
ಹ್ಯೂಸ್ಟನ್: ದಿಗ್ಗಜ ಫುಟ್ಬಾಲಿಗ, 41 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೋ, ತಮ್ಮ 6ನೇ ಹಾಗೂ ಬಹುತೇಕ ಕೊನೆಯ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೋಲು ಬಾರಿಸಲು ವಿಫಲಾದರು. ಇದರ ಪರಿಣಾಮ, ಕಾಂಗೋ ವಿರುದ್ಧ ಪೋರ್ಚುಗಲ್ 1-1ರ ಡ್ರಾಗೆ ತೃಪ್ತಿಪಟ್ಟಿತು.
ಲಿಯೋನೆಲ್ ಮೆಸ್ಸಿ, ಕಿಲಿಯನ್ ಎಂಬಾಪೆ, ಎರ್ಲಿಂಗ್ ಹಾಲ್ಯಾಂಡ್, ಹ್ಯಾರಿ ಕೇನ್, ವಿನಿಶಿಯಸ್ ಜೂನಿಯರ್, ಕ್ರಿಸ್ಟಿಯನ್ ಪುಲಿಸಿಚ್ ಸೇರಿ ಹಲವು ತಾರಾ ಆಟಗಾರರು ಈ ವಿಶ್ವಕಪ್‌ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಗೋಲಿನ ಖಾತೆ ತೆರೆದರೆ, ರೊನಾಲ್ಡೋ ಮಾತ್ರ ಮಂಕಾದರು.
ಪಂದ್ಯದ 6ನೇ ನಿಮಿಷದಲ್ಲೇ ಜಾವೊ ನೆವಿಸ್ ಗೋಲು ಗಳಿಸಿ, ಪೋರ್ಚುಗಲ್‌ಗೆ ಮುನ್ನಡೆ ಒದಗಿಸಿದರು. 1-0 ಲೀಡ್‌ನೊಂದಿಗೆ ಮೊದಲಾರ್ಧ ಮುಗಿಸುವ ವಿಶ್ವಾಸದಲ್ಲಿದ್ದ ಪೋರ್ಚುಗಲ್‌ಗೆ 45+5ನೇ ನಿಮಿಷದಲ್ಲಿ ಆಘಾತ ಎದುರಾಯಿತು. ಕಾಂಗೋ ಪರ ಯೊವಾನೆ ವಿಸ್ಸಾ ಆಕರ್ಷಕ ಗೋಲು ಗಳಿಸಿ, ತಂಡ ಸಮಬಲ ಸಾಧಿಸಲು ನೆರವಾದರು.
ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಪೋರ್ಚುಗಲ್‌ಗೆ ಸಾಧ್ಯವಾಗಲಿಲ್ಲ. 68 ಹಾಗೂ 73ನೇ ನಿಮಿಷಗಳಲ್ಲಿ ರೊನಾಲ್ಡೋಗೆ ಗೋಲು ಬಾರಿಸುವ ಅವಕಾಶ ಸಿಕ್ಕಿತಾದರೂ, ಚೆಂಡು ಗೋಲು ಪೆಟ್ಟಿಗೆ ಸೇರಲಿಲ್ಲ. ಪೋರ್ಚುಗಲ್‌ನ ಡಿಫೆಂಡರ್‌ಗಳು, ಕಾಂಗೋಗೆ ಮತ್ತೊಂದು ಗೋಲು ಗಳಿಸಲು ಅವಕಾಶ ನೀಡದೆ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಪಂದ್ಯದ ಬಳಿಕ ಮಾತನಾಡಿದ ಕಾಂಗೋ ತಂಡ ಮಿಡ್‌ಫೀಲ್ಡರ್, ರೊನಾಲ್ಡೋಗಿಂತ 20 ವರ್ಷ ಸಣ್ಣವರಾದ ಎಗಲ್ ಅಯೆಲ್ ಮುಕಾವು, ‘ರೊನಾಲ್ಡೋ ಮೊದಲಿನಷ್ಟು ಅಪಾಯಕಾರಿ ಅಲ್ಲ ಎನ್ನುವುದು ನಮಗೆ ತಿಳಿದಿದೆ. ಅವರು ಮೊದಲಿಗಿಂತ ಕಡಿಮೆ ಓಡುತ್ತಾರೆ. ಕಡಿಮೆ ಪರಿಶ್ರಮ ಹಾಕುತ್ತಾರೆ. ಹೀಗಾಗಿ, ನಮ್ಮ ಡಿಫೆಂಡರ್‌ಗಳಿಗೆ ರೊನಾಲ್ಡೋರನ್ನು ನಿಯಂತ್ರಿಸುವ ಕೆಲಸ ಸುಲಭವಾಯಿತು’ ಎಂದರು.
ಕ್ರಿಸ್ಟಿಯಾನೋ ರೊನಾಲ್ಡೋ ಪೋರ್ಚುಗಲ್ ಪರ ವಿಶ್ವಕಪ್, ಯುರೋ ಕಪ್‌ನ ಕಳೆದ 10 ಪಂದ್ಯಗಳಲ್ಲಿ ಒಂದೂ ಗೋಲು ಗಳಿಸಿಲ್ಲ. 2022ರ ಫಿಫಾ ವಿಶ್ವಕಪ್‌ನ 4 ಪಂದ್ಯ, 2024ರ ಯುರೋ ಕಪ್‌ನಲ್ಲಿ 5, 2026ರ ಫಿಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ರೊನಾಲ್ಡೋರಿಂದ ಗೋಲು ದಾಖಲಾಗಿಲ್ಲ.
ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ಮೂಲದ 98 ಆಟಗಾರರಿದ್ದಾರೆ. ವಿಶ್ವಕಪ್‌ಗೆ ಆಗಮಿಸಿರುವ ಒಟ್ಟು 1248 ಆಟಗಾರರ ಪೈಕಿ, 98 ಜನ ಫ್ರಾನ್ಸ್ ಮೂಲದವರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ವಿಶ್ವಕಪ್‌ನಲ್ಲಿರುವ ಒಟ್ಟು ಆಟಗಾರರ ಪೈಕಿ ಶೇ.8ರಷ್ಟು ಮಂದಿ ಫ್ರಾನ್ಸ್‌ನವರೇ ಇರುವುದು ವಿಶೇಷ. ನೆದರ್‌ಲೆಂಡ್ಸ್ ಮೂಲದ 67, ಜರ್ಮನಿ ಮೂಲದ 50 ಆಟಗಾರರು ಸಹ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.