
ದೋಹಾ(ನ.25): ಸ್ಪೇನ್‌ಯ ಯುವ ಪಡೆ ವಿಶ್ವಕಪ್ ಅಭಿಯಾನವನ್ನು ಟಾಪ್ ಗೇರ್‌ನಲ್ಲಿ ಆರಂಭಿಸಿದೆ. ಕೋಸ್ಟರಿಕಾ ವಿರುದ್ಧ ಬುಧವಾರ ರಾತ್ರಿ ನಡೆದ ಗುಂಪು ‘ಇ’ ಪಂದ್ಯವನ್ನು 7-0 ಗೋಲುಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ತಂಡದ ಜನಪ್ರಿಯ ಟಿಕಿ-ಟಾಕ ಶೈಲಿಯ ಆಟಕ್ಕೆ ದೊಡ್ಡ ಯಶಸ್ಸು ದೊರೆಯಿತು.
ಡ್ಯಾನಿ ಒಲ್ಮೊ (11ನೇ ನಿಮಿಷ), ಮಾರ್ಕೊ ಅಸ್ಸೆನ್ಸಿಯೋ(21ನೇ ನಿ.,) ಹಾಗೂ ಫೆರ್ರಾನ್ ಟೋರ್ರೆಸ್(31ನೇ ನಿ., ಪೆನಾಲ್ಟಿ) ಮೊದಲ 31 ನಿಮಿಷಗಳಲ್ಲೇ ತಲಾ ಒಂದೊಂದು ಗೋಲು ಬಾರಿಸಿ ಕೋಸ್ಟರಿಕಾ ಮೇಲೆ ಒತ್ತಡ ಹೇರಿದರು. ಟೋರ್ರೆಸ್(54ನೇ ನಿ.,), ಪಾಬ್ಲೋ ಗಾವಿ(74ನೇ ನಿ.,), ಕಾರ್ಲೊಸ್ ಸೋಲರ್(90ನೇ ನಿ.,) ಹಾಗೂ ಇವಾರೊ ಮೊರಾಟ(92ನೇ ನಿ.,) ದ್ವಿತೀಯಾರ್ಧದಲ್ಲಿ ತಂಡದ ಮುನ್ನಡೆ ಹೆಚ್ಚಿಸಿದರು.
7 ಗೋಲು ಬಾರಿಸಿದ ಸ್ಪೇನ್‌ಗಿದು ವಿಶ್ವಕಪ್‌ನಲ್ಲಿ ಅತಿದೊಡ್ಡ ಗೆಲುವು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತು ದಾಟದ ಸ್ಪೇನ್, ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಮೊದಲ ಪಂದ್ಯದಲ್ಲೇ ಅಬ್ಬರಿಸಿ ಎದುರಾಳಿಗೆ ಎಚ್ಚರಿಕೆ ನೀಡಿದೆ.
ವಿಶ್ವಕಪ್‌ನಲ್ಲಿ 100 ಗೋಲು ಬಾರಿಸಿದ 6ನೇ ತಂಡ ಸ್ಪೇನ್!
ಡ್ಯಾನಿ ಒಲ್ಮೊ ಬಾರಿಸಿದ ಗೋಲು, ವಿಶ್ವಕಪ್‌ನಲ್ಲಿ ಸ್ಪೇನ್‌ನ 100ನೇ ಗೋಲು ಎನಿಸಿತು. ಈ ಮೈಲಿಗಲ್ಲು ತಲುಪಿದ ಕೇವಲ 6 ತಂಡ ಸ್ಪೇನ್. ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ, ಇಟಲಿ ಹಾಗೂ ಫ್ರಾನ್ಸ್ ಈ ಮೊದಲು 100 ಗೋಲುಗಳ ಸಾಧನೆ ಮಾಡಿದ್ದವು.
ಗೋಲು ಬಾರಿಸಿದ 3ನೇ ಅತಿಕಿರಿಯ ಆಟಗಾರ ಗಾವಿ!
ಫಿಫಾ ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ 3ನೇ ಅತಿಕಿರಿಯ ಆಟಗಾರ ಎನ್ನುವ ಹಿರಿಮೆಗೆ ಸ್ಪೇನ್‌ನ ಪಾಬ್ಲೊ ಗಾವಿ ಪಾತ್ರರಾಗಿದ್ದಾರೆ. 1958ರಲ್ಲಿ ಪೀಲೆ (17 ವರ್ಷ 249 ದಿನ ವಯಸ್ಸು) ಬಳಿಕ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆಗೆ ಗಾವಿ ಪಾತ್ರರಾಗಿದ್ದಾರೆ. 1930ರಲ್ಲಿ 18 ವರ್ಷದ ಮೆಕ್ಸಿಕೋ ಆಟಗಾರ ಮ್ಯಾನುಯಲ್ ರೊಸಾಸ್ ಗೋಲು ಬಾರಿಸಿದ್ದರು.
Fifa World Cup ಕ್ರಿಸ್ಟಿಯಾನೋ ರೋನಾಲ್ಡೋಗೆ ಶಾಕ್, 2 ಪಂದ್ಯದಿಂದ ಬ್ಯಾನ್, 50 ಲಕ್ಷ ರೂ ದಂಡ!
ಪಂದ್ಯದಲ್ಲಿ 1,003 ಪಾಸ್, 17 ಗೋಲು ಗಳಿಸುವ ಯತ್ನ!
ಸ್ಪೇನ್‌ನ ಟಿಕಿ-ಟಾಕ ಆಟದ ಶೈಲಿಯ ಮುಂದೆ ಕೋಸ್ಟರಿಕಾ ಅಕ್ಷರಶಃ ಮೂಖ ವಿಸ್ಮತಗೊಂಡಿತು. ಪಂದ್ಯದ ಆರಂಭದಿಂದಲೇ ಸ್ಪೇನ್ ಹಿಡಿತ ಸಾಧಿಸಿತು. 90 ನಿಮಿಷಗಳ ಆಟದಲ್ಲಿ ಬರೋಬ್ಬರಿ 1003 ಪಾಸ್‌ಗಳನ್ನು ಪೂರ್ಣಗೊಳಿಸಿದ ಸ್ಪೇನ್ ಹೊಸ ದಾಖಲೆ ಬರೆಯಿತು. ಜೊತೆಗೆ 17 ಬಾರಿ ಗೋಲು ಗಳಿಸುವ ಯತ್ನವನ್ನೂ ನಡೆಸಿತು. ಪಂದ್ಯದಲ್ಲಿ ಶೇ.75ರಷ್ಟು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸ್ಪೇನ್, ಕೋಸ್ಟರಿಕಾಕ್ಕೆ ಒಮ್ಮೆಯೂ ಗೋಲು ಗಳಿಸಲು ಪ್ರಯತ್ನ ನಡೆಸಲು ಬಿಡಲಿಲ್ಲ.
ಏನಿದು ಟಿಕಿ-ಟಾಕ ಶೈಲಿ?
ಸಣ್ಣ ಸಣ್ಣ ಪಾಸ್‌ಗಳ ಮೂಲಕ ನಿರಂತರವಾಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ವಿವಿಧ ದಿಕ್ಕುಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಕೊಂಡೊಯ್ಯುವ ತಂತ್ರವೇ ಟಿಕಿ-ಟಾಕ. 2006ರಿಂದ ಈ ಸ್ಪೇನ್ ಈ ಆಟದ ಶೈಲಿಯನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. 90ರ ದಶಕದಲ್ಲೇ ಈ ಆಟದ ಶೈಲಿ ಪರಿಚಯಗೊಂಡಿತ್ತಾದರೂ 2006ರ ಸಮಯದಲ್ಲಿ ಕೋಚ್‌ಗಳಾಗಿದ್ದ ಲೂಯಿಸ್ ಅರಾಗೋನೆಸ್ ಹಾಗೂ ವಿಸ್ಸೆಂಟೆ ಡೆಲ್ ಬೊಶ್ಕಾ ಈ ಶೈಲಿಗೆ ಹೆಚ್ಚು ಒತ್ತು ನೀಡಿ ಜನಪ್ರಿಯಗೊಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.