Mexican Violence ಫುಟ್ಬಾಲ್ ಪಂದ್ಯದ ವೇಳೆ ಮಾರಾಮಾರಿ, 27 ಮಂದಿಗೆ ಗಂಭೀರ ಗಾಯ..!

By Suvarna News  |  First Published Mar 7, 2022, 1:07 PM IST

* ಮೆಕ್ಸಿಕನ್‌ ಫುಟ್ಬಾಲ್‌ ಟೂರ್ನಿಯ ವೇಳೆ ಅಭಿಮಾನಿಗಳ ನಡುವೆ ಬಡಿದಾಟ

* ಘಟನೆಯಲ್ಲಿ ಗಾಯಾಳುಗಳಾದ 26 ಮಂದಿಯನ್ನು ಆಸ್ಪತ್ರೆಗೆ ದಾಖಲು

* ಕೆಲವರ ಆರೋಗ್ಯ ಪರಿಸ್ಥಿತಿ ಗಂಭೀರ


ಮೆಕ್ಸಿಕನ್ ಸಿಟಿ(ಮಾ.07): ಮೆಕ್ಸಿಕನ್‌ ಫುಟ್ಬಾಲ್‌ನ ಎರಡು ಕ್ಲಬ್‌ ತಂಡಗಳ ನಡುವಿನ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಕನಿಷ್ಠ 26 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಕ್ವಾರೆಟ್ಟಾರೋದ ಲಾ ಕೊರೆಗಿಡೋರಾ ಮೈದಾನದಲ್ಲಿ ಕ್ವಾರೆಟಾರೊ ಹಾಗೂ ಅಟ್ಲಾಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯ ಆರಂಭವಾಗಿ ಒಂದು ಗಂಟೆ ಕಳೆಯುವಷ್ಟರಲ್ಲಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ.
 
ಈ ಘಟನೆಯ ವೇಳೆ ಕೆಲವು ಅಭಿಮಾನಿಗಳು, ಚಿಕ್ಕ ಮಕ್ಕಳು ಹಾಗೂ ಮತ್ತವರ ಪೋಷಕರು ಸ್ಟೇಡಿಯಂನಿಂದ ಪಾರಾಗಲು ಯತ್ನಿಸಿದಾಗ ಸಾಕಷ್ಟು ನೂಕುನುಗ್ಗಲು ಉಂಟಾಗಿದೆ. ಸ್ಟೇಡಿಯಂನಲ್ಲಿ ಉಭಯ ತಂಡಗಳ ಅಭಿಮಾನಿಗಳ ಹೊಡೆದಾಟ ಜೋರಾಗುತ್ತಿದ್ದಂತೆಯೇ ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿ, ಪ್ರೇಕ್ಷಕರು ಈ ಘಟನೆಯಿಂದ ಪಾರಾಗಲು ಸ್ಟೇಡಿಯಂ ಗೇಟ್ ಓಪನ್ ಮಾಡಿದ್ದಾರೆ. ತಕ್ಷಣ ಪಂದ್ಯವನ್ನು ಸ್ಥಗಿತಗೊಳಿಸಿ, ಸುರಕ್ಷಿತವಾಗಿ ಆಟಗಾರರನ್ನು ಕೊಂಡೊಯ್ಯಲಾಗಿದೆ.

ಈ ಘಟನೆಯಲ್ಲಿ ಗಾಯಾಳುಗಳಾದ 26 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಪೈಕಿ ಮೂರು ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇನ್ನು ಮೂರು ಮಂದಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಇನ್ನು 10 ಮಂದಿಯ ಆರೋಗ್ಯ ಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು, ಇನ್ನು 10 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಕ್ವಾರೆಟರೊ ರಾಜ್ಯದ ಗರ್ವನರ್ ಮೊರಿಸಿಯೊ ಕುರಿ ಭಾನುವಾರ ತಿಳಿಸಿದ್ದಾರೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಇದನ್ನು ನಾವು ದುರಂತವೆಂದು ಹೇಳಲು ಸಾಧ್ಯವಿಲ್ಲ ಎಂದು ಗರ್ವನರ್ ಮೊರಿಸಿಯೊ ಕುರಿ ಹೇಳಿದ್ದಾರೆ. ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ವಿಶ್ವ ಫುಟ್ಬಾಲ್‌ ಗವರ್ನಿಂಗ್ ಸಮಿತಿ ಫಿಫಾ, ಈ ರೀತಿಯ ಘಟನೆ ಹಾಗೂ ಹಿಂಸೆಯನ್ನು ಒಪ್ಪಲು ಹಾಗೂ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.

Latest Videos

undefined

ಫಿಫಾ ಜತೆಗೆ ಮೆಕ್ಸಿಕನ್ ಫುಟ್ಬಾಲ್‌ ಅಸೋಸಿಯೇಷನ್ ಹಾಗೂ ಕಾನ್‌ಕ್ಯಾಫ್‌ ಈ ದುರಂತ ಘಟನೆಯನ್ನು ಖಂಡಿಸಿದ್ದು, ಸಂಬಂಧಿಸಿದ ಸ್ಥಳೀಯಾಡಳಿತವು ಈ ಘಟನೆಯ ಕುರಿತಂತೆ ಸರಿಯಾದ ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿವೆ. ಈ ಎಲ್ಲಾ ಘಟನೆಗಳಿಗೂ ಕಾನೂನು ಅನ್ವಯವಾಗಲಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಎಂದು ಗರ್ವನರ್ ಮೊರಿಸಿಯೊ ಕುರಿ ಹೇಳಿದ್ದಾರೆ.

ವಿಶ್ವ ಬಾಕ್ಸಿಂಗ್‌, ಏಷ್ಯನ್‌ ಗೇಮ್ಸ್‌ನಿಂದ ಮೇರಿ ಹಿಂದಕ್ಕೆ

ನವದೆಹಲಿ: 6 ಬಾರಿ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಮೇರಿ ಮೇರಿ ಕೋಮ್‌ ಮುಂಬರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಯುವ ಬಾಕ್ಸರ್‌ಗಳು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಸರು ಮಾಡಲು ಹಾಗೂ ಪ್ರಮುಖ ಟೂರ್ನಿಗಳಿಗೆ ಅವಕಾಶ ಪಡೆಯಬೇಕೆಂಬ ಉದ್ದೇಶದಿಂದ ನಾನು ಈ ಬಾರಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ ಎಂದು ಮೇರಿ ತಿಳಿಸಿದ್ದಾರೆ. ಆದರೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆಡಿಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಮೇ 6ರಿಂದ 21ರ ತನಕ ಟರ್ಕಿಯಲ್ಲಿ ನಡೆಯಲಿದೆ. 2022ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಜುಲೈ 28ರಂದು ಚಾಲನೆ ದೊರೆತರೆ, 2022ರ ಏಷ್ಯನ್‌ ಗೇಮ್ಸ್‌ ಸೆಪ್ಟೆಂಬರ್ 10ರಿಂದ ಆರಂಭಗೊಳ್ಳಲಿದೆ.

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ 3ನೇ ಬಂಗಾರ

ಕೈರೋ: ವರ್ಷದ ಮೊದಲ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಭಾನುವಾರ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ರಾಹಿ ಸೊರ್ನೊಬತ್‌, ಈಶಾ ಸಿಂಗ್‌ ಹಾಗೂ ರಿಧಮ್‌ ಸಂಗ್ವಾನ್‌ ಜೋಡಿ ಸಿಂಗಾಪೂರದ ಜೋಡಿಯನ್ನು 17-13 ಅಂತರದಲ್ಲಿ ಸೋಲಿಸಿ ಬಂಗಾರಕ್ಕೆ ಮುತ್ತಿಕ್ಕಿತು. 

ಇದಕ್ಕೂ ಮೊದಲು ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ ಹಾಗೂ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಶ್ರೀ ನಿವೇಥ, ಈಶಾ ಸಿಂಗ್‌ ಹಾಗೂ ರುಚಿತಾ ವಿನೇರ್ಕರ್‌ ಬಂಗಾರ ಗೆದ್ದಿದ್ದರು. ಭಾರತ ಒಟ್ಟು 5 ಪದಕಗಳನ್ನು ಬಾಚಿಕೊಂಡಿದೆ.

click me!