ಸುನಿಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಮರಳಿದ್ದಾರೆ. ಶರತ್ ಕಮಾಲ್ ವೃತ್ತಿಪರ ಟೇಬಲ್ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ನವದೆಹಲಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಘೋಷಿಸಿದ್ದ ನಿವೃತ್ತಿ ಹಿಂಪಡೆದಿದ್ದು, ಮತ್ತೆ ದೇಶದ ಜೆರ್ಸಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್), 'ಸುನಿಲ್ ಚೆಟ್ರಿ ಮತ್ತೆ ಆಡಲಿದ್ದಾರೆ. ನಾಯಕ, ಲೀಡರ್, ದಿಗ್ಗಜ ಚೆಟ್ರಿ ಮಾರ್ಚ್‌ನಲ್ಲಿ ಭಾರತ ಫುಟ್ಬಾಲ್ ತಂಡದ ಪರ ಆಡಲಿದ್ದಾರೆ' ಎಂದು ತಿಳಿಸಿದೆ. ಅವರು ಶಿಲ್ಲಾಂಗ್‌ನಲ್ಲಿ ನಡೆಯಲಿರುವ 2 ಸ್ನೇಹಾರ್ಥ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿರುವ ಚೆಟ್ರಿ, ಕಳೆದ ವರ್ಷ ಜೂನ್ ನಲ್ಲಿ ನಿವೃತ್ತಿ ಪ್ರಕಟಿಸಿದ್ದರು. ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ ಕುವೈತ್ ವಿರುದ್ಧ ಪಂದ್ಯದಲ್ಲಿ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಚೆಟ್ರಿ 151 ಪಂದ್ಯಗಳಲ್ಲಿ 94 ಗೋಲು ಬಾರಿಸಿದ್ದಾರೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಟಾಪ್ 5 ಏಕದಿನ ಬ್ಯಾಟರ್ ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್!
ವೃತ್ತಿಪರ ಟೇಬಲ್ ಟೆನಿಸ್‌ನಿಂದ ದಿಗ್ಗಜ ಶರತ್ ಕಮಾಲ್ ನಿವೃತ್ತಿ
ಚೆನ್ನೈ: ವೃತ್ತಿಪರ ಟೇಬಲ್ ಟೆನಿಸ್‌ನಿಂದ ಭಾರತದ ದಿಗ್ಗಜ ಆಟಗಾರ ಶರತ್ ಕಮಾಲ್ ನಿವೃತ್ತಿ ಪ್ರಕಟಿಸಿದ್ದಾರೆ. ಮಾ.25ರಿಂದ 30ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಕಂಟೆಂಡರ್‌ನಲ್ಲಿ ಕೊನೆ ಬಾರಿ ಭಾರತ ಪರ ಕಣಕ್ಕಿಳಿಯುವುದಾಗಿ ಶರತ್ ತಿಳಿಸಿದ್ದಾರೆ.
‘ನಾನು ಮೊದಲ ಪಂದ್ಯ ಆಡಿದ್ದು ಚೆನ್ನೈನಲ್ಲಿ. ವೃತ್ತಿಪರ ಆಟಗಾರನಾಗಿ ಕೊನೆ ಪಂದ್ಯ ಕೂಡಾ ಚೆನ್ನೈನಲ್ಲೇ ಆಡುತ್ತೇನೆ’ ಎಂದು ಶರತ್ ಹೇಳಿದ್ದಾರೆ. ಕಳೆದೆರಡು ದಶಕಗಳಿಂದಲೂ ಟೇಬಲ್ ಟೆನಿಸ್ ಆಡುತ್ತಿರುವ 42 ವರ್ಷದ ಶರತ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ ಸೇರಿ 13 ಪದಕ, ಏಷ್ಯನ್ ಗೇಮ್ಸ್‌ನಲ್ಲಿ 2 ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 4 ಮೆಡಲ್ ಗೆದ್ದಿದ್ದಾರೆ.
ಇದನ್ನೂ ಓದಿ: 'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್ ಕಾಲೆಳೆದ ನೆಟ್ಟಿಗರು!
ಸದ್ಯ ವಿಶ್ವ ಟಿಟಿ ರ್‍ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವ ಶರತ್, ಪಟ್ಟಿಯಲ್ಲಿ ಗರಿಷ್ಠ ರ್‍ಯಾಂಕಿಂಗ್‌ನ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಶರತ್ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಥ್ಲೀಟ್ಸ್ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.