
ಲಂಡನ್(ಜು.12): ಫುಟ್ಬಾಲ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಯುರೋ ಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಗೆದ್ದು ಇಟಲಿ ಯುರೋ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದ ನಿಗದಿತ ಸಮಯದಲ್ಲಿ ಎರಡು ತಂಡಗಳು ಒಂದೊಂದು ಗೋಲು ಬಾರಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಇಲ್ಲಿನ ವೆಂಬ್ಲಿ ಕ್ರೀಡಾಂಗಣದಲ್ಲಿ 67 ಸಾವಿರ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಇಟಲಿ ಗೋಲು ಕೀಪರ್ ಗಿನ್ಲೂಗಿ ಡೊನ್ನಾರುಮ್ಮಾ ಪೆನಾಲ್ಟಿ ಶೂಟೌಟ್‌ನಲ್ಲಿ 2 ಗೋಲು ತಡೆಯುವ ಮೂಲಕ ಇಟಲಿ ಗೆಲುವಿಗೆ ಕಾರಣರಾದರು. ಬಲಿಷ್ಠ ತಾರಾ ಫುಟ್ಬಾಲ್ ಆಟಗಾರರನ್ನು ಹೊಂದಿದ್ದ ಇಂಗ್ಲೆಂಡ್ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲವಾಯಿತು.
ಪಂದ್ಯದ ಎರಡನೇ ನಿಮಿಷದಲ್ಲೇ ಲೂಕ್ ಶಾ ಗೋಲು ಬಾರಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ ಆ ಬಳಿಕ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ಇಟಲಿ 67 ನಿಮಿಷದಲ್ಲಿ ಬನ್ಸೌಸಿ ಬಾರಿಸಿದ ಗೋಲಿನ ನೆರವಿನಿಂದ ಪಂದ್ಯದಲ್ಲಿ 1-1ರ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್‌ನ ಮಾರ್ಕಸ್ ರಶ್‌ಪೋರ್ಡ್ ಗೋಲು ಬಾರಿಸಿದ ಬಳಿಕ ಇಟಲಿ ಗೋಲು ಕೀಪರ್ ಜೇಡನ್ ಸ್ಯಾಂಚೋ ಹಾಗೂ ಬುಕಾಯೊ ಸಾಕಾ ಅವರ ಗೋಲು ತಡೆಯುವಲ್ಲಿ ಯಶಸ್ವಿಯಾದರು. ಇನ್ನು ಇಟಲಿ ತಂಡದ ಪರ ಫೆಡರಿಕೋ ಬೆರ್ನಾದೇಶಿ, ಲಿಯೊನಾರ್ಡೊ ಬನ್ಸೌಸಿ ಹಾಗೂ ಡೊಮ್ಯಾನಿಕೋ ಬೆರಾಡಿ ಗೋಲು ಬಾರಿಸುವ ಮೂಲಕ ಇಂಗ್ಲೆಂಡ್ ತಂಡವು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಯುರೋ ಕಪ್ ಫೈನಲ್: ಇಟಲಿಯ 1 ಸಾವಿರ ಅಭಿಮಾನಿಗಳಿಗೆ ಅವಕಾಶ
2000 ಹಾಗೂ 2012ರ ಯುರೋ ಕಪ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಇಟಲಿ ತಂಡವು 1968ರ ಬಳಿಕ ಎರಡನೇ ಬಾರಿಗೆ ಯುರೋ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಇದೇ ಮೊದಲ ಬಾರಿಗೆ ಯುರೋ ಕಪ್ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಫುಟ್ಬಾಲ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.