FIFA World Cup 2026: ಒಂದೇ ದಿನ ಬರೋಬ್ಬರಿ 4 ಪಂದ್ಯಗಳು ಡ್ರಾ: 68 ವರ್ಷಗಳಲ್ಲಿ ಇದೇ ಮೊದಲು

Kannadaprabha News   | Kannada Prabha
Published : Jun 17, 2026, 08:18 AM IST
belgium egypt

ಸಾರಾಂಶ

ಪಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ 68 ವರ್ಷಗಳ ಬಳಿಕ ಒಂದೇ ದಿನ ನಾಲ್ಕು ಪಂದ್ಯಗಳು ಡ್ರಾಗೊಂಡಿವೆ. ಮಾಜಿ ಚಾಂಪಿಯನ್ ಸ್ಪೇನ್‌ ವಿರುದ್ಧ ಕೇಪ್‌ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿದರೆ, ಬೆಲ್ಜಿಯಂ ಮತ್ತು ಈಜಿಫ್ಟ್‌ ನಡುವಿನ ಪಂದ್ಯವೂ 1-1 ಗೋಲುಗಳಿಂದ ಸಮಬಲಗೊಂಡಿತು. ಈ ಮೂಲಕ 1958ರ ಬಳಿಕ ಈ ಅಪರೂಪದ ದಾಖಲೆ ಮರುಕಳಿಸಿದೆ.

ಅಟ್ಲಾಂಟ(ಅಮೆರಿಕ): ಪಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಬರೋಬ್ಬರಿ 68 ವರ್ಷಗಳ ಬಳಿಕ ಒಂದೇ ದಿನ 4 ಪಂದ್ಯಗಳು ಡ್ರಾಗೊಂಡಿದೆ. ಈ ಹಿಂದೆ 1958ರಲ್ಲಿ ಒಂದೇ ದಿನ ನಡೆದ 4 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಈಗ ಮತ್ತೆ ಅದು ಮರುಕಳಿಸಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ವರೆಗಿನ 4 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬೀಳಲಿಲ್ಲ.

ಸೋಮವಾರ ರಾತ್ರಿ ಮಾಜಿ ಚಾಂಪಿಯನ್‌ ಸ್ಪೇನ್‌ ವಿರುದ್ಧ ವಿಶ್ವ ರ್‍ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್‌ ವರ್ಡೆ ಐತಿಹಾಸಿಕ ಗೋಲುರಹಿತ ಡ್ರಾ ಸಾಧಿಸಿತು. ಬಳಿಕ ಬೆಲ್ಜಿಯಂ-ಈಜಿಫ್ಟ್‌, ಸೌದಿ ಅರೇಬಿಯಾ-ಉರುಗ್ವೆ, ಇರಾನ್‌-ನ್ಯೂಜಿಲೆಂಡ್‌ ನಡುವಿನ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿತು.

ವೊಜಿನ್ಹಾ ಮ್ಯಾಜಿಕ್‌:

ಬಲಿಷ್ಠ ಸ್ಪೇನ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೇಪ್‌ ವರ್ಡೆ ಗೋಲ್‌ಕೀಪರ್‌, 40 ವರ್ಷದ ವೊಜಿನ್ಹಾ ಅವರು 7 ಬಾರಿ ಗೋಲು ಅವಕಾಶವನ್ನು ತಡೆದರು. ಇದು 1966ರ ಬಳಿಕ ಫಿಫಾ ವಿಶ್ವಕಪ್‌ನಲ್ಲಿ 40ಕ್ಕಿಂತ ಹೆಚ್ಚು ವಯಸ್ಸಿನ ಗೋಲ್‌ಕೀಪರ್‌ನ ಶ್ರೇಷ್ಠ ಸಾಧನೆ ಎನಿಸಿಕೊಂಡಿತು.

4 ಪಂದ್ಯದಲ್ಲಿ ಗೆಲುವಿಲ್ಲ:

ಫಿಫಾ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಸ್ಪೇನ್‌ ವಿಶ್ವಕಪ್‌ನಲ್ಲಿ ಸತತ 4 ಪಂದ್ಯಗಳಲ್ಲೂ ಗೆಲುವು ಕಾಣದಾಗಿದೆ. 2022ರ ವಿಶ್ವಕಪ್‌ನಲ್ಲಿ ಗುಂಪು ಹಂತದ ಮೊದಲ ಪಂದ್ಯ ಗೆದ್ದಿದ್ದ ತಂಡ ಬಳಿಕ 3 ಪಂದ್ಯಗಳ ಪೈಕಿ 1 ಡ್ರಾ, 2ರಲ್ಲಿ ಸೋತಿತ್ತು.

ಈಜಿಪ್ಟ್‌ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟ ನಂ.10 ಬೆಲ್ಜಿಯಂ

ಅಮೆರಿಕದ ಸಿಯಾಟಲ್‌ ಕ್ರೀಡಾಂಗಣದಲ್ಲಿ ಈಜಿಪ್ಟ್‌ ವಿರುದ್ಧ ಪಂದ್ಯದಲ್ಲಿ ವಿಶ್ವ ನಂ.10 ಬೆಲ್ಜಿಯಂ ತಂಡ 1-1 ಗೋಲಿನಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಎಮಾಮ್‌ ಅಶೌರ್‌ 20ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಈಜಿಪ್ಟ್‌ ಮುನ್ನಡೆ ಪಡೆಯಿತು. ಬಳಿಕ 66ನೇ ನಿಮಿಷದಲ್ಲಿ ರೊಮೇಲು ಲುಕಾಕು ಮೈದಾನಕ್ಕೆ ಆಗಮಿಸಿ, ಕೇವಲ 23 ಸೆಕೆಂಡ್‌ಗಳಲ್ಲೇ ಪಂದ್ಯದ ಚಿತ್ರಣ ಬದಲಿಸಿದರು. ಗೋಲು ಪೆಟ್ಟಿಗೆಯ ಎಡಭಾಗದಿಂದ ಬಂದ ಚೆಂಡನ್ನು ಅವರು ಅಡ್ಡಗಟ್ಟಿ ಗೋಲಾಗಿ ಪರಿವರ್ತಿಸಿದರು. ಆದರೆ ಚೆಂಡು ಗೋಲು ಪೆಟ್ಟಿಗೆ ಸೇರುವ ಮೊದಲು ಈಜಿಪ್ಟ್‌ ಆಟಗಾರ ಮೊಹಮ್ಮದ್‌ ಹ್ಯಾನಿ ಕಾಲಿಗೆ ಸ್ಪರ್ಶಿಸಿದ್ದರಿಂದ ಅದನ್ನು ‘ಓನ್‌ ಗೋಲ್‌’ ಎಂದು ಪರಿಗಣಿಸಲಾಗುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Fans Gallery: ಯುದ್ಧದ ನಡುವೆಯೂ ಮೈದಾನದಲ್ಲಿ ಇರಾನ್ ಯುವತಿಯರ ಜೈಕಾರ: ಗ್ಯಾಲರಿಯಲ್ಲಿ ಅರಳಿದ ಅಭಿಮಾನದ ಸೌಂದರ್ಯ
FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ: ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?