FIFA World Cup ಗೆಲುವಿನ ಬೆನ್ನಲ್ಲೇ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ ಲಿಯೋನೆಲ್ ಮೆಸ್ಸಿ ಮಡದಿ..!

By Naveena K V  |  First Published Dec 19, 2022, 4:53 PM IST

ಫಿಫಾ ವಿಶ್ವಕಪ್ ಗೆದ್ದು ಬೀಗಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ
ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ ಲಿಯೋನೆಲ್ ಮೆಸ್ಸಿ ಪತ್ನಿ
ಛಲ ಬಿಡದೇ ಹೋರಾಡುವ ಮನೋಭಾವವನ್ನು ಕಲಿಸಿದ್ದಕ್ಕೆ ಧನ್ಯವಾದಗಳು ಎಂದ ಅಂಟೊನೆಲ್ಲಾ ರೊಕಾಜೊ


ಲುಸೈಲ್(ಜ.19): ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್‌ ಟೂರ್ನಿಯ ನೂತನ ಅಧಿಪತಿಯಾಗಿ ಹೊರಹೊಮ್ಮಿದೆ. ಕತಾರ್‌ನಲ್ಲಿ ಜರುಗಿದ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲಿನ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದ ಅರ್ಜೆಂಟೀನಾ ತಂಡವು ಮೂರನೇ ಬಾರಿಗೆ ವಿಶ್ವಕಪ್ ಟೂರ್ನಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ಲಿಯೋನೆಲ್ ಮೆಸ್ಸಿ ತನ್ನದೇ ಆದ ಪಾತ್ರ ನಿಭಾಯಿಸಿದ್ದಾರೆ. ಇದೀಗ ಮೆಸ್ಸಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಕ್ಕೆ ಅವರ ಪತ್ನಿ ಅಂಟೊನೆಲ್ಲಾ ರೊಕಾಜೊ, ಭಾವನಾತ್ಮಕ ಸಂದೇಶ ರವಾನಿಸಿದ್ದು, ಛಲ ಬಿಡದೇ ಹೋರಾಡುವ ಮನೋಭಾವವನ್ನು ಕಲಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡವು 4-2 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಕೇಕೆ ಹಾಕಿತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕುಟುಂಬದ ಫೋಟೋ ಹಂಚಿಕೊಂಡಿರುವ ಮೆಸ್ಸಿ ಪತ್ನಿ ಅಂಟೊನೆಲ್ಲಾ ರೊಕಾಜೊ, "ಚಾಂಪಿಯನ್ಸ್‌! ನಾನು ಎಲ್ಲಿಂದ ಆರಂಭಿಸಬೇಕೋ ತಿಳಿಯುತ್ತಿಲ್ಲ. ನಮಗೆಲ್ಲರಿಗೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಕೊನೆಯವರೆಗೂ ಛಲ ಬಿಡದೇ ಹೋರಾಡುವುದನ್ನು ಕಲಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಕೊನೆಯ ಕ್ಷಣದವರೆಗೂ ನೀವು ಹೋರಾಡಲೇಬೇಕು" ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Antonela Roccuzzo (@antonelaroccuzzo)

ಕಳೆದ ಹಲವು ವರ್ಷಗಳಿಂದ ನೀವು ಸಾಕಷ್ಟು ಬಾರಿ ಕಪ್‌ ಗೆಲ್ಲದೇ ಇರುವ ನೋವನ್ನು ಅನುಭವಿಸಿದ್ದೀರ. ಲೆಟ್ಸ್‌ ಗೋ ಅರ್ಜೆಂಟೀನಾ ಎಂದು ಲಿಯೋನೆಲ್ ಮೆಸ್ಸಿ ಪತ್ನಿ ಅಂಟೊನೆಲ್ಲಾ ರೊಕಾಜೊ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮೆಸ್ಸಿ 2022ರ ಫಿಫಾ ವಿಶ್ವಕಪ್ ಗೆದ್ದೇ ಗೆಲ್ತಾರೆ, ನಿಜವಾಯ್ತು 7 ವರ್ಷದ ಹಿಂದೆ ನುಡಿದ ಭವಿಷ್ಯವಾಣಿ..!

ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ 1986ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸಾಧಿಸಿದ್ದನ್ನು ಈ ಬಾರಿ ಲಿಯೋನೆಲ್ ಮೆಸ್ಸಿ ಮಾಡಿ ತೋರಿಸಿದ್ದಾರೆ. ಅರ್ಜೆಂಟೀನಾ ತಂಡವು ತಾನಾಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು 2-1 ಅಂತರದ ಆಘಾತಕಾರಿ ಸೋಲು ಅನುಭವಿಸಿತ್ತು. ಆದರೆ ಇದಾದ ಬಳಿಕ ತಂಡವನ್ನು ಚಾಂಪಿಯನ್‌ ಪಟ್ಟದವರೆಗೆ ಮುನ್ನಡೆಸುವ ಹಾದಿ ಲಿಯೋನೆಲ್ ಮೆಸ್ಸಿ ಪಾಲಿಗೆ ಅಷ್ಟೇನೂ ಸುಲಭವಾಗಿರಲಿಲ್ಲ. ಎಲ್ಲಾ ಜವಾಬ್ದಾರಿಯನ್ನು ಮೈಮೇಲೆ ಎಳೆದುಕೊಂಡು ಮೆಸ್ಸಿ ಈ ವಿಶ್ವಕಪ್ ಟೂರ್ನಿಯಲ್ಲಿ 7 ಗೋಲು ಸಿಡಿಸಿ ಸಂಭ್ರಮಿಸಿದರು. ಇನ್ನು ಮೂರು ಬಾರಿ ಗೋಲು ಬಾರಿಸಲು ತಮ್ಮ ತಂಡದ ಆಟಗಾರರಿಗೆ ನೆರವಾದರು. ಈ ಮೂಲಕ ಮೆಸ್ಸಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗೋಲ್ಡನ್ ಬಾಲ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಟೂರ್ನಿಯುದ್ದಕ್ಕೂ ತಮ್ಮ ಅದ್ಭುತ ಕಾಲ್ಚಳಕವನ್ನು ತೋರಿದ ಲಿಯೋನೆಲ್ ಮೆಸ್ಸಿ, ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಗುಂಪು ಹಂತ, ಪ್ರಿ ಕ್ವಾರ್ಟರ್‌ ಫೈನಲ್, ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಗೋಲು ಬಾರಿಸಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು.

click me!