ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ. ಗೋವಾ ವಿರುದ್ಧದ ಸೆಮಿಫೈನಲ್‌ನಲ್ಲಿ ಸೋತರೂ, ಒಟ್ಟಾರೆ ಗೋಲುಗಳ ಆಧಾರದ ಮೇಲೆ ಬೆಂಗಳೂರು ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮರ್ಗಾವ್(ಗೋವಾ): ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆದ ಎಫ್‌ಸಿ ಗೋವಾ ವಿರುದ್ಧದ ಸೆಮಿಫೈನಲ್‌ನ 2ನೇ ಚರಣದಲ್ಲಿ ಬಿಎಫ್‌ಸಿ 1-2 ಗೋಲುಗಳಿಂದ ಸೋಲನುಭವಿಸಿತು. ಆದರೆ ಒಟ್ಟಾರೆ 2 ಪಂದ್ಯಗಳ ಬಳಿಕ ಗೋಲು ಗಳಿಕೆಯಲ್ಲಿ ಬಿಎಫ್‌ಸಿ 3-2 ಅಂತರದಲ್ಲಿ ಮುಂದಿದ್ದ ಕಾರಣ ಫೈನಲ್‌ಗೇರಿತು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಬಿಎಫ್‌ಸಿ 2-0 ಗೆದ್ದಿತ್ತು. ಭಾನುವಾರ 49ನೇ ನಿಮಿಷದಲ್ಲಿ ಬೋರ್ಜಾ ಹೆರೆರಾ, 88ನೇ ನಿಮಿಷದಲ್ಲಿ ಹರ್ಮಾಂಡೊ ಸಾದಿಕು ಗೋಲು ಬಾರಿಸಿ ಗೋವಾಕ್ಕೆ ಸಮಬಲ ಸಾಧಿಸಲು ಕಾರಣರಾದರು. ಆದರೆ ಹೆಚ್ಚುವರಿ ನಿಮಿಷ(90+2)ದಲ್ಲಿ ನಾಯಕ ಸುನಿಲ್ ಚೆಟ್ರಿ ಬಾರಿಸಿದ ಆಕರ್ಷಕ ಹೆಡರ್ ಗೋಲು ಬಿಎಫ್‌ಸಿಗೆ ಗೆಲುವು ತಂದುಕೊಟ್ಟಿತು.
ಟೂರ್ನಿಯ ಮತ್ತೊಂದು ಸೆಮಿಫೈನಲ್‌ನಲ್ಲಿ ಮೋಹನ್ ಬಗಾನ್ ಹಾಗೂ ಜಮ್ಶೆಡ್‌ಪುರ ಸೆಣಸಾಡುತ್ತಿವೆ. ಅದರಲ್ಲಿ ಗೆಲ್ಲುವ ತಂಡದ ವಿರುದ್ಧ ಬಿಎಫ್‌ಸಿ ಏ.12ರಂದು ಫೈನಲ್‌ನಲ್ಲಿ ಆಡಲಿದೆ.
2ನೇ ಟ್ರೋಫಿ ಗುರಿ
ಬಿಎಫ್‌ಸಿ 2017-18ರಲ್ಲಿ ಫೈನಲ್‌ನಲ್ಲಿ ಸೋತಿತ್ತು. ಆದರೆ 2018-19ರಲ್ಲಿ ಮತ್ತೆ ಫೈನಲ್‌ಗೇರಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. 2022-23ರಲ್ಲಿ ಫೈನಲ್‌ಗೇರಿದ್ದ ತಂಡ, ಮೋಹನ್ ಬಗಾನ್ ವಿರುದ್ಧ ಸೋತು ಟ್ರೋಫಿ ತಪ್ಪಿಸಿಕೊಂಡಿತ್ತು. ಈ ಬಾರಿ 2ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.
ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಅಭಿನಾಶ್ ಫೈನಲ್‌ಗೆ ಲಗ್ಗೆ
ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್‌ನ 65 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅಭಿನಾಶ್ ಜಮ್ವಾಲ್ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ 22 ವರ್ಷದ ಅಭಿನಾಶ್ ಇಟಲಿಯ ಗ್ಯಾನ್‌ಲುಯಿಗಿ ಮಲಂಗಾ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್‌ಗೇರಿದರು. ಇದಕ್ಕೂ ಮುನ್ನ ಗುರುವಾರ ಹಿತೇಶ್ 70 ಕೆ.ಜಿ. ತೂಕ ವಿಭಾಗದಲ್ಲಿ ಫ್ರಾನ್ಸ್‌ನ ಮಕಾನ್ ಟ್ರೋರ್ ಅವರನ್ನು ಸೋಲಿಸಿ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತದ 10 ಮಂದಿ ಪೈಕಿ ಇಬ್ಬರು ಫೈನಲ್ ಪ್ರವೇಶಿಸಿದ್ದರೆ, ನಾಲ್ವರು ಸೆಮಿಫೈನಲ್‌ನಲ್ಲಿ ಸೋತಿದ್ದಾರೆ.