
ಬೆಂಗಳೂರು: ದೇಶದ ಅತಿದೊಡ್ಡ ಫುಟ್ಬಾಲ್ ಟೂರ್ನಿಯಾಗಿರುವ 13ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ಗೆ ಶನಿವಾರ ಚಾಲನೆ ಸಿಗಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿಗೆ ಸ್ಪೋರ್ಟಿಂಗ್ ಕ್ಲಬ್ ಡೆಲ್ಲಿ ತಂಡದ ಸವಾಲು ಎದುರಾಗಲಿದೆ.
ಹಲವು ವಿವಾದ, ಗೊಂದಲಗಳ ಬಳಿಕ ಈ ಬಾರಿ ಲೀಗ್ ಮತ್ತೆ ತನ್ನ ಸಾಂಪ್ರದಾಯಿಕ ಹೋಮ್-ಅವೇ(ತವರು ಮತ್ತು ತವರಿನಾಚೆ ಪಂದ್ಯಗಳು) ಮಾದರಿಗೆ ಮರಳಿವೆ. ಲೀಗ್‌ನಲ್ಲಿ ಒಟ್ಟು 13 ತಂಡಗಳಿದ್ದು, ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡ ಇತರ 12 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ. ಲೀಗ್‌ನಲ್ಲಿ ಒಟ್ಟು 163 ಪಂದ್ಯಗಳಿವೆ.
ಲೀಗ್ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಪಡೆಯುವ ತಂಡ ಐಎಸ್‌ಎಲ್ ಶೀಲ್ಡ್ ವಿನ್ನರ್ ಎನಿಸಿಕೊಳ್ಳಲಿದೆ. ಇದರ ಜೊತೆಗೆ ಐಎಸ್‌ಎಲ್ ಚಾಂಪಿಯನ್ ಎನಿಸಿಕೊಳ್ಳಲು ಪ್ಲೇ-ಆಫ್ ಮಾದರಿಯಲ್ಲಿ ಪಂದ್ಯಗಳೂ ನಡೆಯಲಿವೆ. ಲೀಗ್‌ನಲ್ಲಿ ಅಗ್ರ-6 ಸ್ಥಾನ ಪಡೆದ ತಂಡಗಳು ಪ್ಲೇ-ಆಫ್ ಪ್ರವೇಶಿಸಲಿವೆ. ಸದ್ಯಕ್ಕೆ ಮೊದಲ ಹಂತದ ವೇಳಾಪಟ್ಟಿ ಪ್ರಕಟಗೊಂಡಿದೆ. 2027ರ ಮೇ ವೇಳೆಗೆ ಲೀಗ್ ಮುಕ್ತಾಯಗೊಳ್ಳಲಿದೆ.
ಲೀಗ್‌ನಲ್ಲಿ ಬಿಎಫ್‌ಸಿ, ಡೆಲ್ಲಿ ಹೊರತಾಗಿ ಚೆನ್ನೈಯಿನ್ ಎಫ್‌ಸಿ, ಹಾಲಿ ಚಾಂಪಿಯನ್ ಈಸ್ಟ್ ಬೆಂಗಾಲ್, ಚರ್ಚಿಲ್ ಬ್ರದರ್ಸ್, ಎಫ್‌ಸಿ ಗೋವಾ, ಇಂಟರ್‌ಕಾಶಿ, ಕೇರಳ ಬ್ಲಾಸ್ಟರ್ಸ್, ಮೋಹನ್ ಬಗಾನ್, ಒಡಿಶಾ ಎಫ್‌ಸಿ, ಪಂಜಾಬ್ ಎಫ್‌ಸಿ ತಂಡಗಳಿವೆ.
ನವದೆಹಲಿ: 6ನೇ ಆವೃತ್ತಿಯ ಪ್ರೊ ರೆಸ್ಲಿಂಗ್ ಲೀಗ್(ಪಿಡಬ್ಲ್ಯುಎಲ್) 2027ರ ಜ.9ರಿಂದ 26ರ ವರೆಗೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಲೀಗ್‌ನಲ್ಲಿ 6 ಫ್ರಾಂಚೈಸಿಗಳು ಪಾಲ್ಗೊಳ್ಳಲಿದ್ದು, 86 ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಶುಕ್ರವಾರ ಲೀಗ್‌ನ ಅಧಿಕೃತ ಘೋಷಣಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಇತ್ತೀಷೆಗೆ ಏಷ್ಯನ್ ಗೇಮ್ಸ್‌ನ ಪದಕ ವಿಜೇತ ಕುಸ್ತಿಪಟುಗಳಾದ ಸುಜೀತ್ ಕಲ್ಕಲ್, ಅಮನ್ ಶೆಹ್ರಾವತ್, ಅಂತಿಮ್ ಪಂಘಾಲ್, ನಿತೇಶ್ ಸಿವಾಚ್, ದೀಪಕ್ ಪುನಿಯಾ ಮತ್ತು ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.