
ಡಲ್ಲಾಸ್: ಕ್ರೊವೇಷಿಯಾ ವಿರುದ್ಧ 4-2 ಗೋಲುಗಳ ಗೆಲುವಿನೊಂದಿಗೆ ಇಂಗ್ಲೆಂಡ್ ಶುಭಾರಂಭ ಮಾಡಿದೆ. ಹ್ಯಾರಿ ಕೇನ್ 2 ಗೋಲು ಬಾರಿಸಿ, ಇಂಗ್ಲೆಂಡ್‌ಗೆ ಆರಂಭಿಕ ಮುನ್ನಡೆ ಒದಗಿಸಿದರೆ, ದ್ವಿತೀಯಾರ್ಧದಲ್ಲಿ ಜ್ಯೂಡ್ ಬೆಲ್ಲಿಂಗ್‌ಹ್ಯಾಮ್ ಹಾಗೂ ಮಾರ್ಕಸ್ ರ್‍ಯಾಶ್‌ಫೋರ್ಡ್ ಬಾರಿಸಿದ ಗೋಲು, ಇಂಗ್ಲೆಂಡ್‌ಗೆ ಜಯ ತಂದುಕೊಟ್ಟಿತು. ಇದರೊಂದಿಗೆ 2018ರ ವಿಶ್ವಕಪ್‌ನ ಸೆಮೀಸ್‌ನಲ್ಲಿ ಕ್ರೊವೇಷಿಯಾ ವಿರುದ್ಧ ಎದುರಾಗಿದ್ದ ಸೋಲಿಗೆ, ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು.
2026ರ ವಿಶ್ವಕಪ್‌ನಲ್ಲಿ ಈ ವರೆಗೂ ನಡೆದಿರುವ ಪಂದ್ಯಗಳಲ್ಲೇ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯವೆನಿಸಿದ ಈ ಪಂದ್ಯದಲ್ಲಿ ಇಂಗ್ಲೆಂಡ್ 12ನೇ ನಿಮಿಷದಲ್ಲೇ ಖಾತೆ ತೆರೆಯಿತು.
ಕ್ರೊವೇಷಿಯಾದ ತಾರಾ ಆಟಗಾರ ಲೂಕಾ ಮೊಡ್ರಿಕ್ ಮಾಡಿದ ತಪ್ಪಿನಿಂದಾಗಿ ಇಂಗ್ಲೆಂಡ್‌ಗೆ ಪೆನಾಲ್ಟಿ ದೊರೆಯಿತು. ಈ ಅವಕಾಶವನ್ನು ಕೇನ್ ಕೈಚೆಲ್ಲಲಿಲ್ಲ. 36ನೇ ನಿಮಿಷದಲ್ಲಿ ಮಾರ್ಟಿನ್ ಬಟುರಿನಾ, ಕ್ರೊವೇಷಿಯಾ ಸಮಬಲ ಸಾಧಿಸಲು ನೆರವಾದರು. 42ನೇ ನಿಮಿಷದಲ್ಲಿ ಕೇನ್ 2ನೇ ಗೋಲು ಬಾರಿಸಿ, ಇಂಗ್ಲೆಂಡ್‌ಗೆ ಮತ್ತೊಮ್ಮೆ ಮುನ್ನಡೆ ತಂದುಕೊಟ್ಟರೆ 45+5ನೇ ನಿಮಿಷದಲ್ಲಿ ಪೀಟರ್ ಮೂಸಾ ಕ್ರೊವೇಷಿಯಾ ಮತ್ತೆ ಸಮಬಲ ಸಾಧಿಸುವಂತೆ ಮಾಡಿದರು.
ಆದರೆ, ಇಂಗ್ಲೆಂಡ್ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ದ್ವಿತೀಯಾರ್ಧ ಆರಂಭಗೊಳ್ಳುತ್ತಿದ್ದಂತೆಯೇ ಇಂಗ್ಲೆಂಡ್ 3ನೇ ಗೋಲು ಗಳಿಸಿತು. 47ನೇ ನಿಮಿಷದಲ್ಲಿ ಬೆಲ್ಲಿಂಗ್‌ಹ್ಯಾಮ್ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. 85ನೇ ನಿಮಿಷದಲ್ಲಿ ರ್‍ಯಾಶ್‌ಫೋರ್ಡ್ ಮುನ್ನಡೆಯನ್ನು 4-2ಕ್ಕೆ ಹೆಚ್ಚಿಸಿದರು.
ಮೆಕ್ಸಿಕೋ ಸಿಟಿ: ಉಜ್ಬೇಕಿಸ್ತಾನ ವಿರುದ್ಧದ ‘ಕೆ’ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ 3-1 ಗೋಲುಗಳ ಜಯ ಸಾಧಿಸಿತು. ಪಂದ್ಯದಲ್ಲಿ ಡೇನಿಯಲ್ ಮುನೊಜ್ 40ನೇ ನಿಮಿಷದಲ್ಲಿ ಗಳಿಸಿದ ಗೋಲು, ಕೊಲಂಬಿಯಾಗೆ ಆರಂಭಿಕ ಮುನ್ನಡೆ ಒದಗಿಸಿತು. 60ನೇ ನಿಮಿಷದಲ್ಲಿ ಅಬ್ಬೊಸೆಕ್, ಉಜ್ಬೇಕಿಸ್ತಾನ ಪರ ಖಾತೆ ತೆರೆದರು. ಆದರೆ 65ನೇ ನಿಮಿಷದಲ್ಲಿ ಲೂಯಿಸ್ ಡಯಾಜ್, 90+9ನೇ ನಿಮಿಷದಲ್ಲಿ ಜ್ಯಾಮಿನ್ಟನ್ ಗೋಲು ಗಳಿಸಿ, ತಂಡಕ್ಕೆ 2 ಗೋಲಗಳ ಅಂತರದ ಜಯ ತಂದುಕೊಟ್ಟರು.
ಟೊರೊಂಟೊ: ಕಾಲೆಬ್ ಯೆರೆನ್ಕಿ ಪಂದ್ಯದ ಅಂತಿಮ ಕ್ಷಣಗಳಲ್ಲಿ ಬಾರಿಸಿದ ಗೋಲು, ಪನಾಮ ವಿರುದ್ಧ ಘಾನಾ 1-0 ಗೋಲಿನಿಂದ ಗೆಲುವು ಸಾಧಿಸಲು ನೆರವಾಯಿತು. ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಹಲವು ಅವಕಾಶಗಳು ಸಿಕ್ಕವು. ಆದರೆ, ಎರಡೂ ತಂಡಗಳು ಅದರ ಸದುಪಯೋಗ ಪಡಿಸಿಕೊಳ್ಳಲಿಲ್ಲ. 90+5ನೇ ನಿಮಿಷದಲ್ಲಿ ಯೆರೆನ್ಕಿ ಬಾರಿಸಿದ ಗೋಲು ಘಾನಾಗೆ 3 ಅಂಕ ತಂದುಕೊಟ್ಟರೆ, ಪನಾಮಗೆ ವಿಶ್ವಕಪ್‌ನಲ್ಲಿ ಮೊದಲ ಅಂಕ ಗಳಿಸುವ ಅವಕಾಶವನ್ನು ಕಿತ್ತುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.