
ಫುಟ್ಬಾಲ್ ಲೋಕದ ಅತಿದೊಡ್ಡ ತಾರೆಯರು ಮಿಂಚಿನ ಆಟವಾಡಿದ್ದು, 2026ರ ಫಿಫಾ ವಿಶ್ವಕಪ್‌ನ ಮೆರುಗು ಹೆಚ್ಚಿಸಿದ್ದಾರೆ. ಲಿಯೋನೆಲ್ ಮೆಸ್ಸಿ, ಕಿಲಿಯಾನ್ ಎಂಬಾಪೆ, ಎರ್ಲಿಂಗ್ ಹಾಲ್ಯಾಂಡ್ ಭರ್ಜರಿ ಗೋಲುಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದು, ಕೆಲ ಮಹತ್ವದ ದಾಖಲೆಗಳನ್ನು ಬರೆದಿದ್ದಾರೆ.
ಕನ್ಸಾಸ್ ಸಿಟಿ: ದಿಗ್ಗಜ ಲಿಯೋನೆಲ್ ಮೆಸ್ಸಿಯ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ, 2026ರ ಫಿಫಾ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಪಡೆದಿದೆ. ಇನ್ನೊಂದು ವಾರದಲ್ಲಿ 39 ವರ್ಷ ಪೂರೈಸಲಿರುವ ಮೆಸ್ಸಿಯ ಮ್ಯಾಜಿಕ್‌ಗೆ ಅಲ್ಜೀರಿಯಾ ಮಂಕಾಯಿತು. ಅರ್ಜೆಂಟೀನಾ 3-0 ಗೋಲುಗಳ ಗೆಲುವು ಸಾಧಿಸಿತು. 17ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದ ಮೆಸ್ಸಿ, 60, 76ನೇ ನಿಮಿಷಗಳಲ್ಲಿ ಮತ್ತೆರಡು ಗೋಲು ಬಾರಿಸಿದರು.
01ನೇ ಆಟಗಾರ: ಸತತ 6 ವಿಶ್ವಕಪ್‌ಗಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಮೆಸ್ಸಿ. 2006ರಲ್ಲಿ ಮೊದಲ ವಿಶ್ವಕಪ್ ಆಡಿದ್ದರು.
20 ವರ್ಷ: ಮೆಸ್ಸಿಜೂ.16, 2006ರಂದು ವಿಶ್ವಕಪ್‌ನಲ್ಲಿ ಮೊದಲ ಗೋಲು ಬಾರಿಸಿದ್ದರು. ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಗೋಲು ದಾಖಲಾಗಿತ್ತು. ಸರಿಯಾಗಿ 20 ವರ್ಷಗಳ ಬಳಿಕ, ಜೂ.16, 2026ರಂದು ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದರು.
ಅಲ್ಜೀರಿಯಾ ವಿರುದ್ಧ 3 ಗೋಲು ದಾಖಲಿಸಿದ ಮೆಸ್ಸಿ, ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದರು. 16 ಗೋಲುಗಳೊಂದಿಗೆ ಜರ್ಮಿನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸಾ ದಾಖಲೆಯನ್ನು ಸರಿಗಟ್ಟಿದರು.
ಈಸ್ಟ್ ರುಥರ್‌ಫೋರ್ಡ್ (ನ್ಯೂಯಾರ್ಕ್): ಕಿಲಿಯನ್ ಎಂಬಾಪೆ ಬಾರಿಸಿದ 2 ಗೋಲುಗಳ ನೆರವಿನಿಂದ ಸೆನೆಗಲ್ ವಿರುದ್ಧ ಫ್ರಾನ್ಸ್ 3-1ರ ಜಯ ಸಾಧಿಸಿತು. ಎಂಬಾಪೆ 66, 90+6 ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಬ್ರಾಡ್ಲೆ ಬಾರ್ಕೋಲಾ 82ನೇ ನಿಮಿಷದಲ್ಲಿ ಗೋಲು ಗಳಿಸಿದರು. 90+5 ನಿಮಿಷದಲ್ಲಿ ಇಬ್ರಾಹಿಂ ಎಂಬಾಯೆ ಬಾರಿಸಿದ ಗೋಲು, ಸೆನೆಗಲ್‌ನ ಸೋಲಿನ ಅಂತರವನ್ನು ತಗ್ಗಿಸಿತು.
14ನೇ ಗೋಲು
ವಿಶ್ವಕಪ್‌ನಲ್ಲಿ ಎಂಬಾಪೆ 14ನೇ ಗೋಲು ದಾಖಲಿಸಿದರು. ಇದರೊಂದಿಗೆ 12 ಗೋಲು ಬಾರಿಸಿರುವ ಬ್ರೆಜಿಲ್‌ನ ದಂತಕಥೆ ಪೀಲೆಯನ್ನು ಹಿಂದಿಕ್ಕಿದರು.
ಬೋಸ್ಟನ್: ಇರಾಕ್ ವಿರುದ್ಧ ನಾರ್ವೆ 4-1 ಗೋಲುಗಳಲ್ಲಿ ಜಯ ಸಾಧಿಸಿತು. ಎರ್ಲಿಂಗ್ ಹಾಲ್ಯಾಂಡ್ 29ನೇ ನಿಮಿಷದಲ್ಲಿ ಗೋಲು ಬಾರಿಸಿ, ಖಾತೆ ತೆರೆದರು. ಆಯ್ಮೆನ್ ಹುಸೇನ್ 39ನೇ ನಿಮಿಷದಲ್ಲಿ ಗೋಲು ಗಳಿಸಿ ಇರಾಕ್ ಸಮಬಲ ಸಾಧಿಸಲು ನೆರವಾದರು. ಆದರೆ ವಿಶ್ವಕಪ್‌ನಲ್ಲಿ ಚೊಚ್ಚಲ ಪಂದ್ಯವಾಡಿದ ನಾರ್ವೆ ಸ್ಟ್ರೈಕರ್ ಹಾಲ್ಯಾಂಡ್ 43ನೇ ನಿಮಿಷದಲ್ಲಿ ತಂಡಕ್ಕೆ ಮತ್ತೆ ಮುನ್ನಡೆ ಒದಗಿಸಿದರು. 76ನೇ ನಿಮಿಷದಲ್ಲಿ ಲಿಯೊ ಒಸ್ಟಿಗಾರ್ಡ್ ಗಳಿಸಿದ ಗೋಲು ಮುನ್ನಡೆ ಹೆಚ್ಚಿಸಿತು. 90+6ನೇ ನಿಮಿಷದಲ್ಲಿ ಆಯ್ಮೆನ್ ಸ್ವಂತ ಗೋಲು ಗಳಿಸಿ, ನಾರ್ವೆಗೆ 4-1ರ ಜಯ ಬಿಟ್ಟುಕೊಟ್ಟಿತು.
ಇದೇ ವೇಳೆ ಜೋರ್ಡನ್ ವಿರುದ್ಧ ಆಸ್ಟ್ರಿಯಾ 3-1ರಲ್ಲಿ ಜಯಿಸಿತು. ಆಸ್ಟ್ರಿಯಾಗೆ ವಿಶ್ವಕಪ್‌ನಲ್ಲಿ 36 ವರ್ಷಗಳಲ್ಲಿ ಇದು ಮೊದಲ ಜಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.