FIFA World Cup: ಪಂದ್ಯ ವೀಕ್ಷಿಸಿದ ಬಳಿಕ ಸ್ಟೇಡಿಯಂ ಸ್ವಚ್ಚ ಮಾಡಿದ ಜಪಾನ್ ಫ್ಯಾನ್ಸ್‌..! ಇವರು ನಮಗೂ ಸ್ಪೂರ್ತಿಯಲ್ಲವೇ?

By Naveen Kodase  |  First Published Nov 24, 2022, 11:49 AM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವಚ್ಚತೆಯ ಪಾಠ ಹೇಳಿದ ಜಪಾನಿ ಫ್ಯಾನ್ಸ್‌
ಕತಾರ್ ಹಾಗೂ ಈಕ್ವೆಡಾರ್ ನಡುವಿನ ಪಂದ್ಯ ಮುಕ್ತಾಯವಾದ ಬಳಿಕ ಸ್ಟೇಡಿಯಂ ಕ್ಲೀನ್
ಇದು ಕ್ಯಾಮರ ಮುಂದೆ ಫೋಸ್ ಕೊಡಲು ಮಾಡುತ್ತಿರುವುದಲ್ಲವೆಂದ ಜಪಾನಿ ಫ್ಯಾನ್ಸ್


ದೋಹಾ(ನ.24): ಜಗತ್ತಿನ ಅತಿದೊಡ್ಡ ಫುಟ್ಬಾಲ್ ಹಬ್ಬ, ಫಿಫಾ ವಿಶ್ವಕಪ್ ಟೂರ್ನಿಯು ಕತಾರ್‌ನಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ. ಈಗಾಗಲೇ ಕೆಲವು ಪಂದ್ಯಗಳು ಹಲವು ಅಚ್ಚರಿಯ ಫಲಿತಾಂಶಗಳಿಗೂ ಸಾಕ್ಷಿಯಾಗಿದ್ದನ್ನು ನಾವೆಲ್ಲಾ ನೋಡಿದ್ದೇವೆ. ಇದೆಲ್ಲದರ ನಡುವೆ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ಮುಕ್ತಾಯವಾದ ಬಳಿಕ ದಾಖಲಾದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೌದು, ಫಿಫಾ ವಿಶ್ವಕಪ್ ಟೂರ್ನಿಯ ಕತಾರ್ ಹಾಗೂ ಈಕ್ವೆಡಾರ್ ನಡುವಿನ ಪಂದ್ಯ ಮುಕ್ತಾಯವಾದ ಬಳಿಕ ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸಿದ ಜಪಾನ್ ಅಭಿಮಾನಿಗಳು, ಯಾವುದೇ ಪ್ರಚಾರದ ಹಂಗಿಲ್ಲದೇ ತಮ್ಮ ಪಾಡಿಗೆ ತಾವು ಸ್ಟೇಡಿಯಂನಲ್ಲಿನ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ಕುರಿತಂತೆ ಬೆಹರೇನ್‌ನ ಪತ್ರಕರ್ತರಾದ ಒಮರ್ ಫಾರೂಕ್‌, ಯಾಕೆ ನೀವು ಹೀಗೆ ಸ್ಟೇಡಿಯಂ ಸ್ವಚ್ಚಗೊಳಿಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ, ಆ ಜಪಾನಿಗರು, ಹೀಗೆ ಮುಕ್ತವಾದ ಸ್ಥಳದಲ್ಲಿ ಕಸಗಳನ್ನು ಬಿಡುವುದು ಒಳ್ಳೆಯದಲ್ಲ. ಹೀಗಾಗಿ ಸ್ವಚ್ಚ ಮಾಡುತ್ತಿದ್ದೇವೆ ಎಂದು ಉತ್ತರಿಸಿ ತಮ್ಮ ಕಾರ್ಯ ಮುಂದುವರೆಸಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Japan fans cleaning the stadium before they leave. 👏pic.twitter.com/3IzwdkR13r

— Paul, Manc Bald and Bred (@MufcWonItAll)

Latest Videos

undefined

ಕತಾರ್ ಹಾಗೂ ಈಕ್ವೆಡಾರ್ ನಡುವಿನ ಪಂದ್ಯ ಮುಕ್ತಾಯವಾದ ಬಳಿಕ ಹಲವು ಫುಟ್ಬಾಲ್ ಅಭಿಮಾನಿಗಳು ತಿಂಡಿ-ತಿನಿಸುಗಳ ಪೊಟ್ಟಣಗಳನ್ನು ಹೇಗೆ ಬೇಕೋ ಹಾಗೆ ತಿಂದು ಅಲ್ಲಿಯೇ ಬಿಟ್ಟು ಹೋಗಿದ್ದರು. ಆದರೆ ಈ ಜಪಾನಿ ಫುಟ್ಬಾಲ್ ಅಭಿಮಾನಿಗಳು, ಆಹಾರದ ಪಾಕೆಟ್‌ಗಳು, ಪ್ಲಾಸ್ಟಿಕ್ಸ್, ಗ್ಲಾಸ್ ಮತ್ತು ಬಾಟೆಲ್‌ಗಳನ್ನು ಪ್ಲಾಸ್ಟಿಕ್‌ ಕವರ್‌ಗಳಿಗೆ ತುಂಬುವ ಮೂಲಕ ಅರ್ಥಪೂರ್ಣವಾಗಿಯೇ ಜಗತ್ತಿಗೆ ಸ್ವಚ್ಚತಾ ಪಾಠ ಹೇಳಿ ಕೂಡುವಲ್ಲಿ ಯಶಸ್ವಿಯಾಗಿದ್ದಾರೆ. 

FIFA World Cup 2022: 'ಜಾಸ್ತಿ ಕಿರುಚಾಡ್ಬೇಡಿ..!' ಇಂಗ್ಲೆಂಡ್‌ ಫ್ಯಾನ್ಸ್‌ಗಳಿಗೆ ಕತಾರ್‌ ಪೊಲೀಸರ ವಾರ್ನಿಂಗ್‌!

Japan fans stayed behind to clean all rubbish in the stadium and bag it up.

pic.twitter.com/i0p23AROih

— zack💚 FAST GOALS (@GoalsZack)

ಹೀಗೆ ಸ್ವಚ್ಚತಾ ಕೆಲಸ ಮಾಡುತ್ತಲೇ ಪ್ರತಿಕ್ರಿಯಿಸಿದ ಜಪಾನಿನ ಅಭಿಮಾನಿಯೊಬ್ಬ, ನಾವಿರುವ ನೆಲವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಮುಂದುವರೆದು ಇದು ಕ್ಯಾಮರಾಗಳಿಗೆ ಫೋಸ್ ಕೊಡುವ ಉದ್ದೇಶದಿಂದ ಮಾಡುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದೆಲ್ಲವನ್ನು ಹತ್ತಿರದಿಂದ ಗಮನಿಸುತ್ತಿದ್ದ ಬೆಹರೇನ್‌ನ ಪತ್ರಕರ್ತ ಕೂಡಾ ಜಪಾನಿಗರ ಜತೆ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿದರು. 

ನಮ್ಮ ದೇಶದಲ್ಲೂ ಸ್ವಚ್ಚ ಭಾರತ್ ಅಭಿಯಾನ ಚಾಲ್ತಿಯಲ್ಲಿದ್ದರೂ, ಇನ್ನೂ ಎಲ್ಲಿ ಬೇಕಾದಲ್ಲಿ ಕಸ ಸುರಿಯುವುದು, ಪಾನ್ ಉಗಿಯುವುದು ಅವ್ಯಾಹತವಾಗಿ ಮುಂದುವರೆದಿದೆ. ಇಲ್ಲಿ ಕಸ ಎಸೆದರೆ, ಉಗಿದರೇ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆ ಕೇವಲ ಎಚ್ಚರಿಕೆಯಾಗಿಯೇ ಉಳಿದಿದೆಯೇ ಹೊರತು, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಎಲ್ಲಿಯವರೆಗೆ ಇದು ನಮ್ಮ ದೇಶ, ನಮ್ಮ ನೆಲ ಎನ್ನುವ ಅಭಿಮಾನ ಕೇವಲ ಭಾಷಣಕ್ಕೆ ಸೀಮಿತವಾಗಿರದೇ ಕಾರ್ಯರೂಪಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಯಾವ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ನೀವೇನಂತೀರಾ..?

click me!