ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್: ಸ್ಪೇನ್-ಬೆಲ್ಜಿಯಂ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರು

Kannadaprabha News   | Kannada Prabha
Published : Jul 10, 2026, 10:50 AM IST
Spain

ಸಾರಾಂಶ

ಫಿಫಾ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಜೇಯ ತಂಡಗಳಾದ ಸ್ಪೇನ್‌ ಮತ್ತು ಬೆಲ್ಜಿಯಂ ಸೆಣಸಾಡಲಿವೆ. ಈ ವಿಶ್ವಕಪ್‌ನಲ್ಲಿ ಒಂದೂ ಗೋಲು ಬಿಟ್ಟುಕೊಡದ ಸ್ಪೇನ್‌ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ಬೆಲ್ಜಿಯಂ, ಎರಡೂ ತಂಡಗಳು 3ನೇ ಬಾರಿ ಸೆಮಿಫೈನಲ್‌ ಪ್ರವೇಶಿಸುವ ಗುರಿ ಹೊಂದಿವೆ.

ಇಂಗಲ್‌ವುಡ್‌(ಅಮೆರಿಕ): ಈ ಬಾರಿ ಫಿಫಾ ವಿಶ್ವಕಪ್‌ನ 2ನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶುಕ್ರವಾರ ಸ್ಪೇನ್‌ ಹಾಗೂ ಬೆಲ್ಜಿಯಂ ಮುಖಾಮುಖಿಯಾಗಲಿವೆ. ಉಭಯ ತಂಡಗಳೂ ವಿಶ್ವಕಪ್‌ನಲ್ಲಿ 3ನೇ ಬಾರಿ ಸೆಮಿಫೈನಲ್‌ಗೇರುವ ಗುರಿಯೊಂದಿಗೆ ಸೆಣಸಾಡಲಿವೆ.

2010ರ ಚಾಂಪಿಯನ್‌ ಸ್ಪೇನ್‌ ತಂಡ ಈ ಬಾರಿ ಅಜೇಯವಾಗಿದೆ. ಗಮನಾರ್ಹ ಏನೆಂದರೆ, ತಂಡ ಈ ವಿಶ್ವಕಪ್‌ನಲ್ಲಿ ಎದುರಾಳಿ ತಂಡಗಳಿಗೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಗುಂಪು ಹಂತದಲ್ಲಿ ‘ಎಚ್‌’ ಗುಂಪಿನಲ್ಲಿದ್ದ ತಂಡ 2 ಗೆಲುವು, 1 ಡ್ರಾ ಸಾಧಿಸಿತ್ತು. ಒಟ್ಟು 5 ಗೋಲು ಬಾರಿಸಿತ್ತು. ಅಂತಿಮ 32ರ ಸುತ್ತಿನಲ್ಲಿ ತಂಡ ಆಸ್ಟ್ರಿಯಾ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿತ್ತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಪೋರ್ಚುಗಲ್‌ ವಿರುದ್ಧ 1-0 ಅಂತರದಲ್ಲಿ ಜಯಗಳಿಸಿ ಅಂತಿಮ 8ರ ಘಟ್ಟ ಪ್ರವೇಶಿಸಿದೆ. ಮೈಕೆಲ್ ಒಯಾರ್ಜಬಲ್ ಈ ಬಾರಿ 4 ಗೋಲು ಗಳಿಸಿದ್ದು, ತಂಡದ ಪರ ಗರಿಷ್ಠ ಎನಿಸಿಕೊಂಡಿದೆ.

ತಂಡದ ಗೋಲ್‌ಕೀಪರ್‌ ಉನೈ ಸೈಮನ್‌ ಸತತ 6 ಪಂದ್ಯಗಳಲ್ಲಿ ಕ್ಲೀನ್‌ಶೀಟ್‌ ಹೊಂದಿದ್ದು, ಸತತವಾಗಿ 609 ನಿಮಿಷಗಳ ಕಾಲ ಒಂದೂ ಗೋಲ್‌ ಬಿಟ್ಟುಕೊಡದೆ ವಿಶ್ವದಾಖಲೆ ನಿರ್ಮಿಸಿದ್ದಾರೆ.ಮತ್ತೊಂದೆಡೆ 2018ರ 3ನೇ ಸ್ಥಾನಿ ಬೆಲ್ಜಿಯಂ ತಂಡ ಕೂಡಾ ಈ ಬಾರಿ ಅಜೇಯವಾಗಿ ಉಳಿದಿದೆ. ‘ಜಿ’ ಗುಂಪಿನಲ್ಲಿ 1 ಗೆಲುವು, 2 ಡ್ರಾ ಸಾಧಿಸಿದ್ದ ತಂಡ ಅಂತಿಮ 32ರ ಸುತ್ತಿನಲ್ಲಿ ಸೆನೆಗಲ್‌ ವಿರುದ್ಧ 3-2, ಪ್ರಿ ಕ್ವಾರ್ಟರ್‌ನಲ್ಲಿ ಅಮೆರಿಕ ವಿರುದ್ಧ 4-1 ಗೋಲುಗಳಿಂದ ಭರ್ಜರಿ ಜಯಗಳಿಸಿದೆ.

ಪಂದ್ಯ ಆರಂಭ: ರಾತ್ರಿ 12.30ಕ್ಕೆ

ವಿಶ್ವಕಪ್‌ ಮಧ್ಯೆ ರಾಜೀನಾಮೆ ಪರ್ವ: ಪೋರ್ಚುಗಲ್‌, ಜರ್ಮನಿ ಸೇರಿ 10 ತಂಡದ ಕೋಚ್‌ಗಳು ರಾಜೀನಾಮೆ

ಫ್ಲೋರಿಡಾ(ಅಮೆರಿಕ): ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಹಲವು ಬಲಿಷ್ಠ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ಹೊರಬಿದ್ದಿವೆ. ಇನ್ನೂ ಕೆಲ ತಂಡಗಳು ಗುಂಪು ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. ಇದರ ಪರಿಣಾಮ ಎಂಬಂತೆ ವಿಶ್ವಕಪ್‌ ಮಧ್ಯೆಯೇ 10 ತಂಡಗಳ ಕೋಚ್‌ಗಳು ರಾಜೀನಾಮೆ ಘೋಷಿಸಿದ್ದಾರೆ.

ಪೋರ್ಚುಗಲ್‌ ತಂಡದ ಕೋಚ್‌ ರಾಬೆರ್ಟೊ ಮಾರ್ಟಿನೆಜ್‌ ಅವರು ಸ್ಪೇನ್ ವಿರುದ್ಧ ಸೋಲಿನ ಬಳಿಕ ತಂಡಕ್ಕೆ ವಿದಾಯ ಹೇಳಿದ್ದಾರೆ. ಜರ್ಮನಿ ಕೋಚ್‌ ಜೂಲಿಯನ್‌ ನಗೆಲ್ಸ್‌ಮನ್ ಅಂತಿಮ 32ರ ಸುತ್ತಿನ ಬಳಿಕ ರಾಜೀನಾಮೆ ಪ್ರಕಟಿಸಿದ್ದಾರೆ. ಉಳಿದಂತೆ ಘಾನಾ ಕೋಚ್‌ ಕಾರ್ಲೊಸ್‌ ಖ್ವಿರೋಜ್‌, ಈಕ್ವೆಡಾರ್‌ನ ಸೆಬಾಸ್ಟಿಯನ್‌ ಬೆಕಾಸೆಸೆ, ನೆದರ್‌ಲೆಂಡ್ಸ್‌ನ ರೊನಾಲ್ಡೊ ಕೋಮನ್, ಚೆಕ್‌ ಗಣರಾಜ್ಯದ ಮಿರೋಸ್ಲಾವ್‌ ಕೌಬೆಕ್‌, ಸ್ಕಾಟ್ಲೆಂಡ್‌ನ ಸ್ಟೀವ್‌ ಕ್ಲಾರ್ಕ್‌, ದಕ್ಷಿಣ ಕೊರಿಯಾದ ಹೊಂಗ್‌ ಮ್ಯುಂಗ್‌ ಬೊ, ಮೆಕ್ಸಿಕೊದ ಜೇವಿಯರ್‌ ಅಗ್ವೈರ್‌ ಹಾಗೂ ಉರುಗ್ವೆ ತಂಡದ ಮಾರ್ಸೆಲ್‌ ಬೀಲ್ಸಾ ರಾಜೀನಾಮೆ ನೀಡಿದ್ದಾರೆ. ಇನ್ನು, ಟ್ಯುನೀಶಿಯಾ ತಂಡದ ಕೋಚ್‌ ಸಬ್ರಿ ಲಮೋಚಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.

ಫೈನಲ್‌ ನಡುವೆ ಶೋ: ಜಸ್ಟಿನ್‌ ಬೀಬರ್‌, ಶಕೀರಾ ಸೇರಿ ಸ್ಟಾರ್‌ಗಳು ಭಾಗಿ

ನ್ಯೂಯಾರ್ಕ್‌: ಜೂ.19ರಂದು ನಡೆಯಲಿರುವ ಈ ಬಾರಿ ಫಿಫಾ ವಿಶ್ವಕಪ್‌ನ ಫೈನಲ್‌ ಪಂದ್ಯದ ಮಧ್ಯೆ ಸಮಾರೋಪ ಸಮಾರಂಭ ನಡೆಸಲು ಫಿಫಾ ಸಜ್ಜಾಗಿದೆ. ಸಮಾರಂಭದಲ್ಲಿ ವಿಶ್ವಪ್ರಸಿದ್ಧ ತಾರೆಗಳು ಪ್ರದರ್ಶನ ನೀಡಲಿದ್ದಾರೆ. ಪಂದ್ಯದ ಮೊದಲಾರ್ಧದ ಬಳಿಕ 11 ನಿಮಿಷಗಳ ಸಮಾರಂಭ ನಡೆಯಲಿದೆ. ಜಸ್ಟಿನ್‌ ಬೀಬರ್‌, ಶಕೀರಾ, ಬಿಟಿಎಸ್‌, ಮಡೋನ್ನಾ, ಬುರ್ನಾ ಬಾಯ್‌ ಸೇರಿ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಾದ ರೆಫ್ರಿ ವಿವಾದ: ಟೂರ್ನಿಯೇ ಫಿಕ್ಸ್‌ ಆಗಿದೆ ಎಂದ ಈಜಿಫ್ಟ್ ಆಟಗಾರ!
FIFA World Cup 2026: ಬಲಿಷ್ಠ 8 ತಂಡಗಳ ನಡುವೆ ಇನ್ನು ಕ್ವಾರ್ಟರ್‌ ಕದನ