ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್‌ಸಿ-ಚೆನ್ನೈಯಿನ್ ಪಂದ್ಯ ಡ್ರಾನಲ್ಲಿ ಅಂತ್ಯ
ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯ
ಫಿಜಿ ಮೂಲದ ರಾಯ್ ಕೃಷ್ಣ ಆಕರ್ಷಕ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿಕೊಟ್ಟಿದ್ದರು
ಚೆನ್ನೈ(ಅ.15): ಐಎಸ್‌ಎಲ್ ಫುಟ್ಬಾಲ್ ಟೂರ್ನಿಯ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಶುಕ್ರವಾರ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಸಮಬಲದ ಹೋರಾಟ ಕಂಡುಬಂತು.
ಪಂದ್ಯದ 4ನೇ ನಿಮಿಷದಲ್ಲೇ ಫಿಜಿ ಮೂಲದ ರಾಯ್ ಕೃಷ್ಣ ಆಕರ್ಷಕ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿಕೊಟ್ಟರು. ಬಳಿಕ ಮೊದಲಾರ್ಧದ ಅಂತ್ಯದ ವೇಳೆಗೆ ಪ್ರಶಾಂತ್ ಬಾರಿಸಿದ ಗೋಲಿನಿಂದಾಗಿ ಚೆನ್ನೈಯಿನ್ ಸಮಬಲ ಸಾಧಿಸಿತು. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಉಭಯ ತಂಡಗಳು ಸದ್ಯ ತಲಾ 4 ಅಂಕಗಳನ್ನು ಹೊಂದಿದ್ದು, ಚೆನ್ನೈಯಿನ್ 2ನೇ, ಬಿಎಫ್‌ಸಿ 3ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಬಿಎಫ್‌ಸಿ ಅ.22ಕ್ಕೆ ಹಾಲಿ ಚಾಂಪಿಯನ್ ಹೈದರಾಬಾದ್ ಎಫ್‌ಸಿ ವಿರುದ್ಧ ಸೆಣಸಲಿದೆ.
It ends all square here in Chennai. 🔵 pic.twitter.com/711rf19NSR
— Bengaluru FC (@bengalurufc)undefined
ಅಂಡರ್ 17 ವಿಶ್ವಕಪ್: ಭಾರತಕ್ಕೆ 0-3 ಸೋಲು
ಭುವನೇಶ್ವರ್: ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥ್ಯ ಭಾರತ ಸತತ 2ನೇ ಸೋಲನುಭವಿಸಿದ್ದು, ಕ್ವಾರ್ಟರ್‌ಫೈನಲ್ ಪ್ರವೇಶಿಸಲು ವಿಫಲವಾಗಿದೆ. ಶುಕ್ರವಾರ ಮೊರೊಕ್ಕೊ ವಿರುದ್ಧದ ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವ ನಂ.58 ಭಾರತ 0-3 ಗೋಲುಗಳಿಂದ ಪರಾಭವಗೊಂಡಿತು. ವಿಶ್ವ ರಾರಯಂಕಿಂಗ್‌ನಲ್ಲಿ 76ನೇ ಸ್ಥಾನದಲ್ಲಿರುವ ಮೊರೊಕ್ಕೊ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದ ಭಾರತ ನಿರಾಸೆ ಅನುಭವಿಸಿತು.
ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಅಮೆರಿಕ ವಿರುದ್ಧ 0-8 ಗೋಲುಗಳಿಂದ ಸೋತಿದ್ದ ಆತಿಥೇಯ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಯಿತು. ಗುಂಪಿನಲ್ಲಿ ಅಮೆರಿಕ ಹಾಗೂ ಹಾಲಿ ಚಾಂಪಿಯನ್ ಬ್ರೆಜಿಲ್ ತಲಾ 4 ಅಂಕಗಳನ್ನು ಹೊಂದಿದ್ದು, ಮೊರೊಕ್ಕೊ(3 ಅಂಕ) 3ನೇ ಸ್ಥಾನದಲ್ಲಿದೆ. ಅ.17ಕ್ಕೆ ಭಾರತ ತಂಡ ಬ್ರೆಜಿಲ್ ವಿರುದ್ಧ ಸೆಣಸಲಿದೆ.
ಕಂಠೀರವದಲ್ಲಿ ಇಂದಿನಿಂದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್
ಬೆಂಗಳೂರು: 61ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಚಾಲನೆ ಸಿಗಲಿದ್ದು, ತಾರಾ ಅಥ್ಲೀಟ್‌ಗಳಾದ ಜ್ಯೋತಿ ಯರ್ರಾಜಿ, ಅಮ್ಲನ್ ಬೊರ್ಗೋಹೈನ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಆದರೆ ನೀರಜ್ ಚೋಪ್ರಾ, ಮುರಳಿ ಶ್ರೀಶಂಕರ್, ಅವಿನಾಶ್ ಸಾಬ್ಳೆ, ಅನೀಸ್ ಯಹ್ಯಾ, ಎಲ್ಡೋಸ್ ಪೌಲ್ ಸೇರಿದಂತೆ ಪ್ರಮುಖರು ಗೈರಾಗಲಿದ್ದಾರೆ.
National Games 2022: ಕರ್ನಾಟಕದ ಸಾರ್ವಕಾಲಿಕ ಶ್ರೇಷ್ಠ ಶೋ.!
ಕ್ರೀಡಾಂಗಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಅಳವಡಿಸಿರುವ ನೂತನ ಸಿಂಥೆಟಿಕ್ ಟ್ರ್ಯಾಕ್ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ಗೆ ಆತಿಥ್ಯ ನೀಡಲಿದೆ. 3 ದಶಕಗಳ ಬಳಿಕ ರಾಜ್ಯದಲ್ಲಿ ಕ್ರೀಡಾಕೂಟ ನಡೆಯಲಿದ್ದು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಕೆಲ ಸಂಸ್ಥೆಗಳು ಸೇರಿ ಒಟ್ಟು 31 ತಂಡಗಳಿಂದ 868 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. 5 ದಿನಗಳ ಕೂಟದಲ್ಲಿ ರೈಲ್ವೇಸ್ ತಂಡದಿಂದ ಅತೀ ಹೆಚ್ಚು ಅಂದರೆ 103 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕರ್ನಾಟಕದ 60 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕೂಟದ ಮೊದಲ ದಿನ ಪುರುಷ, ಮಹಿಳಾ ವಿಭಾಗದ 20 ಕಿ.ಮೀ. ವೇಗ ನಡಿಗೆ, ಮಹಿಳೆಯರ ಪೋಲ್ ವಾಲ್ಟ್, ಡಿಸ್ಕಸ್ ಥ್ರೋ ಫೈನಲ್ ಸ್ಪರ್ಧೆಗಳು ನಡೆಯಲಿವೆ.