ಫಿಫಾ ವಿಶ್ವಕಪ್ ಸೆಮೀಸ್‌ನಲ್ಲಿಂದು ಅರ್ಜೆಂಟೀನಾ ಹಾಗೂ ಕ್ರೊವೇಷಿಯಾ ಕದನ
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾಕ್ಕೆ ಫೈನಲ್‌ಗೇರುವ ತವಕ
ಸತತ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್‌ಗೇರುವ ವಿಶ್ವಾಸದಲ್ಲಿ ಕ್ರೊವೇಷಿಯಾ
ಲುಸೈಲ್(ಡಿ.13): ಫಿಫಾ ವಿಶ್ವಕಪ್ ನೋಡನೋಡುತ್ತಿದ್ದಂತೆ ಉಪಾಂತ್ಯಕ್ಕೆ ತಲುಪಿದೆ. 32 ತಂಡಗಳೊಂದಿಗೆ ಶುರುವಾದ 2022ರ ಟೂರ್ನಿಯಲ್ಲೀಗ ಕೇವಲ 4 ತಂಡಗಳು ಉಳಿದುಕೊಂಡಿದ್ದು, ಮಂಗಳವಾರ ಮೊದಲ ಸೆಮಿಫೈನಲ್‌ನಲ್ಲಿ 2014ರ ರನ್ನರ್-ಅಪ್ ಅರ್ಜೆಂಟೀನಾ ಹಾಗೂ 2018ರ ರನ್ನರ್-ಅಪ್ ಕ್ರೊವೇಷಿಯಾ ತಂಡಗಳು ಸೆಣಸಲಿವೆ.
ಕಳೆದೆರಡು ಪಂದ್ಯಗಳನ್ನು ಪೆನಾಲ್ಟಿಶೂಟೌಟ್‌ನಲ್ಲಿ ಗೆದ್ದಿರುವ ಕ್ರೊವೇಷಿಯಾದಿಂದ ಮತ್ತೊಂದು ಭರ್ಜರಿ ಪ್ರದರ್ಶನ ನಿರೀಕ್ಷೆ ಮಾಡಲಾಗಿದೆ. ಕೊನೆವರೆಗೂ ಹೋರಾಟ ಬಿಡದೆ ಗೆಲ್ಲಲು ಒಂದಿಲ್ಲೊಂದು ದಾರಿ ಹುಡುಕಿಕೊಳ್ಳುವುದು ಕ್ರೊವೇಷಿಯಾಗೆ ಕರಗತವಾದಂತಿದೆ. ಕಳೆದ ಆವೃತ್ತಿಯ ನಾಕೌಟ್ ಪಂದ್ಯಗಳಲ್ಲೂ ಕ್ರೊವೇಷಿಯಾ ಹೆಚ್ಚುವರಿ ಸಮಯ ಹಾಗೂ ಶೂಟೌಟ್‌ಗಳಲ್ಲಿ ಗೆದ್ದು ಫೈನಲ್‌ಗೇರಿತ್ತು. ಈಗಾಗಲೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆನಿಸಿದ್ದ ಬ್ರೆಜಿಲ್, ಬೆಲ್ಜಿಯಂ ತಂಡಗಳನ್ನು ಹೊರಹಾಕಿರುವ ಕ್ರೊವೇಷಿಯಾ, ಮತ್ತೊಂದು ಫೇವರಿಟ್ ತಂಡ ಅರ್ಜೆಂಟೀನಾಕ್ಕೂ ಮನೆ ದಾರಿ ತೋರಿಸಲು ಕಾತರಿಸುತ್ತಿದೆ.
ಅರ್ಜೆಂಟೀನಾ ಸಹ ಸೆಮೀಸ್‌ಗೆ ಸಾಗಿ ಬಂದಿರುವ ರೀತಿ ಯಾವುದೇ ತಂಡಕ್ಕಾದರೂ ಸ್ಫೂರ್ತಿ ತುಂಬದೆ ಇರುವುದಿಲ್ಲ. ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾಗೆ ಶರಣಾಗಿ ಭಾರೀ ಆಘಾತಕ್ಕೆ ಗುರಿಯಾದ ಲಿಯೋನೆಲ್ ಮೆಸ್ಸಿ ಪಡೆ, ಆ ನಂತರ ಸೋಲನ್ನೇ ಕಂಡಿಲ್ಲ. ಈ ಟೂರ್ನಿಯಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳಲ್ಲಿ ಗೋಲು ಬಾರಿಸಿರುವ ಅರ್ಜೆಂಟೀನಾಗೆ ಕ್ರೊವೇಷಿಯಾದ ಗೋಲ್‌ಕೀಪರ್ ಡೊಮಿನಿಕ್ ಲಿವಕೊವಿಚ್‌ರಿಂದ ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ತಾಯಿ ಜೊತೆ ಮೊರಾಕ್ಕೊ ಫುಟ್ಬಾಲಿಗ ಸೋಫಿಯಾನ್ ಬೂಫಾಲ್ ಸಂಭ್ರಮ!
ಗುಂಪು ಹಂತದಲ್ಲಿ ಲಿವಕೋವಿಚ್ ಎರಡು ಕ್ಲೀನ್ ಶೀಟ್‌ಗಳನ್ನು ಪಡೆದಿದ್ದರು. ಬಳಿಕ ಪ್ರಿ ಕ್ವಾರ್ಟರ್‌ನಲ್ಲಿ ಜಪಾನ್ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ ಶೂಟೌಟ್‌ನಲ್ಲಿ ಮನಮೋಹಕ ಪ್ರದರ್ಶನ ತೋರಿ, ತಂಡ ಸೆಮೀಸ್ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈಗಾಗಲೇ ಟೂರ್ನಿಯಲ್ಲಿ 4 ಗೋಲು ಹೊಡೆದಿರುವ ಮೆಸ್ಸಿ ಹಾಗೂ ಲಿವಕೋವಿಚ್ ನಡುವಿನ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ.
ಮೆಸ್ಸಿ-ಮೊಡ್ರಿಚ್!
ದಿಗ್ಗಜ ಫುಟ್ಬಾಲಿಗರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಹಾಗೂ ಕ್ರೊವೇಷಿಯಾದ ಲೂಕಾ ಮೊಡ್ರಿಚ್ ತಮ್ಮ ತಂಡಗಳನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಕನಸಿಟ್ಟುಕೊಂಡಿದ್ದಾರೆ. ಇಬ್ಬರೂ ಬಹುತೇಕ ಕೊನೆ ವಿಶ್ವಕಪ್ ಆಡುತ್ತಿದ್ದು, ಇವರ ನಡುವಿನ ಪೈಪೋಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅರ್ಜೆಂಟೀನಾ ಸೆಮೀಸ್ ಹಾದಿ
ಗುಂಪು ಹಂತ
ಸೌದಿ ವಿರುದ್ಧ 1-2 ಸೋಲು
ಮೆಕ್ಸಿಕೋ ವಿರುದ್ಧ 2-0 ಜಯ
ಪೋಲೆಂಡ್ ವಿರುದ್ಧ 2-0 ಜಯ
ಪ್ರಿ ಕ್ವಾರ್ಟರ್
ಆಸ್ಪ್ರೇಲಿಯಾ ವಿರುದ್ಧ 2-1 ಜಯ
ಕ್ವಾರ್ಟರ್ ಫೈನಲ್
ಡಚ್ ವಿರುದ್ಧ ಶೂಟೌಟಲ್ಲಿ 4-3 ಜಯ
--
ಕ್ರೊವೇಷಿಯಾ ಸೆಮೀಸ್ ಹಾದಿ
ಗುಂಪು ಹಂತ
ಮೊರಾಕ್ಕೊ ವಿರುದ್ಧ 0-0 ಡ್ರಾ
ಕೆನಡಾ ವಿರುದ್ಧ 4-1 ಜಯ
ಬೆಲ್ಜಿಯಂ ವಿರುದ್ಧ 0-0 ಡ್ರಾ
ಪ್ರಿ ಕ್ವಾರ್ಟರ್
ಜಪಾನ್ ವಿರುದ್ಧ ಶೂಟೌಟಲ್ಲಿ 3-1 ಜಯ
ಕ್ವಾರ್ಟರ್ ಫೈನಲ್
ಬ್ರೆಜಿಲ್ ವಿರುದ್ಧ ಶೂಟೌಟಲ್ಲಿ 4-2 ಜಯ
ಸೆಮೀಸ್‌ನಲ್ಲಿ ಸೋಲೇ ಕಾಣದ ಅರ್ಜೆಂಟೀನಾ!
ಅರ್ಜೆಂಟೀನಾ ಇದುವರೆಗೂ ಫಿಫಾ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲಿ ಆಡಿದ್ದು, ಎಲ್ಲಾ ಬಾರಿಯೂ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 1978, 1986ರಲ್ಲಿ ತಂಡ ಚಾಂಪಿಯನ್ ಆಗಿದ್ದರೆ, 1930, 1990 ಹಾಗೂ 2014ರಲ್ಲಿ ರನ್ನರ್-ಆಪ್ ಆಗಿತ್ತು. ತಂಡ ಈ ಬಾರಿ 6ನೇ ಫೈನಲ್ ಮೇಲೆ ಕಣ್ಣಿಟ್ಟಿದೆ.