
ಅಟ್ಲಾಂಟಾ: ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್‌ನ ರೋಚಕ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದ ಬಳಿಕ, ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಮಿಸ್ ಮಾಡಿದ್ದು ನನಗೆ ತೀವ್ರ ನಿರಾಸೆ ತಂದಿತ್ತು. ಒಂದು ನಿರ್ಣಾಯಕ ಹಂತದಲ್ಲಿ ನಾನು ತಂಡಕ್ಕೆ ಮೋಸ ಮಾಡಿದೆ ಅಂತ ಅನಿಸಿತ್ತು. ಆದರೆ, ಆಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ದೇವರು ನನಗಾಗಿ ಒಂದು ವಿಶೇಷ ಕ್ಷಣವನ್ನು ಮೀಸಲಿಟ್ಟಿದ್ದ ಅಂತ ಮೆಸ್ಸಿ ಪಂದ್ಯದ ನಂತರ ಹೇಳಿದ್ದಾರೆ.
ಪಂದ್ಯದ 79ನೇ ನಿಮಿಷದವರೆಗೂ 2-0 ಅಂತರದಲ್ಲಿ ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ, ಕೇವಲ 13 ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳನ್ನು ಬಾರಿಸಿ ಇಡೀ ಜಗತ್ತನ್ನೇ ಬೆರಗುಗೊಳಿಸುವಂತಹ ನಾಟಕೀಯ ಕಮ್‌ಬ್ಯಾಕ್ ಮಾಡಿತು. "ನಿಜ ಹೇಳಬೇಕೆಂದರೆ, ಇದು ನಮಗೆಲ್ಲರಿಗೂ ಸಿಕ್ಕ ದೊಡ್ಡ ಸಮಾಧಾನ. ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದಕ್ಕೆ ನನ್ನ ಮೇಲೆಯೇ ಸಿಕ್ಕಾಪಟ್ಟೆ ಕೋಪ ಬಂದಿತ್ತು. ಅಂತಹ ಒಂದು ಪ್ರಮುಖ ಕ್ಷಣದಲ್ಲಿ ನಾನು ನನ್ನ ಸಹ ಆಟಗಾರರಿಗೆ ದ್ರೋಹ ಬಗೆದೆ ಅಂತ ಅನಿಸಿತು. ನನ್ನಿಂದ ತಂಡ ಸೋಲುತ್ತೆ ಅಂತ ಭಯವಾಗಿತ್ತು. ಆದರೆ ಅದೃಷ್ಟವಶಾತ್, ದೇವರು ನನಗಾಗಿ ಪಂದ್ಯದ ಕೊನೆಯಲ್ಲಿ ಒಂದು ವಿಶೇಷ ಉಡುಗೊರೆಯನ್ನು ಕಾದಿಟ್ಟಿದ್ದ. ನನಗೆ ಸಮಬಲದ ಗೋಲು ಗಳಿಸಲು ಸಾಧ್ಯವಾಯಿತು. ಅದು ಕೊಟ್ಟ ಖುಷಿ ಪದಗಳಲ್ಲಿ ಹೇಳಲಾಗದು. ಈ ತಂಡ ಯಾವಾಗಲೂ ಹೋರಾಡುತ್ತದೆ, ಅವರು ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ" ಅಂತ ಮೆಸ್ಸಿ ಹೇಳಿದ್ದಾರೆ.
ಅಟ್ಲಾಂಟಾದಲ್ಲಿ ನಡೆದ ಈ ಪಂದ್ಯದ 15ನೇ ನಿಮಿಷದಲ್ಲೇ ಯಾಸರ್ ಇಬ್ರಾಹಿಂ ಗೋಲು ಬಾರಿಸಿ ಈಜಿಪ್ಟ್ ತಂಡ ಅರ್ಜೆಂಟೀನಾಗೆ ಶಾಕ್ ನೀಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ, ನಿಕೋಲಾಸ್ ಟ್ಯಾಗ್ಲಿಯಾಫಿಕೋ ಅವರನ್ನು ಬಾಕ್ಸ್‌ನಲ್ಲಿ ಫೌಲ್ ಮಾಡಿದ್ದಕ್ಕೆ ಅರ್ಜೆಂಟೀನಾಗೆ ಪೆನಾಲ್ಟಿ ಸಿಕ್ಕಿತು. ಆದರೆ, ಕಿಕ್ ತೆಗೆದುಕೊಂಡ ಮೆಸ್ಸಿ ಎಡವಿದರು. ಈಜಿಪ್ಟ್ ಗೋಲ್‌ಕೀಪರ್ ಮೊಸ್ತಫಾ ಶೊಬೀರ್, ಮೆಸ್ಸಿಯ ಶಾಟ್ ಅನ್ನು ತಡೆದರು. ಇದರೊಂದಿಗೆ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪೆನಾಲ್ಟಿಗಳನ್ನು (ಶೂಟೌಟ್ ಹೊರತುಪಡಿಸಿ) ಮಿಸ್ ಮಾಡಿದ ಆಟಗಾರ (4) ಎಂಬ ಕೆಟ್ಟ ದಾಖಲೆ ಮೆಸ್ಸಿ ಹೆಸರಿಗೆ ಸೇರಿತು. ನಂತರ 67ನೇ ನಿಮಿಷದಲ್ಲಿ ಮುಸ್ತಫಾ ಸಿಕೋ ಮೂಲಕ ಈಜಿಪ್ಟ್ ಎರಡನೇ ಗೋಲು ಗಳಿಸಿದಾಗ, ವಿಶ್ವ ಚಾಂಪಿಯನ್ನರು ಟೂರ್ನಿಯಿಂದ ಹೊರಬೀಳುವ ಸ್ಥಿತಿಯಲ್ಲಿದ್ದರು.
ಆದರೆ, ಆಟ ಕೈತಪ್ಪಿ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದ ಜಾಗದಿಂದಲೇ ಮೆಸ್ಸಿ ಮತ್ತು ತಂಡ ತಮ್ಮ ನಿಜವಾದ ವಿಶ್ವರೂಪವನ್ನು ತೋರಿಸಿದರು. 79ನೇ ನಿಮಿಷದಲ್ಲಿ ಮೆಸ್ಸಿ ತೆಗೆದುಕೊಂಡ ಅಳೆದು-ತೂಗಿದ ಫ್ರೀ-ಕಿಕ್‌ನಿಂದ ಡಿಫೆಂಡರ್ ಕ್ರಿಶ್ಚಿಯನ್ ರೊಮೆರೋ ಅರ್ಜೆಂಟೀನಾದ ಮೊದಲ ಗೋಲು ಗಳಿಸಿದರು (2-1). ಮೊದಲಾರ್ಧದ ತಪ್ಪನ್ನು ಸರಿಪಡಿಸಿಕೊಂಡ ಮೆಸ್ಸಿ, 83ನೇ ನಿಮಿಷದಲ್ಲಿ ಬಾಕ್ಸ್‌ನೊಳಗಿನಿಂದ ಗೋಲು ಬಾರಿಸಿ ಅರ್ಜೆಂಟೀನಾಗೆ ಸಮಬಲ ತಂದುಕೊಟ್ಟರು (2-2). ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗಬಹುದು ಎಂದು ನಿರೀಕ್ಷಿಸುತ್ತಿದ್ದಾಗ, ಎಂಜೊ ಫೆರ್ನಾಂಡೆಜ್ ಗಳಿಸಿದ ಗೋಲಿನಿಂದ ಅರ್ಜೆಂಟೀನಾ 3-2 ಅಂತರದ ಅವಿಸ್ಮರಣೀಯ ಹಾಗೂ ವಿರೋಚಿತ ಗೆಲುವು ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಸ್ವಿಟ್ಜರ್‌ಲೆಂಡ್ ಅನ್ನು ಎದುರಿಸಲಿದೆ. ಅರ್ಜೆಂಟೀನಾ ಹಾಗೂ ಸ್ವಿಟ್ಜರ್‌ಲೆಂಡ್ ನಡುವಿನ ಪಂದ್ಯವು ಇದೇ ಜುಲೈ 12ರ ಭಾನುವಾರ ನಿಗದಿಯಾಗಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 6.30ರಿಂದ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.