FIFA World Cup 2026: ಮೊರಾಕ್ಕೊ ಕಿಕೌಟ್, ಎಂಟನೇ ಸಲ ಸೆಮಿಫೈನಲ್‌ಗೆ ಫ್ರಾನ್ಸ್ ಲಗ್ಗೆ

Kannadaprabha News   | Kannada Prabha
Published : Jul 11, 2026, 09:54 AM IST
France vs Morocco

ಸಾರಾಂಶ

ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಮೊರಾಕ್ಕೊ ವಿರುದ್ಧ 2-0 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕೀಲಿಯನ್‌ ಎಂಬಾಪೆ ಮತ್ತು ಒಸ್ಮಾನ್ ಡೆಂಬೆಲೆ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಫ್ರಾನ್ಸ್‌ 8ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದರೆ, ಎಂಬಾಪೆ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಫಾಕ್ಸ್‌ಬೊರೊ(ಅಮೆರಿಕ): 2 ಬಾರಿ ಚಾಂಪಿಯನ್‌ ಫ್ರಾನ್ಸ್‌ ತಂಡ ಫಿಫಾ ವಿಶ್ವಕಪ್‌ನಲ್ಲಿ 8ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಫ್ರಾನ್ಸ್‌, ಗುರುವಾರ ಮಧ್ಯರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು.

ಟೂರ್ನಿಯುದ್ದಕ್ಕೂ ಅಬ್ಬರದ ಪ್ರದರ್ಶನ ನೀಡುತ್ತಿರುವ ಕೀಲಿಯನ್‌ ಎಂಬಾಪೆ ಮತ್ತೊಮ್ಮೆ ಫ್ರಾನ್ಸ್‌ ಪಾಲಿಗೆ ಆಪತ್ಬಾಂಧವರಾದರು. ಆರಂಭಿಕ 4 ನಿಮಿಷಗಳಲ್ಲೇ 2 ಬಾರಿ ಗೋಲು ಗಳಿಸುವ ಅವಕಾಶ ತಪ್ಪಿಸಿಕೊಂಡ ಫ್ರಾನ್ಸ್‌ಗೆ 28ನೇ ನಿಮಿಷದಲ್ಲಿ ಪೆನಾಲ್ಟಿ ಲಭಿಸಿತು. ಆದರೆ ಎಂಬಾಪೆ ಹೊಡೆದ ಚೆಂಡನ್ನು ಯಾಸಿನ್‌ ಬೂನೊ ಯಶಸ್ವಿಯಾಗಿ ತಡೆದರು. 50ನೇ ನಿಮಿಷದವರೆಗೆ ತಂಡ 5 ಬಾರಿ ಗೋಲಿನಿಂದ ಕೂದಲೆಳೆ ಅಂತರದಲ್ಲಿ ವಂಚಿತವಾಯಿತು. ಆದರೆ 60ನೇ ನಿಮಿಷದ ಬಳಿಕ ಎಂಬಾಪೆ ಹಾಗೂ ಒಸ್ಮಾನ್ ಡೆಂಬೆಲೆ ಮ್ಯಾಜಿಕ್‌ ಮಾಡಿದರು. ಕೇವಲ 6 ನಿಮಿಷಗಳ ಅಂತರದಲ್ಲಿ ಇವರಿಬ್ಬರು ಗೋಲು ದಾಖಲಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 76ನೇ ನಿಮಿಷದಲ್ಲಿ ನೋವಿನಿಂದಾಗಿ ಎಂಬಾಪೆ ಮೈದಾನ ತೊರೆದರೂ, ತಾವು ಸಂಪೂರ್ಣ ಫಿಟ್‌ ಇರುವುದಾಗಿ ಪಂದ್ಯದ ಬಳಿಕ ಸ್ಪಷ್ಟಪಡಿಸಿದರು.

ಕಳೆದ ಸಲ ಸೆಮೀಸ್‌ನಲ್ಲಿ ಸೋಲು:

ಫ್ರಾನ್ಸ್‌ ವಿರುದ್ಧ ಮೊರಾಕ್ಕೊ ತಂಡ ಕಳೆದ ಬಾರಿ ಸೆಮಿಫೈನಲ್‌ನಲ್ಲಿ 0-2 ಅಂತರದಲ್ಲಿ ಸೋತಿತ್ತು. ಈ ಬಾರಿ ಕ್ವಾರ್ಟರ್‌ ಫೈನಲ್‌ ಹಂತದಲ್ಲೇ ಮುಗ್ಗರಿಸಿದೆ. ಇದರೊಂದಿಗೆ ಸತತವಾಗಿ 2ನೇ ಬಾರಿ ಸೆಮಿಫೈನಲ್‌ಗೇರುವ ಆಫ್ರಿಕನ್‌ ತಂಡದ ಕನಸು ಭಗ್ನಗೊಂಡಿತು.

ಸತತ 3 ಸಲ ಸೆಮಿಗೆ ತಲುಪಿದ 3ನೇ ತಂಡ

ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ಸತತ 3ನೇ ಬಾರಿ ಸೆಮಿಫೈನಲ್‌ ತಲುಪಿದ್ದು, ಈ ಸಾಧನೆ ಮಾಡಿದ 3ನೇ ತಂಡ ಎನಿಸಿಕೊಂಡಿತು. ಜರ್ಮನಿ ತಂಡ 2002, 2006, 2010 ಹಾಗೂ 2014ರಲ್ಲಿ ಸತತವಾಗಿ 4 ಬಾರಿ ಸೆಮಿಫೈನಲ್‌ಗೇರಿತ್ತು. ಬ್ರೆಜಿಲ್‌ ತಂಡ 1994ರಿಂದ 2002ರ ನಡುವೆ 3 ಬಾರಿ ಉಪಾಂತ್ಯ ಪ್ರವೇಶಿಸಿತ್ತು.

ಅತಿ ಹೆಚ್ಚು ಸಲ ಸೆಮಿ: ಫ್ರಾನ್ಸ್‌ ಜಂಟಿ ನಂ.2

ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಬಾರಿ ಅಂತಿಮ-4ರ ಸುತ್ತಿಗೆ ಪ್ರವೇಶ ಪಡೆದ ತಂಡಗಳ ಪಟ್ಟಿಯಲ್ಲಿ ಫ್ರಾನ್ಸ್‌ ತಂಡ ಬ್ರೆಜಿಲ್‌ ಜೊತೆ ಜಂಟಿ 2ನೇ ಸ್ಥಾನಕ್ಕೇರಿದೆ. 12 ಬಾರಿ ಸೆಮೀಸ್‌ಗೇರಿರುವ ಜರ್ಮನಿ ಮೊದಲ ಸ್ಥಾನದಲ್ಲಿದೆ.

ಫಿಫಾ ವಿಶ್ವಕಪ್‌ನಲ್ಲಿ ಎಂಬಾಪೆ 20 ಪಂದ್ಯಗಳಲ್ಲಿ 20 ಗೋಲು!

ಫಾಕ್ಸ್‌ಬೊರೊ(ಅಮೆರಿಕ): ಫುಟ್ಬಾಲ್‌ನ ಯುವ ಸೂಪರ್‌ಸ್ಟಾರ್‌ ಕೀಲಿಯನ್‌ ಎಂಬಾಪೆ ವಿಶ್ವಕಪ್‌ನಲ್ಲಿ 20 ಪಂದ್ಯಗಳಲ್ಲಿ 20ನೇ ಗೋಲು ದಾಖಲಿಸಿದ್ದಾರೆ. ಅವರು ಗರಿಷ್ಠ ಗೋಲು ಗಳಿಕೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿ 21 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಎಂಬಾಪೆಗಿಂತ ಮೆಸ್ಸಿ 11 ಪಂದ್ಯ ಹೆಚ್ಚು(31 ಪಂದ್ಯ) ಆಡಿದ್ದಾರೆ ಎಂಬುದು ಗಮನಾರ್ಹ.

ಇನ್ನು, ಈ ಬಾರಿ ವಿಶ್ವಕಪ್‌ನಲ್ಲೇ ಎಂಬಾಪೆ 8 ಗೋಲು ದಾಖಲಿಸಿದ್ದು, ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಸತತ 2ನೇ ಬಾರಿ ಗೋಲ್ಡನ್‌ ಬೂಟ್‌ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಎಂಬಾಪೆ 8 ಗೋಲಿನ ಜೊತೆ 3 ಅಸಿಸ್ಟ್‌(ಗೋಲು ಗಳಿಸಲು ನೆರವು) ಮಾಡಿದ್ದು, ಮೆಸ್ಸಿ 8 ಗೋಲು ಹಾಗೂ 1 ಅಸಿಸ್ಟ್‌ ಮಾಡಿದ್ದಾರೆ. ಎರ್ಲಿಂಗ್‌ ಹಾಲೆಂಡ್‌ 7, ಹ್ಯಾರಿ ಕೇನ್‌ 6 ಗೋಲು ಗಳಿಸಿದ್ದಾರೆ.

ಇಂದಿನ ಕ್ವಾರ್ಟರ್‌ ಫೈನಲ್‌

ನಾರ್ವೆ-ಇಂಗ್ಲೆಂಡ್‌, ರಾತ್ರಿ 2.30

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್: ಸ್ಪೇನ್-ಬೆಲ್ಜಿಯಂ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರು
ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಾದ ರೆಫ್ರಿ ವಿವಾದ: ಟೂರ್ನಿಯೇ ಫಿಕ್ಸ್‌ ಆಗಿದೆ ಎಂದ ಈಜಿಫ್ಟ್ ಆಟಗಾರ!