ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ಸಾಧಿಸಿ ಉಪಾಂತ್ಯಕ್ಕೆ ಕಾಲಿಟ್ಟಿದೆ. ಮುಂದಿನ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.
ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಲಗ್ಗೆಯಿಟ್ಟಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0 ಗೋಲುಗಳ ಅಮೋಘ ಗೆಲುವು ಸಾಧಿಸಿದ ಬಿಎಫ್‌ಸಿ, ಉಪಾಂತ್ಯಕ್ಕೆ ಕಾಲಿಟ್ಟಿತು.
ಪಂದ್ಯದ ಆರಂಭದಿಂದಲೂ ಎದುರಾಳಿಯ ಮೇಲೆ ಹಿಡಿತ ಸಾಧಿಸಿದ ಬಿಎಫ್‌ಸಿ, ನಿರಂತರವಾಗಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ, ಗೆಲುವನ್ನು ಖಚಿತಪಡಿಸಿಕೊಂಡಿತು. 9ನೇ ನಿಮಿಷದಲ್ಲೇ ಸುರೇಶ್ ಸಿಂಗ್ ಗೋಲು ಸಿಡಿಸಿ ತಂಡದ ಖಾತೆ ತೆರೆದರೆ, 42ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಎಡ್ಗಾರ್ ಮೆನ್ಡೆಜ್ ಗೋಲು ದಾಖಲಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 2-0 ಮುನ್ನಡೆ ಹೊಂದಿದ್ದ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಇನ್ನೂ 3 ಗೋಲು ಗಳಿಸಿತು. 62ನೇ ನಿಮಿಷದಲ್ಲಿ ರ್‍ಯಾನ್ ವಿಲಿಯಮ್ಸ್, 76ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ, 83ನೇ ನಿಮಿಷದಲ್ಲಿ ಪೆರೇರ್ಯಾ ಡಯಾಜ್ ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು.
ಬಿಎಫ್‌ಸಿಗೆ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೋವಾ ತಂಡ ಎದುರಾಗಲಿದೆ. ಎರಡು ಚರಣಗಳ ಮುಖಾಮುಖಿಯಾಗಿದ್ದು, ಮೊದಲ ಪಂದ್ಯ ಏ.2ರಂದು ಬೆಂಗಳೂರು, 2ನೇ ಪಂದ್ಯ ಏ.6ರಂದು ಗೋವಾದಲ್ಲಿ ನಡೆಯಲಿದೆ.
ಏಷ್ಯನ್ ಅರ್ಹತಾ ಫುಟ್ಬಾಲ್: ಥಾಯ್ಲೆಂಡ್‌ನಲ್ಲಿ ಜೂ.23ಕ್ಕೆ ಭಾರತದ ಪಂದ್ಯಗಳು ಶುರು
ನವದೆಹಲಿ: 2026ರ ಮಹಿಳಾ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಗುಂಪಿನಲ್ಲಿ ಭಾರತದವು ಮಂಗೋಲಿಯಾ, ಥಾಯ್ಲೆಂಡ್, ಟಿಮೋರ್ ಲೆಸ್ಟ್, ಇರಾಕ್ ವಿರುದ್ಧ ಅಡಲಿದೆ.
ಗುರುವಾರ ಕೌಲಾಲಂಪುರದ ಎಎಫ್‌ಸಿ ಹೌಸ್‌ನಲ್ಲಿ ನಡೆದ ಡ್ರಾ ಸಮಾರಂಭ ನಡೆಯಿತು. ಜೂ.23ರಿಂದ ಜು.5ರವರೆಗೆ ಥಾಯ್ಲೆಂಡ್ ‘ಬಿ’ ಗುಂಪಿನ ಅರ್ಹತಾ ಪಂದ್ಯಗಳನ್ನು ಆಯೋಜಿಸಲಿದೆ. ಗುಂಪಿನ ಅಗ್ರಸ್ಥಾನಿ ತಂಡ 2026ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯಲಿದೆ. ಆ ಟೂರ್ನಿಯಲ್ಲಿ ಅಗ್ರ ಆರು ಸ್ಥಾನ ಪಡೆಯುವ ತಂಡಗಳು 2027ರ ಫಿಫಾ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.