
ಬ್ಯೂನಸ್ ಐರಿಸ್(ಫೆ.11): ಇತ್ತೀಚೆಗಷ್ಟೇ ನಿಧನರಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಆ ಕುರಿತಂತೆ ಅರ್ಜೆಂಟೀನಾ ಸರ್ಕಾರ ತನಿಖೆ ಆರಂಭಿಸಿದೆ.
ಡಿಯಾಗೋ ಮರಡೋನಾ ಕೊನೆಯುಸಿರೆಳೆಯುವ ಒಂದು ವಾರದ ಮೊದಲು ಅವರು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ನಂತರ ಅವರಿಗೆ ನೀಡಿದ್ದ ಚಿಕಿತ್ಸೆಯಲ್ಲಿ ಲೋಪವಾಗಿರುವ ಬಗ್ಗೆ ಶಂಕೆ ಆರಂಭವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ, ಮರಡೋನಾ ಅವರ ಮನೋವೈದ್ಯ, ಚಿಕಿತ್ಸೆ ನೀಡಿದ್ದ ಇಬ್ಬರು ನರ್ಸ್‌ಗಳನ್ನು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಅರ್ಜೆಂಟೀನಾ ನೋಟಿನ ಮೇಲೆ ಮರಡೋನಾ ಚಿತ್ರ?
ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಮರಡೋನಾ ಕಳೆದ ನವೆಂಬರ್ 25ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮರಡೋನಾ ಲಿವರ್, ಕಿಡ್ನಿ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೀಗ ತನಿಖಾಧಿಕಾರಿಗಳು ಮರಡೋನಾಗೆ ಶುಶ್ರೂಷೆ ಮಾಡಿದ ಐವರು ಸಿಬ್ಬಂದಿಗಳ ಪೈಕಿ ಕಾಳಜಿ ತೋರುವ ವಿಚಾರದಲ್ಲಿ ಕರ್ತವ್ಯ ಲೋಪ ಮಾಡಿದ್ದರೇ ಎನ್ನುವ ಕುರಿತಂತೆ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ.
ಮರಡೋನಾ ನಿಧನಕ್ಕೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಡಿಯಾಗೋ ಮರಡೋನಾ ನಿಧನದ ಬೆನ್ನಲ್ಲೇ ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೋ ಫರ್ನಾಂಡೀಸ್ ರಾಷ್ಟ್ರಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದರು. ಇದರ ಜತೆಗೆ ಅರ್ಜೆಂಟೀನಾ ಅಧ್ಯಕ್ಷೀಯ ಅರಮನೆಯಲ್ಲಿ ಮರಡೋನಾ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.