* ಸತತ ಎರಡನೇ ಬಾರಿಗೆ ಇಟಲಿ ಫುಟ್ಬಾಲ್ ತಂಡದ ಫಿಫಾ ವಿಶ್ವಕಪ್ ಕನಸು ಭಗ್ನ
* 2ನೇ ಬಾರಿ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಇಟಲಿ ವಿಫಲ
* 4 ಬಾರಿ ವಿಶ್ವಕಪ್ ಗೆದ್ದಿರುವ ಇಟಲಿ ತಂಡಕ್ಕೆ ಶಾಕ್ ನೀಡಿದ ನಾರ್ಥ್ ಮಸೆಡೋನಿಯಾ
ರೋಮ್(ಮಾ.26): ಹಾಲಿ ಯುರೋಪಿಯನ್ ಚಾಂಪಿಯನ್ ಇಟಲಿ (Italy Football Team) ಸತತ 2ನೇ ಬಾರಿ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ (FIFA World Cup) ಅರ್ಹತೆ ಪಡೆದುಕೊಳ್ಳಲು ವಿಫಲವಾಗಿದೆ. ಗುರುವಾರ ನಾರ್ಥ್ ಮಸೆಡೋನಿಯಾ ವಿರುದ್ಧದ ಪ್ಲೇ-ಆಫ್ ಸೆಮಿಫೈನಲ್ ಪಂದ್ಯದಲ್ಲಿ ಇಟಲಿ 0-1 ಗೋಲುಗಳಿಂದ ಸೋಲು ಸೋಲನುಭವಿಸಿತು. ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದರೂ ಇಟಲಿಗೆ ಗೆಲುವು ದಕ್ಕಲಿಲ್ಲ.
4 ಬಾರಿ ವಿಶ್ವಕಪ್ ಗೆದ್ದಿರುವ ಇಟಲಿ 2018ರಲ್ಲಿ ಸ್ವೀಡನ್ ವಿರುದ್ಧ ಸೋತು ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿತ್ತು. ಮಸೆಡೋನಿಯಾ ಮಂಗಳವಾರ ಪೋರ್ಚುಗಲ್ ವಿರುದ್ಧ ಸೆಣಸಲಿದ್ದು, ಗೆದ್ದರೆ ವರ್ಷಾಂತ್ಯದಲ್ಲಿ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.
undefined
ಏಪ್ರಿಲ್ 15ರಿಂದ ಭಾರತೀಯ ಮಹಿಳಾ ಫುಟ್ಬಾಲ್ ಲೀಗ್
ಭುವನೇಶ್ವರ: ಭಾರತೀಯ ಮಹಿಳಾ ಲೀಗ್(ಐಡಬ್ಲ್ಯುಎಲ್) ಫುಟ್ಬಾಲ್ 2 ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲಿದೆ. 5ನೇ ಆವೃತ್ತಿಯು ಏ.15ರಿಂದ ಮೇ 25ರ ವರೆಗೂ ಭುವನೇಶ್ವರದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.
Indian Super League: ಕೇರಳ ಬ್ಲಾಸ್ಟರ್ಸ್ ಮಣಿಸಿ ಹೈದರಾಬಾದ್ ಚಾಂಪಿಯನ್
ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡವು ಮುಂದಿನ ಆವೃತ್ತಿ ಎಎಫ್‌ಸಿ ಏಷ್ಯನ್ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಅವಕಾಶ ಪಡೆಯಲಿದೆ. 11 ಪಂದ್ಯಗಳ ಬಳಿಕ ಅತಿಹೆಚ್ಚು ಅಂಕಗಳನ್ನು ಗಳಿಸುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಟೂರ್ನಿಯಲ್ಲಿ ಕರ್ನಾಟಕದ ಕಿಕ್‌ಸ್ಟಾರ್ಚ್ ಎಫ್‌ಸಿ ತಂಡ ಕಣಕ್ಕಿಳಿಯಲಿದೆ.
ಭಾರತೀಯ ಬ್ಯಾಡ್ಮಿಂಟನ್‌ಗೆ ಅಸ್ಸಾಂ ಸಿಎಂ ಬಿಸ್ವಾ ಅಧ್ಯಕ್ಷ
ಗುವಾಹಟಿ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಅಧ್ಯಕ್ಷರಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮರು ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಬಿಎಐ ವಾರ್ಷಿಕ ಸಭೆಯಲ್ಲಿ ಬಿಸ್ವಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, 2026ರ ವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
2017ರಲ್ಲಿ ಮೊದಲ ಬಾರಿ ಬಿಎಐ ಅಧ್ಯಕ್ಷರಾಗಿದ್ದ ಬಿಸ್ವಾ, ಸದ್ಯ ಬ್ಯಾಡ್ಮಿಂಟನ್ ಏಷ್ಯಾ ಉಪಾಧ್ಯಕ್ಷ ಹಾಗೂ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಕಾರ‍್ಯಕಾರಿ ಮಂಡಳಿಯ ಸದಸ್ಯರಾಗಿಯೂ ಕಾರ‍್ಯನಿರ್ವಹಿಸುತ್ತಿದ್ದಾರೆ. ಮಾಜಿ ಕಿರಿಯರ ರಾಷ್ಟ್ರೀಯ ಕೋಚ್ ಸಂಜಯ್ ಮಿಶ್ರಾ ಬಿಎಐ ಕಾರ‍್ಯದರ್ಶಿಯಾಗಿ, ರಾಷ್ಟ್ರೀಯ ಪ್ರಧಾನ ಕೋಚ್ ಪುಲ್ಲೇಲಾ ಗೋಪಿಚಂದ್ ಸೇರಿದಂತೆ 9 ಮಂದಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಸ್ವಿಸ್ ಓಪನ್: ಪಿ.ವಿ.ಸಿಂಧು, ಪ್ರಣಯ್ ಸೆಮೀಸ್‌ಗೆ ಲಗ್ಗೆ
ಬಾಸೆಲ್: 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು (PV Sindhu) ಹಾಗೂ ಎಚ್.ಎಸ್.ಪ್ರಣಯ್ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (Swiss Open Badminton) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಕೆನಡಾದ ಮಿಷೆಲ್ ಲೀ ವಿರುದ್ಧ 21-10, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ಅವರಿಗೆ ಥಾಯ್ಲೆಂಡ್‌ನ ಸುಪನಿದಾ ಕಟೆಥಾಂಗ್ ಸವಾಲು ಎದುರಾಗಲಿದೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಭಾರತದವರೇ ಆದ ಪಾರುಪಳ್ಳಿ ಕಶ್ಯಪ್ ವಿರುದ್ಧ 21-16, 21-16 ಗೇಮ್‌ಗಳಲ್ಲಿ ಗೆದ್ದು ಅಂತಿಮ 4ರ ಘಟ್ಟಪ್ರವೇಶಿಸಿದರು.
ಇಂದಿನಿಂದ ಬೆಂಗ್ಳೂರಿನಲ್ಲಿ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್
ಬೆಂಗಳೂರು: 16ನೇ ಏರೋಬಿಕ್ ಜಿಮ್ನಾಸ್ಟಿಕ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಬೆಂಗಳೂರು ಅತಿಥ್ಯ ವಹಿಸಲಿದ್ದು, ಕೂಟವು ಮಾ.26 ಮತ್ತು 27ಕ್ಕೆ ನಡೆಯಲಿದೆ. ಹೂಡಿ ಸೀತಾರಾಮಪಾಳ್ಯದ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಕೂಟವನ್ನು ಆಯೋಜಿಸಲಾಗಿದ್ದು, 18 ರಾಜ್ಯಗಳ ಸುಮಾರು 600 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಫುಟ್ಬಾಲ್ ಆಟಗಾರ ಇಶಾನ್ ಪಂಡಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಜಿಮ್ನಾಸ್ಟ್ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.