ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

By Kannadaprabha NewsFirst Published Nov 25, 2021, 8:22 AM IST
Highlights

* 8ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ಮೊದಲ ಸೋಲು ಕಂಡ ಬಿಎಫ್‌ಸಿ

* ಒಡಿಶಾ ಎಫ್‌ಸಿ ಎದುರು 3-1 ಅಂತರದಲ್ಲಿ ಬೆಂಗಳೂರಿಗೆ ಸೋಲು

* ಆರಂಭದಿಂದಲೇ ಚೆಟ್ರಿ ಪಡೆ ಮೇಲೆ ಪ್ರಾಬಲ್ಯ ಮೆರೆದ ಒಡಿಶಾ

ವಾಸ್ಕೊ ಡಾ ಗಾಮ(ನ.25): ಸುನಿಲ್‌ ಚೆಟ್ರಿ (Sunil Chhetri) ನೇತೃತ್ವದ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) ತಂಡವು 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) ಫುಟ್ಬಾಲ್‌ ಟೂರ್ನಿಯಲ್ಲಿ ಬುಧವಾರ ಒಡಿಶಾ ಎಫ್‌ಸಿ (Odisha FC) ವಿರುದ್ಧ ಪಂದ್ಯದಲ್ಲಿ 3-1 ಗೋಲುಗಳ ಅಂತರದಿಂದ ಮಂಡಿಯೂರಿತು. ಇದರೊಂದಿಗೆ ಒಡಿಶಾ ಗೆಲುವಿನೊಂದಿಗೆ ಐಎಸ್‌ಎಲ್‌ ಅಭಿಯಾನ ಆರಂಭಿಸಿತು. ಬಿಎಫ್‌ಸಿ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಇದೀಗ ಎರಡನೇ ಪಂದ್ಯದಲ್ಲೇ ಚೆಟ್ರಿ ಪಡೆಗೆ ಸೋಲಿನ ನಿರಾಸೆ ಎದುರಾಗಿದೆ.

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಡಿಶಾ, ಪಂದ್ಯದ 3ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿತು. ಜೇವಿ ಹೆರ್ನಾಂಡೆಜ್‌ ಒಡಿಶಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 21ನೇ ನಿಮಿಷದಲ್ಲಿ ಬಿಎಫ್‌ಸಿಯ ಅಲನ್‌ ಕೋಸ್ಟಾಗೋಲು ದಾಖಲಿಸುವ ಮೂಲಕ 1-1 ಸಮಬಲಕ್ಕೆ ಕಾರಣರಾದರು.

ಆದರೆ, 51ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದ ಜೇವಿ ಹೆರ್ನಾಂಡೆಜ್‌ ಗೋಲಿನ ಅಂತರವನ್ನು 2-1ಕ್ಕೆ ಏರಿಸಿದರು. ಈ ಹಂತದಲ್ಲಿ ಗೋಲು ದಾಖಲಿಸಲು ಬಿಎಫ್‌ಸಿ ನಡೆಸಿದ ಯತ್ನಗಳು ಯಾವುದೇ ಫಲ ಕೊಡಲಿಲ್ಲ. ಹೆಚ್ಚುವರಿ ಸಮಯದಲ್ಲಿ(95ನೇ ನಿ.) ಅರಿದೈ ಕ್ಯಾಬ್ರೆರಾ ಒಡಿಶಾದ ಪರ 3ನೇ ಗೋಲು ದಾಖಲಿಸಿದರು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬಿಎಫ್‌ಸಿ ತಂಡ ನಾರ್ಥ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ (Northeast United FC) ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು.

ISL 2021-22‌: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮಣಿಸಿ ಬೆಂಗಳೂರು ಎಫ್‌ಸಿ ಶುಭಾರಂಭ

ಸಂತೋಷ್‌ ಟ್ರೋಫಿ: ಇಂದು ಕರ್ನಾಟಕಕ್ಕೆ ಆಂಧ್ರ ಸವಾಲು

ಬೆಂಗಳೂರು: ಸಂತೋಷ್‌ ಟ್ರೋಫಿ (Santhosh Trophy) ದಕ್ಷಿಣ ವಲಯ ಅರ್ಹತಾ ಫುಟ್ಬಾಲ್‌ ಟೂರ್ನಿಯಲ್ಲಿ ಕರ್ನಾಟಕ ತಂಡವು (Karnataka Football Team) ಗುರುವಾರ ಆಂಧ್ರಪ್ರದೇಶ ವಿರುದ್ಧ ಸೆಣಸಾಡಲಿದೆ. ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 4-0 ಗೋಲುಗಳಿಂದ ಭರ್ಜರಿಯಾಗಿ ಗೆದ್ದಿದ್ದ ರಾಜ್ಯ ತಂಡ, 2ನೇ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದೆ. ಇದರಲ್ಲಿ ಗೆದ್ದರೆ ಮುಂದಿನ ಸುತ್ತಿಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಲಿದೆ. ಕರ್ನಾಟಕ ಗುಂಪು ಹಂತದ ಕೊನೆ ಪಂದ್ಯವನ್ನು ಶನಿವಾರ ತೆಲಂಗಾಣ ವಿರುದ್ಧ ಆಡಲಿದೆ.

ಜೂನಿಯರ್‌ ಹಾಕಿ: ಭಾರತಕ್ಕೆ ವಿರೋಚಿತ ಸೋಲು

ಭುನವೇಶ್ವರ: 12ನೇ ಆವೃತ್ತಿಯ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ನಲ್ಲಿ (Junior Hockey World Cup) ಭಾರತ ಸೋಲಿನ ಆರಂಭ ಪಡೆದಿದೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ ಫ್ರಾನ್ಸ್‌ ವಿರುದ್ಧ 4-5 ಗೋಲುಗಳಿಂದ ವಿರೋಚಿತ ಸೋಲುಂಡಿತು. 

Junior Hockey World Cup: ಒಡಿಶಾದಲ್ಲಿ ಇಂದಿನಿಂದ ಜೂನಿಯರ್ ಹಾಕಿ ವಿಶ್ವಕಪ್ ಆರಂಭ

ಮೊದಲ ನಿಮಿಷದಲ್ಲೇ ಗೋಲು ಗಳಿಸಿದ ಫ್ರಾನ್ಸ್‌ 7ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿತು. ಬಳಿಕ 2 ಗೋಲು ಹೊಡೆದ ಭಾರತ 2-2ರಿಂದ ಸಮಬಲಗೊಳಿಸಿತು. ನಂತರ ಪ್ರಾಬಲ್ಯ ಸಾಧಿಸಿದ ಫ್ರಾನ್ಸ್‌ ಮತ್ತೆ 3 ಗೋಲು ಹೊಡೆದರೆ, ಭಾರತ ಪಂದ್ಯದ ಕೊನೆಯ ನಿಮಿಷಗಳಲ್ಲಿ 2 ಗೋಲು ಬಾರಿಸಿದರೂ ಸೋಲು ತಪ್ಪಿಸಲಾಗಲಿಲ್ಲ.

ವಿಶ್ವ ಟಿಟಿ: ಮನಿಕಾ ಬಾತ್ರಾ, ಶರತ್‌ ಕಮಲ್‌ಗೆ ಆಘಾತ

ಹೌಸ್ಟನ್‌(ಅಮೆರಿಕ): ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ (World Table Tennis Championship) ಭಾರತದ ತಾರಾ ಟಿಟಿ ಪಟುಗಳಾದ ಮನಿಕಾ ಬಾತ್ರಾ (Manika Batra) ಹಾಗೂ ಶರತ್‌ ಕಮಲ್‌ (Sharath Kamal) ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಆದರೆ ಐಹಿಕಾ ಮುಖರ್ಜಿ ಹಾಗೂ ಸತ್ಯನ್‌ ಜ್ಞಾನಶೇಕರನ್‌ 2ನೇ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದಾರೆ. 

ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಐಹಿಕಾ, ಈಜಿಪ್ಟ್‌ನ ಫರಾಹ್‌ ಅಬ್ದುಲ್‌ ಅಜೀಜ್‌ ವಿರುದ್ಧ 4-2ರಿಂದ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಸತ್ಯನ್‌, ಉಕ್ರೇನ್‌ನ ಯರೋಸ್ಲಾವ್‌ ವಿರುದ್ಧ 4-0 ಅಂತರದಲ್ಲಿ ಗೆದ್ದರು. ಆದರೆ, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ಮನಿಕಾ ಮಹಿಳಾ ಸಿಂಗಲ್ಸ್‌ನಲ್ಲಿ ಬ್ರೆಜಿಲ್‌ನ ಬ್ರೂನಾ ತಕಹಶಿ ವಿರುದ್ಧ 3-4ರಿಂದ ಸೋಲನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.30 ಶರತ್‌, ಬೆಲ್ಜಿಯಂನ ಸೆಡ್ರಿಕ್‌ ನ್ಯೂಟಿಂಗ್‌ ವಿರುದ್ಧ 1-4 ಅಂತರದಲ್ಲಿ ಮುಗ್ಗರಿಸಿದರು. ಅಮಲ್‌ರಾಜ್‌ ಅಂಥೋನಿ, ಹರ್ಮೀತ್‌ ದೇಸಾಯಿ, ಸುತೀರ್ಥ ಮುಖರ್ಜಿ ಸಹ ಸೋಲನುಭವಿಸಿದರು.

click me!