡೆ ಕೆಟೆಲೆರೆ ಬೆಲ್ಜಿಯಂ ಸಮಬಲ ಸಾಧಿಸಲು ನೆರವಾದರು. ಇದು ಈ ವಿಶ್ವಕಪ್‌ನಲ್ಲಿ ಸ್ಪೇನ್‌ ಬಿಟ್ಟುಕೊಟ್ಟ ಮೊದಲ ಗೋಲು!

71ನೇ ನಿಮಿಷದಲ್ಲಿ ಆದ ಬೆಳವಣಿಗೆ ಸ್ಪೇನ್‌ಗೆ ಅದೃಷ್ಟ ತಂದಿತು. ಬೆಲ್ಜಿಯಂನ ಹಿರಿಯ, ಅನುಭವಿ ಗೋಲ್‌ಕೀಪರ್‌ ಥೈಬೌಟ್‌ ಕೊರ್ಟಿಸ್‌ ಗಾಯಗೊಂಡು ಹೊರನಡೆದರು. ಇದರಿಂದಾಗಿ ಬೆಲ್ಜಿಯಂನ ಗೋಲು ಪೆಟ್ಟಿಗೆಯ ರಕ್ಷಣೆ ಸೆನ್ನೆ ಲ್ಯಾಮೆನ್ಸ್‌ ಹೆಗಲಿಗೆ ಬಿತ್ತು. 86ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೆನಿರೋ, ಕೇವಲ 2 ನಿಮಿಷದಲ್ಲೇ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿ ತಂಡಕ್ಕೆ ಜಯ ಖಾತರಿಪಡಿಸಿದರು.

02ನೇ ಬಾರಿ

ಸ್ಪೇನ್‌ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿರುವುದು ಇದು ಕೇವಲ 2ನೇ ಬಾರಿ. 2010ರಲ್ಲಿ ಮೊದಲ ಬಾರಿ ಸೆಮೀಸ್‌ಗೇರಿದಾಗ ತಂಡ ಚಾಂಪಿಯನ್‌ ಆಗಿತ್ತು. 16 ವರ್ಷ ಬಳಿಕ ಮತ್ತೊಮ್ಮೆ ಸೆಮೀಸ್‌ ಪ್ರವೇಶಿಸಿದೆ.

ಫ್ರಾನ್ಸ್‌ಗೆ ಯಮಾಲ್‌ ಎಚ್ವರಿಕೆ!

ಈ ವಿಶ್ವಕಪ್‌ನಲ್ಲಿ ಸ್ಪೇನ್‌ನ ಯುವ ತಾರೆ ಲ್ಯಾಮಿನೆ ಯಮಾಲ್‌ ಕೇವಲ 1 ಗೋಲು ಬಾರಿಸಿದ್ದರೂ, ತಂಡದ ಅಜೇಯ ಓಟದಲ್ಲಿ ಅವರ ಪಾತ್ರ ಮಹತ್ವದೆನಿಸಿದೆ. ಇದೀಗ ಸೆಮೀಸ್‌ಗೂ ಮುನ್ನ ಯಮಾಲ್‌, ಫ್ರಾನ್ಸ್‌ಗೆ ಎಚ್ಚರಿಕೆ ರವಾನಿಸಿದ್ದಾರೆ. ‘ಫ್ರಾನ್ಸ್‌ ಯಾರನ್ನಾದರೂ ನೋಡಿ ಹೆದರಬೇಕು ಎಂದಿದ್ದರೆ ಅದು ನಮ್ಮನ್ನು’ ಎಂದು ಯಮಾಲ್‌ ಹೇಳಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದ ದ.ಆಫ್ರಿಕಾದ 25ರ ಆ್ಯಡಮ್ಸ್‌ ಅನುಮಾನಾಸ್ಪದವಾಗಿ ಸಾವು!

ಜೋಹಾನ್ಸ್‌ಬರ್ಗ್‌: ಸದ್ಯ ಚಾಲ್ತಿಯಲ್ಲಿರುವ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ 25 ವರ್ಷದ ಮಿಡ್‌ಫೀಲ್ಡರ್‌ ಜೇಡನ್‌ ಆ್ಯಡಮ್ಸ್, ಶನಿವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ವಿಶ್ವಕಪ್‌ನಲ್ಲಿ ಅವರು 2 ಪಂದ್ಯಗಳನ್ನು ಆಡಿದ್ದರು. ಸಾವಿಗೆ ಒಂದು ದಿನ ಮೊದಲು ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರೇಯಸಿಯ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ದ.ಆಫ್ರಿಕಾದ ಭವಿಷ್ಯದ ತಾರೆ ಎನಿಸಿಕೊಂಡಿದ್ದ ಆ್ಯಡಮ್ಸ್‌ ನಿಧನ, ಫುಟ್ಬಾಲ್‌ ಜಗತ್ತಿಗೆ ಆಘಾತ ತಂದಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026: ಮೊರಾಕ್ಕೊ ಕಿಕೌಟ್, ಎಂಟನೇ ಸಲ ಸೆಮಿಫೈನಲ್‌ಗೆ ಫ್ರಾನ್ಸ್ ಲಗ್ಗೆ
ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್: ಸ್ಪೇನ್-ಬೆಲ್ಜಿಯಂ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರು