
Lionel Messi Retires: Emotional Farewell After 21 Years: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಓರ್ವರಾಗಿರುವ, ಈ ಯುಗದ ಫುಟ್ಬಾಲ್ ಅಭಿಮಾನಿಗಳ ಪಾಲಿನ ಹೀರೋ ಲಿಯೋನಲ್ ಮೆಸ್ಸಿ ತಮ್ಮ 21 ವರ್ಷಗಳ ವರ್ಣರಂಜಿತ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.
ಬುಧವಾರ ಮುಂಜಾನೆ ಪಶ್ಚಿಮ ಆಫ್ರಿಕಾದ ದೇಶ, ಬೆನಿನ್ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾದ 39 ವರ್ಷದ ಮೆಸ್ಸಿ ಕೊನೆ ಬಾರಿ ಅಂತಾರಾಷ್ಟ್ರೀಯ ಪಂದ್ಯವಾಡಿದರು. ಪಂದ್ಯದಲ್ಲಿ 2 ಬಾರಿ ಗೋಲು ಗಳಿಸಲು ನೆರವಾದ(ಅಸಿಸ್ಟ್) ಅವರು, 71ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಮೂಲಕ ಗೋಲನ್ನೂ ಬಾರಿಸಿದರು. ಈ ಮೂಲಕ ತಮ್ಮ ಕೊನೆ ಪಂದ್ಯದಲ್ಲೂ ಅರ್ಜೆಂಟೀನಾದ ಗೆಲುವಿನ ರೂವಾರಿಯಾಗಿ ಕಂಗೊಳಿಸಿದರು.
2005ರಲ್ಲಿ ತಮ್ಮ 18ನೇ ವಯಸ್ಸಿನಲ್ಲೇ ಅರ್ಜೆಂಟೀನಾ ಪರ ಪಾದಾರ್ಪಣೆ ಮಾಡಿದ್ದ ಮೆಸ್ಸಿ, ಈವರೆಗೂ 207 ಪಂದ್ಯಗಳನ್ನಾಡಿದ್ದು, 126 ಗೋಲು ಬಾರಿಸಿ, 66 ಅಸಿಸ್ಟ್ ಮಾಡಿದ್ದಾರೆ. ಇವೆಲ್ಲವೂ ಅರ್ಜೆಂಟೀನಾ ಪರ ದಾಖಲೆ ಎನಿಸಿಕೊಂಡಿದೆ. ಅವರು 2 ಬಾರಿ ಕೋಪಾ ಅಮರಿಕ, ಒಂದು ಬಾರಿ ಫಿಫಾ ವಿಶ್ವಕಪ್ ಗೆದ್ದಿದ್ದಾರೆ. ಆದರೆ 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಸೋತಿತ್ತು. ಬಳಿಕ ಇತ್ತೀಚೆಗೆ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು.
ಮೆಸ್ಸಿಯ ಕೊನೆ ಪಂದ್ಯ ವೀಕ್ಷಿಸಲು ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿರುವ ಕ್ರೀಡಾಂಗಣದಲ್ಲಿ 85000 ಪ್ರೇಕ್ಷಕರು ನೆರೆದಿದ್ದರು. ಟಿಕೆಟ್ ಮೊತ್ತ ₹2.5 ಲಕ್ಷದವರೆಗೂ ಇದ್ದರೂ 90 ನಿಮಿಷಗಳಲ್ಲೇ ಎಲ್ಲಾ ಟಿಕೆಟ್‌ಗಳು ಮಾರಾಟಗೊಂಡಿದ್ದವು. 1978, 1986 ಹಾಗೂ 2022ರಲ್ಲಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ ತಂಡಗಳಲ್ಲಿದ್ದ ಆಟಗಾರರು ಮೆಸ್ಸಿಯ ವಿದಾಯ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಲಿಯೋನಲ್ ಮೆಸ್ಸಿಯ ಜೆರ್ಸಿ ಸಂಖ್ಯೆ 10. ಹೀಗಾಗಿ, ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬುಧವಾರದ ಪಂದ್ಯವನ್ನು 10ನೇ ನಿಮಿಷಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ 85000ಕ್ಕೂ ಹೆಚ್ಚು ಅಭಿಮಾನಿಗಳು ಎದ್ದು ನಿಂತು, ಚಪ್ಪಾಳೆ ತಟ್ಟಿ ದಿಗ್ಗಜ ಫುಟ್ಬಾಲಿಗನಿಗೆ ಗೌರವ ಸಲ್ಲಿಸಿದರು.
ಸಾಮಾನ್ಯವಾಗಿ ಫುಟ್ಬಾಲ್ ಪಂದ್ಯದಲ್ಲಿ ಫೌಲ್ ಮಾಡಿದರೆ ರೆಫ್ರಿಗಳು ಆಟಗಾರರಿಗೆ ಎಚ್ಚರಿಕೆ ನೀಡಲು ಹಳದಿ, ಬಳಿಕ ರೆಡ್ ಕಾರ್ಡ್ ನೀಡುತ್ತಾರೆ. ಆದರೆ ಮೆಸ್ಸಿಗೆ ಗೌರವ ಸೂಚಿಸಲು ಪಂದ್ಯದ ಬಳಿಕ ರೆಫ್ರಿ ತಮ್ಮಲ್ಲಿದ್ದ ರೆಡ್ ಹಾಗೂ ಯೆಲ್ಲೋ ಕಾರ್ಡ್‌ಗಳನ್ನು ಮೆಸ್ಸಿಗೆ ನೀಡಿದರು. ಕಾರ್ಡ್‌ಗಳನ್ನು ಪಡೆದ ಮೆಸ್ಸಿ ಅದನ್ನು ತಮ್ಮಲ್ಲೇ ಇಟ್ಟುಕೊಂಡರು.
ಮೆಸ್ಸಿ ಭಾವುಕ ಮಾತುಪಂದ್ಯದ ಬಳಿಕ ಮಾತನಾಡಿದ ಮೆಸ್ಸಿ, ತಮ್ಮ ತಂದೆಯನ್ನು ನೆನೆದು ಭಾವುಕರಾದರು. ‘ಈಗ ಮಾತನಾಡುವುದೇ ಕಷ್ಟವಾಗುತ್ತಿದೆ. ನನ್ನೊಳಗೆ ಬಹಳಷ್ಟು ಭಾವನೆಗಳು ಓಡಾಡುತ್ತಿವೆ. ನಾನು ಹೇಳಬೇಕಾದ ಅನೇಕ ವಿಷಯಗಳನ್ನು ಮರೆತಿದ್ದೇನೆ. ಏಕೆಂದರೆ ಇದು ನನಗೆ ತುಂಬಾ ಕಠಿಣ ಕ್ಷಣ. ಈಗ ಮೊದಲು ನನ್ನ ಮನಸ್ಸಿಗೆ ಬರುವುದು ನನ್ನ ತಂದೆ. ಅರ್ಜೆಂಟೀನಾ ಜೆರ್ಸಿ ಧರಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನಷ್ಟೇ ಹೇಳಲು ನನ್ನಿಂದ ಸಾಧ್ಯ’ ಎಂದರು.
ನಾನು ಹಿಂದೆಂದಿಗಿಂತಲೂ ಹೆಚ್ಚು ಈಗ ಮಾತನಾಡುತ್ತಿದ್ದೇನೆ. ನಾನು ಇಲ್ಲಿಂದ ಹೊರಡಲು ಬಯಸುವುದಿಲ್ಲ. ಈ ಮೈದಾನವನ್ನು ಬಿಟ್ಟು ಹೋಗಲು ನನಗೆ ಇಷ್ಟವಿಲ್ಲ. ಇನ್ನು ಮುಂದೆ ಈ ಕ್ರೀಡಾಂಗಣಕ್ಕೆ ಬರಲಾಗದು ಮತ್ತು ಅರ್ಜೆಂಟೀನಾ ರಾಷ್ಟ್ರೀಯ ತಂಡದ ಭಾಗವಾಗಲು ಸಾಧ್ಯವಿಲ್ಲ ಎಂಬುದನ್ನು ನೆನೆಯುವುದೂ ಕಷ್ಟವಾಗುತ್ತಿದೆ. ನಾನು ನಿಮ್ಮೆಲ್ಲರನ್ನು ಮಿಸ್ ಮಾಡುತ್ತೇನೆ. ಆದರೆ ನಾನು ಯಾವಾಗಲೂ ನಿಮ್ಮ ಜೊತೆಗೇ ಇರುತ್ತೇನೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ ಮತ್ತು ಅರ್ಜೆಂಟೀನಾದವ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಇಲ್ಲಿಂದ ಹೆಮ್ಮೆಯಿಂದ ಮತ್ತು ನೆಮ್ಮದಿಯಿಂದ ಹೊರಡುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು.
- ಲಿಯೋನಲ್ ಮೆಸ್ಸಿ
ಪಂದ್ಯದ ಬಳಿಕ ಮೆಸ್ಸಿ ಮಾತನಾಡುತ್ತಿದ್ದಾಗ ಕೋಚ್ ಲಿಯೋನಲ್ ಸ್ಕಲೋನಿ ಕೂಡಾ ಕಣ್ಣೀರಾದರು. ಸಹ ಆಟಗಾರ ಎನ್ಜೊ ಫೆರ್ನಾಂಡಿಜ್ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯಗಳು ಕಂಡುಬಂತು. ಈ ವೇಳೆ ಮೈದಾನದಲ್ಲಿ ಮೆಸ್ಸಿ ಪತ್ನಿ, ಮಕ್ಕಳು ಕೂಡಾ ಹಾಜರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.