
ಮಲಪ್ಪುರಂ(ಮಾ.20): ಸ್ಥಳೀಯ ಫುಟ್ಬಾಲ್ ಪಂದ್ಯವೊಂದು (Football Match) ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿದ್ದ ಪರಿಣಾಮ ಕನಿಷ್ಠ 200 ಮಂದಿ ಗಾಯಗೊಂಡಿದ್ದು, ಐವರ ಪರಿಸ್ಥಿತಿ ಗಂಭೀರ ಎನಿಸಿದೆ. ಈ ಘಟನೆಯು ಶನಿವಾರ(ಮಾ.19) ರಾತ್ರಿ ಕೇರಳದ ಮಲಪ್ಪುರಂ (Malappuram) ಜಿಲ್ಲೆಯ ಪೋಂಗೊಡ್ ಎಂಬಲ್ಲಿ ನಡೆದಿದೆ. ಎಲ್ಲಾ ಗಾಯಾಳು ವ್ಯಕ್ತಿಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಪೈಕಿ 5 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ANI ಕೂಡಾ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಫುಟ್ಬಾಲ್ ಪ್ರೇಕ್ಷಕರ ಗ್ಯಾಲರಿಯು ಏಕಾಏಕಿ ಕುಸಿದು ಬೀಳುತ್ತಿರುವ ಕ್ಷಣ ಕ್ಯಾಮರ ಕಣ್ಣಿನಲ್ಲಿ ಸೆರೆಯಾಗಿದೆ. ಈ ಘಟನೆ ಜರುಗುತ್ತಿದ್ದಂತೆ ಮೈದಾನದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಮಂದಿ ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ.
ಈ ಘಟನೆಯ ಕುರಿತಂತೆ ಟ್ವೀಟ್ ಮಾಡಿರುವ ANI ಸುದ್ದಿಸಂಸ್ಥೆಯು, ಮಲಪ್ಪುರಂನ ಪೋಂಗೊಡ್ ಎಂಬಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪ್ರೇಕ್ಷಕರ ಗ್ಯಾಲರಿಯು ದಿಢೀರ್ ಕುಸಿದುಬಿದ್ದ (Gallery Collapses) ಘಟನೆ ನಿನ್ನೆ ನಡೆದಿದೆ. ಈ ಸಂದರ್ಭದಲ್ಲಿ ಇನ್ನೂರಕ್ಕೂ ಅಧಿಕ ಗಾಯಗೊಂಡಿದ್ದು, ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ಟ್ವೀಟ್ ಮಾಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಲಪ್ಪುರಂ ಜಿಲ್ಲೆಯ ಪೋಂಗೊಡ್ ಎಂಬಲ್ಲಿ ಆಯೋಜನೆಗೊಂಡಿದ್ದ ಫುಟ್ಬಾಲ್ ಫೈನಲ್ ವೇಳೆ ಈ ಅವಘಡ ಸಂಭವಿಸಿದೆ. ಶನಿವಾರ ರಾತ್ರಿ 9 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ವಾಂಡೂರ್ ಹಾಗೂ ಕಲಿಕಾವು ಸಮೀಪದಲ್ಲಿ ಈ ಫುಟ್ಬಾಲ್ ಕ್ರೇಜ್ ಇರುವ ಹಳ್ಳಿಯೊಂದರಲ್ಲಿ ಈ ಅಚಾತುರ್ಯ ನಡೆದಿದೆ. ಈ ಫುಟ್ಬಾಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಕಕ್ಕಿರಿದು ಸೇರಿದ್ದರು ಎನ್ನಲಾಗಿದೆ.
ಸ್ಥಳೀಯ ವರದಿಯ ಪ್ರಕಾರ ಈ ಅವಘಡದಲ್ಲಿ, ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದಂತಹ ಹಲವಾರು ಮಕ್ಕಳು ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದ್ದು, ಅವರೆಲ್ಲರನ್ನು ಹತ್ತಿರದಲ್ಲಿ ಮಲಪ್ಪುರಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮೈದಾನ ಪ್ರವೇಶಿಸಿದ್ದಾರೆ. ಟೂರ್ನಿಯ ಆಯೋಜಕರು ಪ್ರೇಕ್ಷಕರ ಸಂಖ್ಯೆಯನ್ನು ನಿರ್ಬಂಧಿಸದೇ ಹೋಗಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮರದ ಹಲಗೆ ಹಾಗೂ ಹಗ್ಗದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ಗ್ಯಾಲರಿಯು ಭಾರೀ ಪ್ರಮಾಣದ ಪ್ರೇಕ್ಷಕರ ಸಾಮರ್ಥ್ಯವನ್ನು ತಾಳಲಾರದೇ ಕುಸಿದು ಬಿದ್ದಿದೆ.
ISL Final: ಪ್ರಶಸ್ತಿಗಾಗಿಂದು ಕೇರಳ, ಹೈದರಾಬಾದ್ ಫೈನಲ್ ಫೈಟ್
ಗೋವಾ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) 8ನೇ ಆವೃತ್ತಿಯ (Indian Super League) ಫೈನಲ್ ಪಂದ್ಯ ಕೇರಳ ಬ್ಲಾಸ್ಟರ್ಸ್ (Kerala Blasters) ಹಾಗೂ ಹೈದರಾಬಾದ್ ಎಫ್‌ಸಿ (Hyderabad FC) ನಡುವೆ ಭಾನುವಾರ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಎಟಿಕೆ ಮೋಹನ್ ಬಗಾನ್ ವಿರುದ್ಧ ಜಯಗಳಿಸಿದ್ದ ಹೈದರಾಬಾದ್ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿದ್ದರೆ, ಜಮ್ಷೆಡ್‌ಪುರ ಎಫ್‌ಸಿಗೆ ಸೋಲುಣಿಸಿದ ಕೇರಳ 3ನೇ ಬಾರಿ ಫೈನಲ್ ತಲುಪಿದೆ. ಎರಡೂ ತಂಡಗಳು ಚೊಚ್ಚಲ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಕೇರಳ ಈ ಮೊದಲು 2014 ಮತ್ತು 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಎರಡೂ ಬಾರಿ ಎಟಿಕೆ ಮೋಹನ್ ಬಗಾನ್ ತಂಡದ ವಿರುದ್ಧ ಸೋತಿತ್ತು.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.