ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ಬೆಂಗಳೂರು ಎಫ್‌ಸಿಗೆ ಈ ಬಾರಿ ಅದೃಷ್ಠ ಕೈಕೊಡುತ್ತಿದೆ. ಮುಂಬೈ ವಿರುದ್ಧ ಮುಗ್ಗರಿಸು ಮೂಲಕ ಸತತ 3ನೇ ಸೋಲು ಕಂಡಿದೆ.
ಗೋವಾ(ಜ.05); ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಬೆಂಗಳೂರು ಎಫ್‌ಸಿ ತಂಡ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 48ನೇ ಲೀಗ್ ಪಂದ್ಯದಲ್ಲಿ ಲೀಗ್ ಲೀಡರ್ ಮುಂಬೈ ಸಿಟಿ ಎಫ್‌ಸಿ ಎದುರು 1-3 ಗೋಲ್‌ಗಳ ಅಂತರದಲ್ಲಿ ಸೋಲನುಭವಿಸಿದೆ.
ಐಎಸ್‌ಎಲ್ 7: ಒಡಿಶಾ ಎದುರು ಬೆಂಗಾಲ್‌ಗೆ ಮೊದಲ ಗೆಲುವು
undefined
ಇಲ್ಲಿನ ಫತೋರ್ಡ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ತಂಡದ ಪರ ಮೊದಲ ಅವಧಿಯಲ್ಲೇ ಡಿಫೆಂಡರ್ ಮೌರ್ಟಡ ಫಾಲ್ (9ನೇ ನಿ.) ಮತ್ತು ಮಿಡ್ ಫೀಲ್ಡರ್ ಬಿಪಿನ್ ಸಿಂಗ್ (15ನೇ ನಿ.) ಗೋಲ್ ದಾಖಲಿಸಿದರೆ, ಎರಡನೇ ಅವಧಿಯಲ್ಲಿ ಬಿಎಫ್‌ಸಿ ತಂಡದ ಗೋಲ್ ಕೀಪರ್ ಗುರುಕೀರತ್ ಸಿಂಗ್ (84ನೇ ನಿ.) ನೀಡಿದ ಉಡುಗೊರೆಯ ಗೋಲ್‌ನ ಬಲದಿಂದ ಭರ್ಜರಿ ಜಯ ದಾಖಲಿಸಿತು.
ಮೊದಲ ಅವಧಿಯಲ್ಲಿ ಮಾಡಿಕೊಂಡ ಎಡವಟ್ಟಿನ ಅರಿವಾಗಿ ಎರಡನೇ ಅವಧಿಯಲ್ಲಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮುಂದಾದ ಬೆಂಗಳೂರು ತಂಡದ ಪರ ನಾಯಕ ಹಾಗೂ ಸ್ಟ್ರೈಕರ್ ಸುನಿಲ್ ಛೆಟ್ರಿ 79ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಪಾಟ್ ಕಿಕ್‌ನಲ್ಲಿ ಯಶಸ್ಸು ತಂದುಕೊಟ್ಟು ಸೋಲಿನ ಅಂತರವನ್ನು ತಗ್ಗಿಸಲಷ್ಟೇ ಶಕ್ತರಾದರು.
ಈ ಜಯದೊಂದಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಆಡಿದ 9 ಪಂದ್ಯಗಳಲ್ಲಿ 7 ಜಯ, ತಲಾ ಒಂದು ಸೋಲು ಮತ್ತು ಡ್ರಾ ಫಲಿತಾಂಶದೊಂದಿಗೆ ಒಟ್ಟು 22 ಅಂಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ ಮರಳಿ ನಂ.1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಎಸ್‌ಎಲ್ ಟೂರ್ನಿಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಹ್ಯಾಟ್ರಿಕ್ ಸೋಲಿನ ಆಘಾತ ಅನುಭವಿಸಿದ ಬೆಂಗಳೂರು ಎಫ್‌ಸಿ ತಂಡ 9 ಪಂದ್ಯಗಳಿಂದ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಮೊದಲಾರ್ಧದಲ್ಲೇ ಬಿಎಫ್‌ಸಿಗೆ ಬಿಸಿ ಮುಟ್ಟಿಸಿದ ಮುಂಬೈ
ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿದಿದ್ದ ಮುಂಬೈ ಸಿಟಿ ಎಫ್‌ಸಿ ತಂಡ ಮೊದಲಾರ್ಧದ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನಾಡಿತು. ಆರಂಭದಲ್ಲಿ ಶೇ. 65 ರಷ್ಟು ಚೆಂಡಿನ ನಿಯಂತ್ರಣವನ್ನು ಮುಂಬೈ ತಂಡ ತನ್ನಲ್ಲೇ ಕಾಯ್ದುಕೊಂಡು ಸತತವಾಗಿ ಗೋಲ್ ಗಳಿಕೆಯ ಸಲುವಾಗಿ ಆಕ್ರಮಣ ಮಾಡಿತು. ಪರಿಣಾಮ 9ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಕಿಕ್‌ನಲ್ಲಿ ಡಿಫೆಂಡರ್ ಫಾಲ್ ತಂಡಕ್ಕೆ ಮೊದಲ ಯಶಸ್ಸು ಒದಗಿಸಿದರು. ಇದಾದ ಆರೇ ನಿಮಿಷಗಳಲ್ಲಿ ಮಿಡ್‌ಫೀಲ್ಡರ್ ಬಿಪಿನ್ ಸಿಂಗ್ ಯಶಸ್ಸು ಕಾಣುವ ಮೂಲಕ ತಂಡಕ್ಕೆ 2-0 ಅಂತರದ ಮೇಲುಗೈ ನೀಡಿದರು. ಆರಂಭಿಕ 15 ನಿಮಿಷಗಳಲ್ಲೇ 2 ಗೋಲ್ ಬಿಟ್ಟುಕೊಟ್ಟ ಬಿಎಫ್‌ಸಿ ಕಂಗಾಲಾಗಿ ಹೋಗಿತ್ತು.
ತಿರುಗೇಟು ನೀಡಲು ಸಕಲ ಪ್ರಯತ್ನ ನಡೆಸಿದ ಬೆಂಗಳೂರು
ದ್ವಿತೀಯಾರ್ಧದಲ್ಲಿ ಎದುರಾಳಿಯ ದಾಳಿಗೆ ಪ್ರತಿದಾಳಿ ನಡೆಸಿದ ಬಿಎಫ್‌ಸಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮುಂಬೈ ತಂಡದಿಂದ ಚೆಂಡಿನ ಮೇಲಿನ ನಿಯಂತ್ರಣವನ್ನು ಕಿತ್ತುಕೊಳ್ಳಲು ಆರಂಭಿಸಿದ್ದ ಬಿಎಫ್‌ಸಿಗೆ 79ನೇ ನಿಮಿಷದಲ್ಲಿ ಪೆನಾಲ್ಟಿ ಸ್ಪಾಟ್ ಕಿಕ್ ಅವಕಾಶ ಕೂಡ ಲಭ್ಯವಾಯಿತು. ಇದರಲ್ಲಿ ಛೆಟ್ರಿ ಯಶಸ್ಸಯು ತಂದುಕೊಟ್ಟರು ಕೂಡ. ಒಂದು ಹಂತದಲ್ಲಿ ಬಿಎಫ್‌ಸಿ ಈ ಪಂದ್ಯವನ್ನು 2-2ರಲ್ಲಿ ಡ್ರಾ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂಬ ಅನುಭವವಾಗಿತ್ತು.
ಆದರೆ, 84ನೇ ನಿಮಿಷದಲ್ಲಿ ಆಕಸ್ಮಿಕ ಎಂಬಂತೆ ಬಿಎಫ್‌ಸಿ ಗೋಲ್ ಕೀಪರ್ ಗುರುಕೀರತ್ ಸಿಂಗ್ ಉಡುಗೊರೆಯ ಗೋಲನ್ನು ನೀಡಿಬಿಟ್ಟರು. ಅಲ್ಲಿದೆ 3-1ರ ಮೇಲುಗೈ ಮುಂಬೈಗೆ ಸಿಗುತ್ತಿದ್ದಂತೆಯೇ ಬಿಎಫ್‌ಸಿ ಕನಸು ಕಮರಿ ಹೋಗಿತ್ತು. ಅಂತ್ಯದಲ್ಲಿ ಮುಂಬೈ ತಂಡದ ಮಿಡ್‌ಫೀಲ್ಡರ್ ಅಹ್ಮದ್ ಜೊಹುಹು ಎರಡು ಬಾರಿ ಹಳದಿ ಕಾರ್ಡ್ ಪಡೆದು ಅಂಪೈರ್‌ನಿಂದ ರೆಡ್ ಕಾರ್ಡ್‌ಗೆ ಗುರಿಯಾಗಿ ಹೊರನಡೆಯುವಂತ್ತಾಯಿತು.