
ತಮ್ಮ ಕಾಲ್ಚಳಕದ ಮೂಲಕವೇ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಈ ಕಾಲಘಟ್ಟದ ಶ್ರೇಷ್ಠ ಫುಟ್ಬಾಲಿಗ ರೊನಾಲ್ಡೊ, ವಿಶ್ವ ಕಿರೀಟ ಮುಡಿಗೇರಿಸಲಾಗದೆ ಕಣ್ಣೀರಿಟ್ಟಿದ್ದಾರೆ. 23 ವರ್ಷಗಳಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಆಡುತ್ತಿರುವ ರೊನಾಲ್ಡೊ, 6 ಬಾರಿ ವಿಶ್ವಕಪ್ ಆಡಿದ್ದಾರೆ. ಆದರೆ ಒಮ್ಮೆಯೂ ಅವರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
‘ಇದು ತಮ್ಮ ಕೊನೆ ವಿಶ್ವಕಪ್’ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ರೊನಾಲ್ಡೊ, ಸೋಮವಾರ ಸ್ಪೇನ್ ವಿರುದ್ಧ ಪಂದ್ಯದ ಬಳಿಕ ಗಳಗಳನೆ ಅತ್ತಿದ್ದಾರೆ. ಇದರ ಜೊತೆಗೆ ಅವರ ಅಭಿಮಾನಿಗಳೂ ತಮ್ಮ ನೆಚ್ಚಿನ ಫುಟ್ಬಾಲಿಗನ ಕಂಡು ಮರುಗಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ರೊನಾಲ್ಡೊ, ‘ಈ ರೀತಿ ವಿಶ್ವಕಪ್‌ನಿಂದ ನಿರ್ಗಮಿಸುತ್ತಿರುವುದಕ್ಕೆ ಬೇಸರವಿದೆ. ನಾನು ತಂಡಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ. ಪೋರ್ಚುಗಲ್ ತಂಡದಲ್ಲಿ 3 ಟ್ರೋಫಿ ಗೆದ್ದಿದ್ದೇನೆ. 2016ರ ಯುರೋ ಕಪ್ ವಿಶ್ವಕಪ್‌ಗೆ ಸಮಾನ’ ಎಂದಿದ್ದಾರೆ.
ಅವರು ವಿಶ್ವಕಪ್‌ನಲ್ಲಿ 27 ಪಂದ್ಯಗಳನ್ನಾಡಿದ್ದು, 11 ಗೋಲು ಬಾರಿಸಿದ್ದಾರೆ. 6 ವಿಶ್ವಕಪ್ ಆವೃತ್ತಿಗಳಲ್ಲೂ ಗೋಲು ಹೊಡೆದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
Bahkan yang terbaik pun tidak bisa menulis ulang takdir.
Cristiano Ronaldo akhirnya harus menerima kenyataan pahit bahwa dirinya memang tidak pernah ditakdirkan untuk memenangkan Piala Dunia. Meski telah menjaga fisik di level tertinggi hingga usia 41 tahun demi memimpin… pic.twitter.com/PGhIcbxT7z— PanditFootball.com (@panditfootball) July 6, 2026
ಸೋಮವಾರ ಮಧ್ಯರಾತ್ರಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಮಾಜಿ ಚಾಂಪಿಯನ್ ಸ್ಪೇನ್ 1-0 ಗೋಲಿನಿಂದ ಜಯಭೇರಿ ಬಾರಿಸಿತು. ಈ ಮೂಲಕ 2010ರ ಬಳಿಕ ಸ್ಪೇನ್ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ಗೆ ಬೆಲ್ಜಿಯಂ ಸವಾಲು ಎದುರಾಗಲಿದೆ.
ಸಿಯಾಟಲ್(ಅಮೆರಿಕ): ಆತಿಥೇಯ ಅಮೆರಿಕ ತಂಡ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. ತಂಡ ಬೆಲ್ಜಿಯಂ ವಿರುದ್ಧ ಪಂದ್ಯದಲ್ಲಿ 1-4 ಗೋಲುಗಳಿಂದ ಹೀನಾಯವಾಗಿ ಸೋಲನುಭವಿಸಿತು. 25 ವರ್ಷದ ಚಾರ್ಲ್ಸ್ ಡೆ ಕೆಟೆಲೇರೆ 2 ಗೋಲು ಹಾಗೂ 1 ಅಸಿಸ್ಟ್ ಮೂಲಕ ಬೆಲ್ಜಿಯಂ ತಂಡವನ್ನು ಅಂತಿಮ 8ರ ಘಟ್ಟಕ್ಕೆ ತಲುಪಿಸಿದರೆ, ಅಮೆರಿಕವನ್ನು ಅದರದೇ ತವರಿನಲ್ಲಿ ಸೋಲುವಂತೆ ಮಾಡಿತು.
9ನೇ ನಿಮಿಷದಲ್ಲಿ ಕೆಟೆಲೇರೆ ಗೋಲು ಬಾರಿಸಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. 31ನೇ ನಿಮಿಷದಲ್ಲಿ ಮಲಿಕ್ ಟಿಲ್‌ಮ್ಯಾನ್ ಹೊಡೆದ ಗೋಲಿನಿಂದಾಗಿ ಅಮೆರಿಕ ಸಮಬಲ ಸಾಧಿಸಿತು. ಆದರೆ ಇದಾಗಿ 2ನೇ ನಿಮಿಷದಲ್ಲೇ ಕೆಟೆಲೇರೆ ಮತ್ತೊಂದು ಗೋಲು ದಾಖಲಿಸಿ ಬೆಲ್ಜಿಯಂ ಮೇಲುಗೈ ಸಾಧಿಸಲು ನೆರವಾದರು.
ದ್ವಿತಿಯಾರ್ಧದಲ್ಲಿ ಹ್ಯಾನ್ಸ್ ವ್ಯಾನಾಕೆನ್(57ನೇ ನಿಮಿಷ) ಗೋಲು ಗಳಿಸಿ ಬೆಲ್ಜಿಯಂ ಮುನ್ನಡೆ ಹೆಚ್ಚಿಸಿದರು. ಇಂಜುರಿ ಸಮಯದಲ್ಲಿ ರೊಮೇಲು ಲುಕಾಕು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಇದರೊಂದಿಗೆ ತಂಡ 4ನೇ ಬಾರಿ ಕ್ವಾರ್ಟರ್ ಫೈನಲ್‌ಗೇರಿದ್ದು, ಸ್ಪೇನ್ ವಿರುದ್ಧ ಸೆಣಸಾಡಲಿದೆ.
ಈ ಬಾರಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ಮೂರೂ ದೇಶಗಳು ಪ್ರಿ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದಿವೆ. ಕೆನಡಾ ತಂಡ ಮೊರಾಕ್ಕೊ ವಿರುದ್ಧ ಸೋತರೆ, ಮೆಕ್ಸಿಕೊಗೆ ಇಂಗ್ಲೆಂಡ್ ವಿರುದ್ಧ ಸೋಲು ಎದುರಾಗಿತ್ತು. ಅಮೆರಿಕ ತಂಡ ಬೆಲ್ಜಿಯಂ ವಿರುದ್ಧ ಸೋಲುವುದರೊಂದಿಗೆ ಆತಿಥೇಯ ದೇಶಗಳ ಅಭಿಯಾನ ಕೊನೆಗೊಂಡಿದೆ.
ಅಮೆರಿಕ ತಂಡ ತಾನಾಡಿದ ಕೊನೆ 4 ವಿಶ್ವಕಪ್‌ನಲ್ಲೂ ಅಂತಿಮ 16ರ ಸುತ್ತಿನಲ್ಲಿ ಹೊರಬಿದ್ದಿದೆ. 1930ರಲ್ಲಿ 3ನೇ ಸ್ಥಾನಿಯಾಗಿದ್ದ ತಂಡ, 2002ರಲ್ಲಿ ಕ್ವಾರ್ಟರ್ ಫೈನಲ್‌ಗೇರಿತ್ತು. 2010, 2014, 2022 ಹಾಗೂ 2026ರ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. 2018ರಲ್ಲಿ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.