
ಕಲ್ಲಿಕೋಟೆ(ಜೂ.08): ಬೆಂಗಳೂರು ಎಫ್‌ಸಿ ವಿರುದ್ಧದ ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಮೈದಾನ ತೊರೆದಿದ್ದಕ್ಕೆ ಬರೋಬ್ಬರಿ 4 ಕೋಟಿ ರುಪಾಯಿ ದಂಡಕ್ಕೆ ಗುರಿಯಾಗಿರುವ ಕೇರಳ ಬ್ಲಾಸ್ಟರ್ಸ್ ಕ್ಲಬ್, ಆರ್ಥಿಕ ಸಮಸ್ಯೆ ಸರಿದೂಗಿಸಲು ತನ್ನ ಮಹಿಳಾ ತಂಡದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸುನಿಲ್ ಚೆಟ್ರಿಯ ವಿವಾದಿತ ಗೋಲು ಪ್ರಶ್ನಿಸಿ ಪ್ಲೇ-ಆಫ್ ಪಂದ್ಯದಲ್ಲಿ ಮೈದಾನದಿಂದ ಹೊರನಡೆದಿದ್ದಕ್ಕೆ ಬ್ಲಾಸ್ಟರ್ಸ್ಗೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಭಾರೀ ದಂಡ ವಿಧಿಸಿತ್ತು. ಈ ಬಗ್ಗೆ ಕ್ಲಬ್ ಮೇಲ್ಮನವಿ ಸಲ್ಲಿಸಿದ್ದರೂ ಎಐಎಫ್ಎಫ್ ಅದನ್ನು ತಿರಸ್ಕರಿಸಿತ್ತು. ಹೀಗಾಗಿ ತಂಡ 4 ಕೋಟಿ ರು. ದಂಡ ಪಾವತಿಸಬೇಕಾಗಿದ್ದು, ಅನಿವಾರ್ಯವಾಗಿ ಮಹಿಳಾ ತಂಡವನ್ನು ಕೆಲ ಕಾಲ ಸ್ಥಗಿತಗೊಳಿಸಿದೆ. ಪುರುಷರ ತಂಡದ ತಪ್ಪಿಗೆ ಮಹಿಳಾ ತಂಡ ಬೆಲೆ ತೆರಬೇಕಾಗಿ ಬಂದಿದ್ದಕ್ಕೆ ಕ್ರೀಡಾಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಿರಿಯರ ಅಥ್ಲೆಟಿಕ್ಸ್: ಕೊನೆ ದಿನ ಭಾರತಕ್ಕೆ 5 ಪದಕ!
ಯೆಚಿಯೊನ್: ಅಂಡರ್-20 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ಬುಧವಾರ ಭಾರತ 2 ಚಿನ್ನ ಸೇರಿ 5 ಪದಕ ಜಯಿಸಿತು. ಕೂಟದಲ್ಲಿ 6 ಚಿನ್ನ, 7 ಬೆಳ್ಳಿ, 6 ಕಂಚಿನೊಂದಿಗೆ ಒಟ್ಟು 19 ಪದಕ ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. ಇದು ಕೂಟದ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಪ್ರದರ್ಶನ ಎನಿಸಿದೆ.
French Open 2023: ಆಲ್ಕರಜ್, ಇಗಾ ಸ್ವಿಯಾಟೆಕ್ ಸೆಮೀಸ್‌ಗೆ ಲಗ್ಗೆ
ಬುಧವಾರ ಮಹಿಳೆಯರ 1500 ಮೀ. ಓಟದಲ್ಲಿ ಲಕ್ಷಿತಾ, ಮಹಿಳೆಯರ 4*400 ಮೀ. ರಿಲೇ ತಂಡ ಚಿನ್ನ ಜಯಿಸಿತು. ಪುರುಷರ 5000 ಮೀ. ಓಟದಲ್ಲಿ ಕರ್ನಾಟಕದ ಶಿವಾಜಿ ಮಾದಪ್ಪಗೌಡ್ರ ಬೆಳ್ಳಿ ಗೆದ್ದರೆ, ಪುರುಷರ 4*400 ಮೀ. ರಿಲೇ ತಂಡ ಸಹ ರಜತ ಪದಕ ಜಯಿಸಿತು. ಪುರುಷರ 1500 ಮೀ. ಓಟದಲ್ಲಿ ಮೆಹಿದಿ ಹಸನ್ ಕಂಚಿಗೆ ಮುತ್ತಿಟ್ಟರು. ಮಹಿಳೆಯರ 200 ಮೀ. ಓಟದ ಫೈನಲ್‌ನಲ್ಲಿ ರಾಜ್ಯದ ನಯಾನ 4ನೇ, ಉನ್ನತಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಮಹಿಳಾ ಹಾಕಿ: ಭಾರತಕ್ಕೆ ಚೈನೀಸ್ ತೈಪೆ ಸವಾಲು
ಕಾಕಮಿಗಹರಾ(ಜಪಾನ್): 7ನೇ ಬಾರಿ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿರುವ ಭಾರತ ಮಹಿಳಾ ತಂಡ 8ನೇ ಆವೃತ್ತಿಯ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಗುರುವಾರ ಚೈನೀಸ್ ತೈಪೆ ವಿರುದ್ಧ ಸೆಣಸಲಿದೆ. ಭಾರತ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, 7 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಸೆಮೀಸ್ಗೇರಲಿದ್ದು, ಸೋತರೆ ದ.ಕೊರಿಯಾ(7 ಅಂಕ) ಹಾಗೂ ಮಲೇಷ್ಯಾ(6 ಅಂಕ) ನಡುವಿನ ಪಂದ್ಯದ ಫಲಿತಾಂಶದ ಮೇಲೆ ಭಾರತದ ಸೆಮೀಸ್ ಭವಿಷ್ಯ ನಿರ್ಧಾರವಾಗಲಿದೆ. ಚೈನಿಸ್ ತೈಪೆ 3 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದು, ಸೆಮೀಸ್ ರೇಸ್ನಿಂದ ಹೊರಬಿದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.